20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಉದ್ಘಾಟನೆ
ಶಿವಮೊಗ್ಗ
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಶರಣರು ಸಮಾಜಕ್ಕೆ ನೀಡಿದ ಸಮಾನತೆ, ಕಾಯಕ, ದಾಸೋಹ, ದಯೆ ಮತ್ತು ಮಾನವೀಯತೆಯ ಸಂದೇಶಗಳು ಇಂದಿನ ಆಧುನಿಕ ಜಗತ್ತಿಗೂ ದಾರಿದೀಪವಾಗಿವೆ, ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಉಪಕುಲಪತಿ ಎಂ.ವಿ. ಧನಂಜಯ ಅವರು ಹೇಳಿದರು.
ನಗರದ ಬಸವಕೇಂದ್ರದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗದ ಆಶ್ರಯದಲ್ಲಿ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿದ ಧನಂಜಯ, ವಚನವೆಂದರೆ ಕೇವಲ ಸಾಹಿತ್ಯಿಕ ಅಭಿವ್ಯಕ್ತಿಯಲ್ಲ. ಅದೊಂದು ಜೀವನದರ್ಶನ, ಆತ್ಮಸಾಕ್ಷಿಯ ಧ್ವನಿ. ವ್ಯಕ್ತಿಯ ನಿತ್ಯದ ನಡೆ-ನುಡಿ, ಕುಟುಂಬದ ಸಂಬಂಧಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ವಿಶ್ವದ ಒಳಿತಿನ ಕುರಿತು ಚಿಂತನೆಗೆ ಪ್ರೇರಣೆ ನೀಡುವ ಶಕ್ತಿಯಾಗಿದೆ. ಧಾರ್ಮಿಕ ಉಪದೇಶಕ್ಕೆ ಮಾತ್ರ ಸೀಮಿತವಾಗದೆ ವ್ಯಕ್ತಿ, ಸಮಾಜ ಮತ್ತು ವಿಶ್ವದ ಪರಿವರ್ತನೆಗೆ ಮಾರ್ಗದರ್ಶನ ನೀಡುವ ವಿಶಿಷ್ಟ ಸಾಹಿತ್ಯ ವಚನ ಸಾಹಿತ್ಯವಾಗಿದೆ ಎಂದರು.

ಬಸವಣ್ಣನವರು ಕನ್ನಡ ನಾಡಿನ ಮಹಾನ್ ದಾರ್ಶನಿಕರು, ಸಮಾಜ ಸುಧಾರಕರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರು.
ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ವೈಚಾರಿಕ ಸ್ವಾತಂತ್ರ್ಯದ ಆಶಯಗಳನ್ನು ಜಗತ್ತಿಗೆ ಸಾರಿದರು.
ಸಾಮಾಜಿಕ ಬದಲಾವಣೆಗೆ ಚಿಂತನೆ ಮತ್ತು ಸಂವಾದದ ವೇದಿಕೆ ಅಗತ್ಯವೆಂದು ತೋರಿಸಿಕೊಟ್ಟ ಅನುಭವ ಮಂಟಪವು ಜಗತ್ತಿನ ಆರಂಭಿಕ ಜನಸಂಸತ್ತುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
ಇಂದಿನ 21ನೇ ಶತಮಾನದಲ್ಲಿಯೂ ದ್ವೇಷ, ಅಸೂಯೆ, ಅಸಮಾನತೆ ಮತ್ತು ಜಾತೀಯತೆಗಳು ಸಮಾಜದಲ್ಲಿ ಕಾಣಿಸುತ್ತಿರುವಾಗ, ಹನ್ನೆರಡನೇ ಶತಮಾನದಲ್ಲಿಯೇ ಇಂತಹ ವಿಶಾಲ ಚಿಂತನೆಗಳನ್ನು ರೂಪಿಸಿದ ಬಸವಣ್ಣನವರ ದೂರದೃಷ್ಟಿಯನ್ನು ನಾವು ಅರಿಯಬೇಕು ಎಂದು ಹೇಳಿದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಗೌರವಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ವಚನ ಸಾಹಿತ್ಯ ಕನ್ನಡದ ಅಸ್ಮಿತೆಯೂ ಹೌದು.

ಜನರ ಭಾಷೆಯಲ್ಲಿಯೇ ಜನರಿಗಾಗಿ, ಜನರಿಂದ ರೂಪುಗೊಂಡ ಸರಳ ಮತ್ತು ಅರ್ಥಪೂರ್ಣ ಸಾಹಿತ್ಯ ಬೇರೆಡೆ ಇಷ್ಟು ವ್ಯಾಪಕವಾಗಿ ಕಾಣುವುದು ಅಪರೂಪ. ಶರಣರು ಸಮಾಜದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.
ಈ ಸಾಹಿತ್ಯಕ್ಕೆ ಇನ್ನಷ್ಟು ಪ್ರಚಾರ ನೀಡುವುದರ ಜೊತೆಗೆ ಯುವಜನರಲ್ಲಿ ಅದರ ಅರಿವು ಮೂಡಿಸಿ, ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
20ನೇ ವರ್ಷದ ಚಿಂತನ ಕಾರ್ತಿಕದ ಆಶಯವನ್ನು ಶ್ಲಾಘಿಸಿದ ಅವರು, ಕಳೆದ ಹಲವು ವರ್ಷಗಳಿಂದ ಗುರುಗಳು ನಿರಂತರವಾಗಿ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಮಾಜದಲ್ಲಿ ಜ್ಞಾನ ಮತ್ತು ವಿಚಾರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕಾರ್ತಿಕ ಮಾಸ ಬೆಳಕಿನ ಸಂಕೇತ. ಆದರೆ ನಿಜವಾದ ಬೆಳಕು ಕೇವಲ ದೀಪಗಳಿಂದ ಬರುವುದಿಲ್ಲ. ಪ್ರತಿಯೊಬ್ಬರ ಅಂತರಂಗದಲ್ಲಿ ಜ್ಞಾನದೀಪ ಬೆಳಗಿದಾಗ ಮಾತ್ರ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದರು.
ಈ ಒಂದು ತಿಂಗಳ ಕಾರ್ಯಕ್ರಮ ಕೇವಲ ಉಪನ್ಯಾಸಗಳ ಸರಣಿಯಾಗಿ ಮುಗಿಯಬಾರದು. ಅದು ಆತ್ಮಾವಲೋಕನದ ಅಭಿಯಾನವಾಗಬೇಕು.
ಚಿಂತನ ಕಾರ್ತಿಕದ ಮೂಲಕ ಗುರುಗಳು ಸಮಾಜಕ್ಕೆ ನೀಡುತ್ತಿರುವ ಸಂದೇಶ ಪ್ರತಿಯೊಂದು ಮನೆಗೂ, ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ವಚನಗಳ ಬೆಳಕು ನಮ್ಮ ಮನಸ್ಸುಗಳನ್ನು ಬೆಳಗಲಿ. ಬಸವಣ್ಣನವರ ಚಿಂತನೆಗಳು ನಮ್ಮ ಬದುಕನ್ನು ಬದಲಿಸಲಿ. ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳು ಸಮಾಜದ ಎಲ್ಲ ಸ್ತರಗಳಿಗೂ ವಿಸ್ತರಿಸಲಿ.
ಹೊಸ ಚಿಂತನೆಗಳು ಹೊಸ ಅರಿವಿಗೆ ಕಾರಣವಾಗಲಿ. ಮನುಷ್ಯರನ್ನು ಜಾತಿ, ಧರ್ಮ ಮತ್ತು ಅಂತಸ್ತಿನ ಆಧಾರದಲ್ಲಿ ವಿಭಜಿಸದೆ ಮಾನವೀಯತೆಯ ದೃಷ್ಟಿಯಿಂದ ನೋಡುವ ಮನೋಭಾವ ಬೆಳೆಯಲಿ ಎಂದು ಎಂ.ವಿ. ಧನಂಜಯ ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರ, ಶಿವಮೊಗ್ಗದ ಅಧ್ಯಕ್ಷರಾದ ಜಿ. ಬೆನಕಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಸಿ. ಶಶಿಧರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಲವಕುಮಾರ್ ಅವರು ನಿರೂಪಿಸಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂದನ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹೆಚ್.ಪಿ. ಗಿರೀಶ್, ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್, ಚಂದ್ರಶೇಖರ್ ತಳಗಿಹಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶಿವಮೊಗ್ಗದ ಅಕ್ಕನ ಬಳಗದಿಂದ ವಚನಗಾಯನ ನಡೆಯಿತು. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೇವಾರ್ಥ ಕಾರ್ಯಕ್ರಮ ನೆರವೇರಿಸಲಾಯಿತು.
ವರದಿ, ಚಿತ್ರ ಕೃಪೆ: ಡಿಟೆಕ್ಟಿವ್ ನ್ಯೂಸ್
