‘ಶಿಷ್ಯನನ್ನು ಶಿವಪಥದ ದಾರಿಯಲ್ಲಿ ಕರೆದೊಯ್ಯುವ ಹೊಣೆಗಾರಿಕೆ ಗುರುವಿನದು’

ಬಸವರಾಜ ಎಸ್. ಹೂಗಾರ
ಬಸವರಾಜ ಎಸ್. ಹೂಗಾರ

ಲಿಂಗಾಯತ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ

ಯಲಬುರ್ಗಾ :

ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 8ನೇ ವಾರದ ವಚನ ಪ್ರಾರ್ಥನೆ ಮತ್ತು 2 ನೇ ಮಾಸಿಕ ಶಿವಾನುಭವ ಹಾಗೂ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮ ನಡೆಯಿತು .

ಅನುಭಾವಿ ಅಮರೇಶಪ್ಪ ಗಡಿಹಳ್ಳಿ, ಸೋಮಸಾಗರ ಅವರು ಮಾತನಾಡಿ, ಗುರು ಅಂದರೆ ಮಾನವ ದೇವನಾಗುವ ಹಂತದಲ್ಲಿ ಅವನ ಸಂಕಷ್ಟಗಳನ್ನು ನಿವಾರಿಸುವ ವ್ಯಕ್ತಿಯೇ ಗುರು.

ಶಿಷ್ಯನ ಅಜ್ಞಾನವನ್ನು ನಿವಾರಿಸಿ ಅವನ ಜ್ಞಾನದ ಕಣ್ಣನ್ನು ತೆರೆಸುವ ಸುಜ್ಞಾನಿಯನ್ನಾಗಿಸುವ ಶಿವಪಥದ ದಾರಿಯಲ್ಲಿ ಕರೆದೊಯ್ಯುವ ಹೊಣೆಗಾರಿಕೆ ಗುರುವಿನದು.

ಗುರು ಬಸವಣ್ಣನವರು ಹೇಳಿರುವಂತೆ ಮಡಿಕೆಯ ಮಾಡುವಡೆ ಮಣ್ಣೆ ಮೊದಲು, ತೊಡಿಗೆಯ ಮಾಡುವಡೆ ಹೊನ್ನೇ ಮೊದಲು, ಶಿವ ಪಥವನ್ನು ಅರಿವಡೆ ಗುರು ಪಥವೇ ಮೊದಲು. ಕೂಡಲಸಂಗಮ ದೇವನರಿವಡೆ ಶರಣರ ಸಂಗವೇ ಮೊದಲು, ಇಲ್ಲಿ ಮಡಿಕೆಗೆ ಮೂಲ ವಸ್ತು ಮಣ್ಣು ಆಗಿದ್ದರೆ ಆಭರಣಕ್ಕೆ ಮೂಲ ವಸ್ತು ಬಂಗಾರವಾಗಿರುತ್ತದೆ. ಅದೇ ರೀತಿ ಶಿವಪಥವನ್ನು ಅರಿಯಲು ಗುರುಪಥವೇ ಮೊದಲು ಎನ್ನುವ ಮೂಲಕ ಗುರುವಿನ ಮಹತ್ವವನ್ನು ಮನಗಾಣಿಸಿದ್ದಾರೆ ಎಂದು ತಿಳಿಸಿದರು.

ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ ಅವರು ಮಾತನಾಡಿ, ಒಬ್ಬ ಗುರು ಅಜ್ಞಾನ ನಿವಾರಿಸಿ ಸುಜ್ಞಾನ ಕರುಣಿಸುವವನು. ಲಿಂಗಾಯತ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಇದೆ. ಹರನಿಗಿಂತಲೂ ಗುರುವಿಗೆ ವಿಶೇಷ ಸ್ಥಾನ ಮೀಸಲಾಗಿದೆ. ಹಾಗಾಗಿ ಶ್ರೇಷ್ಠ ಗುರುವಿನ ಮೂಲಕ ಲಿಂಗದೀಕ್ಷೆಯನ್ನು ಪಡೆದು ಲಿಂಗಾಂಗ ಸಾಮರಸ್ಯದ ಮೂಲಕ ಸತ್ಯ ಶುದ್ಧ ಕಾಯಕವ ಮಾಡಿ ಬಾಳಿ ಬದುಕಿದಾಗ ಮಾತ್ರ ನಮ್ಮ ಜೀವನ ಪಾವನ ಆಗಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವನಗೌಡ ಪೋಲಿಸಪಾಟೀಲ ಗೌರವಾಧ್ಯಕ್ಷರು ರಾಷ್ಟ್ರೀಯ ಬಸವ ದಳ, ಗುಳೆ ಅವರು ಮಾತನಾಡಿ, ಈ ಸಮಾಜದಲ್ಲಿ ಅದು ವಿಶೇಷವಾಗಿ ಲಿಂಗಾಯತ ಧರ್ಮದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಒಬ್ಬ ಗುರುವಿನ ಮೂಲಕ ಲಿಂಗದೀಕ್ಷೆಯನ್ನು ಪಡೆದು ಗುರು ಶಿಷ್ಯನಿಗೆ ಕರುಣಿಸುವುದು ಇಷ್ಟಲಿಂಗವನ್ನು. ಹಾಗಾಗಿ ಗುರುವಿನ ಗುರುತ್ವವನ್ನು ಮತ್ತೆ ಮತ್ತೆ ಬಸವಣ್ಣನವರು ಪ್ರಸ್ತಾಪಿಸುತ್ತಾರೆ.ಗುರು ವಚನದಿಂದಲೇ ಏನೆಲ್ಲ ಸಾಧ್ಯ ಹಾಗಂತ ಎಂತೆಂಥವರನ್ನೋ ಗುರುವೆಂದು ಸ್ವೀಕರಿಸಬಾರದು ಎನ್ನುವ ಎಚ್ಚರಿಕೆಯನ್ನು ಸಹ ನೀಡುವರು.

ಹಾಗೊಂದು ವೇಳೆ ಸುಜ್ಞಾನಿ ಗುರುವನ್ನು ಸ್ವೀಕರಿಸದೆ ಅಜ್ಞಾನಿಯನ್ನೇ ಗುರುವೆಂದು ಒಪ್ಪಿದಲ್ಲಿ ಅದು ತಲೆ ಇಲ್ಲದ ಅಟ್ಟೆಗೆ ಪಟ್ಟವ ಕಟ್ಟಿದಂತೆ. ಆಗ ಗುರು ಮತ್ತು ಶಿಷ್ಯ ಇಬ್ಬರು ಭ್ರಷ್ಟರಾಗುತ್ತಾರೆ. ಅಂತವರನ್ನು ದೇವರು ಮೆಚ್ಚುವುದಿಲ್ಲ ಎನ್ನುವ ಅರಿವನ್ನು ಮೂಡಿಸಿದ್ದಾರೆ.

ಅಂದರೆ ಅಜ್ಞಾನಿಗೆ ಅಧಿಕಾರ ಕೊಟ್ಟರೆ ಎಂತಹ ಅನಾಹುತ ಆಗುತ್ತದೆ ಎನ್ನುವ ಎಚ್ಚರಿಕೆಯೂ ಇಲ್ಲಿ ತಿಳಿದು ಬರುತ್ತದೆ, ಗುರು ಯೋಗ್ಯ ಶಿಷ್ಯನಿಗೆ ಮಾತ್ರ ದೀಕ್ಷೆ ಕೊಡಬೇಕು ಹಾಗೆ ಶಿಷ್ಯ ಅರ್ಹ ಗುರುವಿನಿಂದ ಮಾತ್ರ ದೀಕ್ಷೆ ಪಡೆಯಬೇಕು ಇಲ್ಲವಾದರೆ ಗುರು ಶಿಷ್ಯ ಇಬ್ಬರು ಭ್ರಷ್ಟರಾಗುವರು ಎನ್ನುವ ಮಾತು ಮತ್ತೆ ಮತ್ತೆ ಮನನ ಮಾಡುವಂತಾಗಬೇಕು.

