ಶಿವಮೊಗ್ಗದಲ್ಲಿ ಶರಣಮೇಳ ಪ್ರಚಾರದ ಸತ್ಸಂಗ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ

ಧರ್ಮಗುರು ಬಸವಣ್ಣನವರ ವಿದ್ಯಾಭೂಮಿ, ಆಧ್ಯಾತ್ಮಿಕ ತತ್ವ ಸಾಧನೆಯ ಕ್ರಿಯಾತ್ಮಕ ಭೂಮಿ ಮತ್ತು ಲಿಂಗೈಕ್ಯ ಕ್ಷೇತ್ರವಾದ ಕೂಡಲಸಂಗಮ ಸುಕ್ಷೇತ್ರವು ಬಸವ ತತ್ವಾನುಯಾಯಿಗಳ ಶ್ರದ್ಧಾ ಕೇಂದ್ರವಾಗಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದಾಧ್ಯಕ್ಷೆ ಪೂಜ್ಯ ಮಾತೆ ಡಾ. ಗಂಗಾದೇವಿ ಅವರು ತಿಳಿಸಿದರು.

ರಾಷ್ಟ್ರೀಯ ಬಸವ ದಳ ಟ್ರಸ್ಟ್ ಆಶ್ರಯದಲ್ಲಿ ವಿನೋಬನಗರದ ಬಸವ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ ೪೦ನೇ ಶರಣಮೇಳ ಮೇಳದ ಪ್ರಚಾರ ನಿಮಿತ್ತ ನಡೆದ ಧಾರ್ಮಿಕ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಪೂಜ್ಯ ಮಾತೆಯವರು, ‘ಸಮಾಜದಲ್ಲಿ ನೈತಿಕತೆ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ತತ್ವ ಮೌಲ್ಯಗಳು ಜೀವಂತಿಕೆಯಿದ್ದಾಗ ಮಾತ್ರವೇ ಒಂದು ಆದರ್ಶ ಕಲ್ಯಾಣ ಸಮಾಜ ನಿರ್ಮಿಸಲು ಸಾಧ್ಯ. ಗುರು ಬಸವಣ್ಣನವರು ವಿಶ್ವಕ್ಕೆ ನೀಡಿದ ಸಾರ್ವಕಾಲಿಕ ವಿಶ್ವಮಾನ್ಯ ಸಂದೇಶಗಳತ್ತ ಇಂದು ವಿಶ್ವವೇ ಗಮನ ಹರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ನಾವು ಅವರ ತತ್ವ ಸಂದೇಶಗಳ ತತ್ಪರತೆಯ ಚೇತನಗಳಾಗಬೇಕು. ಅದುವೇ ಧಾರ್ಮಿಕ ಜೀವನದ ಆದರ್ಶವಾಗಿದೆ. ಅಜ್ಞಾನದಿಂದ ನಿದ್ರಿಸುತ್ತಿರುವ ಸಮಾಜಕ್ಕೆ ಗುರು ಬಸವಣ್ಣನವರ ತತ್ವ ಸಂದೇಶ ಎನ್ನುವ ದಿವ್ಯ ಜ್ಯೋತಿಯ ಮೂಲಕ ಎಚ್ಚರಿಸುವ ಕಾರ್ಯವನ್ನು ಶರಣಮೇಳ ಮಾಡುತ್ತಾ ಬರುತ್ತಿದೆ ‘ ಎಂದು ತಿಳಿಸಿದರು.

ಬಸವ ಜ್ಯೋತಿ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶರಣ ಧನಂಜಯ ಸರ್ಜಿ ಅವರು, ವಚನದಲ್ಲಿ ಬದುಕಿನ ಸಾರ್ಥಕತೆ ತತ್ವ ಅಡಗಿರುವುದನ್ನು ಕಾಣಬಹುದು. ದಯೆಯೇ ಧರ್ಮದ ಜೀವಾಳ ಎಂದು ತಿಳಿಸಿ ಧರ್ಮಕ್ಕೆ ನಿಜ ಅರ್ಥ ಮೂಡಿಸಿದವರು ಗುರು ಬಸವಣ್ಣನವರು ಎಂದರು.

ದೇಹವನ್ನು ದೇವಾಲಯ ಮಾಡಿಕೊಳ್ಳಬೇಕೆಂಬ ಯೋಗ ಸೂತ್ರವನ್ನು ಗುರು ಬಸವಣ್ಣನವರ ವಚನ ಸಂದೇಶದಲ್ಲಿ ಕಾಣಬಹುದು. ಅವರ ಕಾಯಕ ಪ್ರಜ್ಞೆ ಮತ್ತು ದಾಸೋಹ ಭಾವಗಳನ್ನು ಜಗತ್ತು ಅಳವಡಿಸಿಕೊಂಡರೆ ಇಡೀ ವಿಶ್ವವೇ ಶಾಂತಿ ಕಾಣಲು ಸಾಧ್ಯ’ ಎಂದು ತಿಳಿಸಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ವಿಜಯಾಂಬಿಕ ಮಾತೆ ಅವರು ಪ್ರಾರ್ಥನೆ ನಡೆಸಿಕೊಟ್ಟರು. ಯೋಗೀಶ ನಿರ್ವಿಕಲ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಲಿಂಗೈಕ್ಯ ಶರಣರಾದ ವಾಸುದೇವ ಅವರ ಸ್ಮರಣೆ ನಿಮಿತ್ತ ಮಾಧವ ನೆಲೆ ಮಕ್ಕಳಿಗೆ ನೋಟು ಪುಸ್ತಕಗಳನ್ನು ನೀಡಲಾಯಿತು. ಸರ್ಕಾರಿ ಪ್ರೌಢಶಾಲೆ ಕಾಚಿನಕಟ್ಟೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಅಧ್ಯಕ್ಷರಾದ ರಾಮಪ್ಪ, ಗೌರವಾಧ್ಯಕ್ಷರಾದ ಹಾಲಪ್ಪ, ಟ್ರಸ್ಟ್ ಸದಸ್ಯರಾದ ಮೂಲಿಮನಿ, ಲಕ್ಷ್ಮಿಲತಾ, ಅನಸೂಯಮ್ಮ ಮುಂತಾದವರು ಉಪಸ್ಥಿತರಿದ್ದರು.

ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯ ಗಂಗಾ ಮಾತಾಜಿ ಅವರು ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿ ಅವರ ತತ್ವ ಸಂದೇಶವನ್ನು ವಿಶ್ಲೇಷಣೆ ಮಾಡಿದರು.

ಅಕ್ಕಮಹಾದೇವಿ ತಾಯಿಯವರು ಅಂತರಂಗದಲ್ಲಿಯೇ ಪರಮಾತ್ಮನ್ನು ಕಾಣುವ ಯೋಗ ಸೂತ್ರವನ್ನು ಗುರು ಬಸವಣ್ಣನವರು ನೀಡಿದ ಇಷ್ಟಲಿಂಗ ಯೋಗ ಸೂತ್ರದ ಮೂಲಕ ಸಾಧಿಸಿದರು.

ಚಂಚಲತೆಯಿಂದ ಕೂಡಿರುವ ಮನಸ್ಸನ್ನು ಶರಣರ ಸತ್ಸಂಗದ ಮೂಲಕ ಅತ್ಯಂತ ಸುಲಭವಾಗಿ ಸಾತ್ವಿಕ ಸ್ಥಿತಿಗೆ ಕರೆದುಕೊಂಡು ಹೋಗಬಹುದು! ನಮ್ಮ ಆಂತರ್ಯದಲ್ಲಿಯೇ ಇರುವ ಪರಮಾತ್ಮ ತತ್ವವನ್ನು ಕಾಣಬಹುದು ಎಂದು ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *