ಮಾನ್ವಿ
ಇಡೀ ಜಗತ್ತು ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವಾಗ, ತಮ್ಮ ವಚನಗಳ ಮೂಲಕ ಸುಜ್ಞಾನದ ಬೆಳಕನ್ನು ಪಸರಿಸಿ ಜಗಜ್ಯೋತಿಯಾಗಿ ಬೆಳಗಿದವರು ಬಸವಣ್ಣನವರು ಹಾಗೂ ಬಸವಾದಿ ಶರಣರು.
ಜಾತಿ, ಧರ್ಮ, ವರ್ಗ, ವರ್ಣ ಮತ್ತು ಲಿಂಗ ತಾರತಮ್ಯಗಳನ್ನು ಖಂಡಿಸಿ, ಸಮಸಮಾಜದ ಕನಸನ್ನು ಕಂಡು, ಅದನ್ನು ತಮ್ಮ ನಡೆ-ನುಡಿಗಳ ಮೂಲಕ ಸಾಕಾರಗೊಳಿಸಲು ಶ್ರಮಿಸಿದವರು ಬಸವಾದಿ ಶರಣರು.
ಹನ್ನೆರಡನೇ ಶತಮಾನದಲ್ಲಿ ಪುರುಷ ವಚನಕಾರರಂತೆ ಮಹಿಳಾ ವಚನಕಾರ್ತಿಯರೂ ಕೂಡ ಮೂಢನಂಬಿಕೆಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿ, ಸುಜ್ಞಾನದ ಶರಧಿಯನ್ನು ಹರಿಸಿ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.
ಅಂತಹ ಶರಣ ಪರಂಪರೆಯಲ್ಲಿ ಬಂದ ಶರಣೆ ಧೂಪದ ಗೊಗ್ಗವ್ವೆ ಅವರು, ಅಕ್ಕಮಹಾದೇವಿಯವರಂತೆ ಧೈರ್ಯಶಾಲಿ, ವೈಚಾರಿಕ ಚಿಂತನೆಯುಳ್ಳ ವಚನಕಾರ್ತಿಯಾಗಿದ್ದರು.
ಅವರು ತಮ್ಮ ವಚನಗಳ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ.
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ॥
ಗಂಡು ಮೋಹಿಸಿ ಹೆಣ್ಣನ್ನು ತನ್ನದಾಗಿಸಿಕೊಂಡಾಗ, ಆಕೆ ಪುರುಷನ ಒಡೆತನದ ವಸ್ತುವೆಂಬಂತೆ ಪರಿಗಣಿಸಲ್ಪಡುವ ಸಮಾಜದ ಮನೋಭಾವವನ್ನು ಇಲ್ಲಿ ಗೊಗ್ಗವ್ವೆಯವರು ಪ್ರಶ್ನಿಸುತ್ತಾರೆ.
ಅದೇ ಹೆಣ್ಣು ಮೋಹಿಸಿ ಗಂಡನ್ನು ತನ್ನದಾಗಿಸಿಕೊಂಡರೆ, ಅದಕ್ಕೆ ಸಮಾಜದ ಉತ್ತರವೇನು? ಎಂಬ ಮರುಪ್ರಶ್ನೆಯನ್ನು ಕೇಳುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯ ದ್ವಂದ್ವ ನೀತಿಯನ್ನು ಬಯಲಿಗೆಳೆಯುತ್ತಾರೆ.
ಹೆಣ್ಣಿಗೂ ತನ್ನ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಆಕೆಯ ಇಚ್ಛೆ, ಭಾವನೆ ಮತ್ತು ಆಯ್ಕೆಗೂ ಸಮಾನ ಗೌರವ ನೀಡಬೇಕು ಎಂಬ ಸ್ತ್ರೀ ಸ್ವಾತಂತ್ರ್ಯದ ಆಶಯವನ್ನು ಈ ವಚನದಲ್ಲಿ ಕಾಣಬಹುದು.
ಕೊನೆಯದಾಗಿ, ಈ ಎರಡರ ಉಭಯ ಭೇದಗಳನ್ನು ಕಳೆದುಕೊಂಡು ಸುಖಿಯಾಗಬಲ್ಲವನೇ ಪರಿಪೂರ್ಣನು ಎಂಬ ತಾತ್ವಿಕ ನಿಲುವನ್ನು ವ್ಯಕ್ತಪಡಿಸುತ್ತಾರೆ.
ಅಂದರೆ ಗಂಡು-ಹೆಣ್ಣು ಎಂಬ ಮೇಲುಕೀಳಿನ ಭಾವನೆಗಳನ್ನು ಬದಿಗಿಟ್ಟು, ಪರಸ್ಪರ ಗೌರವ, ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕುವುದೇ ಪರಿಪೂರ್ಣ ಜೀವನ ಎಂಬ ಆಶಯವನ್ನು ಈ ವಚನದಲ್ಲಿ ಕಾಣಬಹುದು.
ಇನ್ನು ಮತ್ತೊಂದು ವಚನದಲ್ಲಿ ದೈಹಿಕ ಲಿಂಗಭೇದವನ್ನೇ ಪ್ರಶ್ನಿಸುತ್ತಾರೆ.
ಮೊಲೆ, ಮುಡಿ, ಬಂದಡೆ ಹೆಣ್ಣೆಂಬರು.
ಮೀಸೆಕಾಸೆ, ಬಂದಡೆ ಗಂಡೆಂಬರು.
ಈ ಉಭಯದ ಜ್ಞಾನ, ಹೆಣ್ಣೊ, ಗಂಡೊ, ನಾಸ್ತಿನಾಥಾ…?
ಎಂದು ಪ್ರಶ್ನಿಸುತ್ತಾರೆ.
ಹೆಣ್ಣಿನ ದೇಹದಲ್ಲಿರುವ ಮೊಲೆ ಮುಡಿ, ಮುಂತಾದ ದೈಹಿಕ ಲಕ್ಷಣಗಳನ್ನು ಕಂಡು ಆಕೆಯನ್ನು ಹೆಣ್ಣೆಂದೂ, ಗಂಡಿನ ದೇಹದಲ್ಲಿರುವ ಮೀಸೆ ಮುಂತಾದ ಲಕ್ಷಣಗಳನ್ನು ಕಂಡು ಅವನನ್ನು ಗಂಡೆಂದೂ ಗುರುತಿಸುತ್ತಾರೆ. ಆದರೆ ಈ ದೈಹಿಕ ಲಕ್ಷಣಗಳನ್ನು ಮೀರಿರುವ ಜ್ಞಾನಕ್ಕೆ ಹೆಣ್ಣು-ಗಂಡು ಎಂಬ ಭೇದವಿದೆಯೇ? ಎಂಬ ಗಂಭೀರವಾದ ಪ್ರಶ್ನೆಯನ್ನು ಗೊಗ್ಗವ್ವೆಯವರು ಮುಂದಿಡುತ್ತಾರೆ.
ದೇಹಕ್ಕೆ ಹೆಣ್ಣು-ಗಂಡು ಎಂಬ ರೂಪ ಮತ್ತು ಗುರುತುಗಳಿರಬಹುದು. ಆದರೆ ಜ್ಞಾನಕ್ಕೆ ಲಿಂಗಭೇದವಿಲ್ಲ. ಆತ್ಮಕ್ಕೆ ಹೆಣ್ಣು-ಗಂಡು ಎಂಬ ಯಾವುದೇ ಭೇದವಿಲ್ಲ. ಅದಕ್ಕೆ ನಾಮರೂಪಗಳ ಬಂಧನವೂ ಇಲ್ಲ.
ಇಂತಹ ಜ್ಞಾನಸ್ವರೂಪವನ್ನು ಅರಿತು, ಲಿಂಗಭೇದದ ಸಂಕೋಲೆಗಳನ್ನು ಮೀರಿ ಬದುಕುವುದೇ ನಿಜವಾದ ಅರಿವು, ಅದುವೇ ಪರಿಪೂರ್ಣತೆಯ ಹಾದಿ ಎಂಬ ಆಧ್ಯಾತ್ಮಿಕ ಸಂದೇಶವನ್ನು ಈ ವಚನ ಸಾರುತ್ತದೆ.
ಹೀಗೆ ಸ್ತ್ರೀ-ಪುರುಷ ಸಮಾನತೆ, ಸ್ವಾತಂತ್ರ್ಯ, ಆತ್ಮಗೌರವ ಹಾಗೂ ಜ್ಞಾನಕ್ಕೆ ಲಿಂಗಭೇದವಿಲ್ಲ ಎಂಬ ಉನ್ನತ ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಾರಿದವರು ಶರಣೆ ಧೂಪದ ಗೊಗ್ಗವ್ವೆಯವರು.
ಹನ್ನೆರಡನೇ ಶತಮಾನದಲ್ಲಿಯೇ ಇಂತಹ ಕ್ರಾಂತಿಕಾರಿ ಚಿಂತನೆಗಳನ್ನು ವ್ಯಕ್ತಪಡಿಸಿದ ಶರಣೆ ಧೂಪದ ಗೊಗ್ಗವ್ವೆಯವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ.
ಶರಣೆ ಧೂಪದ ಗೊಗ್ಗವ್ವೆಯವರಿಗೆ ಶರಣು ಶರಣಾರ್ಥಿಗಳು.