ಇಲ್ಲಿ ದೀಕ್ಷೆ ಅಂದರೆ ಮೂರು ರೀತಿಯಿಂದ ಬರುತ್ತದೆ. ಒಂದು ವೇದಾ ದೀಕ್ಷೆ, ಎರಡನೆಯದು ಕ್ರಿಯಾ ದೀಕ್ಷೆ . ಮೂರನೇದು ಮಂತ್ರ ದೀಕ್ಷೆ. ಗುರು ಶಿಷ್ಯನಿಗೆ ಧರ್ಮ ಇಷ್ಟಲಿಂಗ ಪೂಜೆ ಅಷ್ಟಾವರಣ ಪಂಚಾಚಾರ ಷಟಸ್ಥಲ ಇತ್ಯಾದಿ ವಿಚಾರಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸುವುದೇ ವೇದ ದೀಕ್ಷೆ. ನಂತರ ಆ ಗುರು ಶಿಷ್ಯನ ತಲೆಯ ಮೇಲೆ ಹಸ್ತವನ್ನ ಇರಿಸಿ ತನ್ನ ಜ್ಞಾನ ಚೆಕ್ಷುವಿನಿಂದ ಆತನ ಅಂತರಂಗದ ಬೆಳಕನ್ನು ಇಷ್ಟಲಿಂಗ ರೂಪದಲ್ಲಿ ಅಂಗೈಗೆ ಕರುಣಿಸುವುದೇ ಕ್ರಿಯಾ ದೀಕ್ಷೆ.

ಹೀಗೆ ದೀಕ್ಷೆ ಪಡೆದ ವ್ಯಕ್ತಿ ಇಷ್ಟಲಿಂಗದ ಅನುಸಂಧಾನ ಮಾಡುವಾಗ ಓಂ ನಮ: ಶಿವಾಯ ಎನ್ನುವ ಷಡಕ್ಷರಿ ಮಂತ್ರವನ್ನು ಜಪಿಸಬೇಕೆಂದು ಮನದಟ್ಟು ಮಾಡಿಕೊಡುವುದೇ ಮಂತ್ರ ದೀಕ್ಷೆ ಆಗಿದೆ. ಅದಕ್ಕಾಗಿ ನಾವು ಪ್ರತಿಯೊಬ್ಬರೂ ಶ್ರೇಷ್ಠ ಗುರುವಿನ ಮೂಲಕ ಲಿಂಗ ದೀಕ್ಷೆಯನ್ನು ಪಡೆದು ಗುರುವಿನ ಮಾರ್ಗದಂತೆ ಲಿಂಗಾಂಗ ಸಾಮರಸ್ಯದಿಂದ ಬದುಕಿದಾಗ ಮಾತ್ರ ನಮ್ಮ ಜೀವನ ಪಾವನ ಆಗುತ್ತದೆ ಎಂದು ತಿಳಿಸಿದರು.

ಹನುಮಂತಪ್ಪ ಹುಣಸಿಹಾಳ್ ಮರಕಟ್ಟ ಇವರು ಕೂಡ ವೇದಿಕೆ ಹಂಚಿಕೊಂಡು ಮಾತನಾಡಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಬಸವರಾಜ ಹೂಗಾರ ಅವರು ಮಾತನಾಡಿ, ಶಿವ ಚಿಂತೆ ಶಿವ ಜ್ಞಾನ ನಮ್ಮ ಮನದಲ್ಲಿ ನೆಲೆಗೊಳ್ಳ ಬೇಕಾದರೆ ಒಬ್ಬ ಶ್ರೇಷ್ಠ ಗುರು ನಮಗೆ ಬೇಕಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ವನಜಬಾವಿ ಗ್ರಾಮದ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು ಎಲ್ಲಾ ಶರಣರಿಗೂ ದಾಸೋಹದ ಸೇವೆಯನ್ನು ಸಮರ್ಪಿಸಿದರು.

ನಾಗನಗೌಡ ಜಾಲಿಹಾಳ, ರೇವಣಪ್ಪ ಮಂತ್ರಿ, ಗಿರಿಮಲ್ಲಪ್ಪ ಪರಂಗಿ, ವಿರೂಪಾಕ್ಷಪ್ಪ ಮೇಟಿ, ಹನುಮಂತಪ್ಪ ಮೇಟಿ, ನಿಂಗಪ್ಪ ಪರಂಗಿ, ಶರಣಪ್ಪ ಗೊಂದಿ, ಹನುಮಂತಪ್ಪ ಪರಂಗಿ, ಚನ್ನಬಸಪ್ಪ ಮೇಟಿ, ಭೀಮನಗೌಡ ಗೌಡ್ರು, ಪರಮೇಶ್ವರ ಉಚ್ಚಲಕುಂಟಿ, ಮಹಿಳಾ ಗಣದ ಯಮನಮ್ಮಗೌಡ್ರು ಇನ್ನಿತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *