ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ನಡೆಯುವ ೪೭ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೬ ದಲ್ಲಿ ಅನುಭವಮಂಟಪದಿಂದ ನೀಡುವ ೨೦೨೬ ನೆಯ ಸಾಲಿನ ಪ್ರಶಸ್ತಿಗಳು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಘೋಷಣೆ ಮಾಡಿದ್ದಾರೆ.
ಪ್ರಶಸ್ತಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.
ಶರಣ ಅಶೋಕ ದೊಮ್ಮಲೂರು, ಬೆಂಗಳೂರು ಅವರು ದೇಶ ವಿದೇಶಗಳ, ಮಠಗಳ, ವಿಶ್ವವಿದ್ಯಾಲಯಗಳ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ೬೦ ಲಕ್ಷಕ್ಕೂ ಹೆಚ್ಚು ತಾಡೋಲೆ ಹಸ್ತಪ್ರತಿ, ಗರಿಗಳ ಸಂರಕ್ಷಣೆ ಮತ್ತು ಡಿಜಿಟಲಿಕರಣ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಕಾರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ, ಶರಣ ಬಾಬಾಸಾಹೇಬ ವಾರದ ಸ್ಮರಣಾರ್ಥವಾಗಿ ‘ಡಾ. ಫ.ಗು. ಹಳಕಟ್ಟಿ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.
ಶರಣ ಬಸವರಾಜ ಧನ್ನೂರ, ರಾಷ್ಟ್ರೀಯ ಉಪಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭೆ, ಬೀದರ
ಉದ್ಯಮಶೀಲತೆ, ಬಸವತತ್ವದ ಬದ್ಧತೆ, ಸಂಘಟನಾ ಸಾಮರ್ಥ್ಯ ಹಾಗೂ ನಿಸ್ವಾರ್ಥ ಸಮಾಜ ಸೇವೆಯ ಸಮನ್ವಯವೇ ಶ್ರೀ ಬಸವರಾಜ ಧನ್ನೂರ. ಅವರ ವ್ಯಕ್ತಿತ್ವ ವೈಶಿಷ್ಟ್ಯವಾಗಿದೆ. ಸಮಾಜದ ಪ್ರಗತಿಯನ್ನು ತಮ್ಮ ಜವಾಬ್ದಾರಿಯಾಗಿ ಪರಿಗಣಿಸುವ ಇವರು ಉದ್ಯೋಗ ಸೃಷ್ಟಿ, ಶಿಕ್ಷಣ ದಾಸೋಹ, ವಚನ ಸಾಹಿತ್ಯದ ಪ್ರಸಾರ, ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಂಘಟನೆಗಳ ಮೂಲಕ ಅರ್ಥಪೂರ್ಣ ಕೊಡುಗೆ ನೀಡುತ್ತಿದ್ದಾರೆ. ಇವರ ಸಮಗ್ರ ಸೇವೆಯನ್ನು ಗುರುತಿಸಿ, ಶರಣ ಡಾ.ಬಿ.ವಿ. ಪಟೇಲ್ ಸ್ಮರಣಾರ್ಥವಾಗಿ ‘ಶರಣ ಹರ್ಡೇಕರ ಮಂಜಪ್ಪ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

ಡಾ. ಗುರುಲಿಂಗಯ್ಯ ಸಿದ್ಧಯ್ಯ ಹಿರೇಮಠ, ವೈದ್ಯರು, ಕಲಬುರಗಿ ಇವರು ನಾಟಿವೈದ್ಯದಲ್ಲಿ ಅಪೂರ್ವ ಸಾಧನೆ ಮಾಡಿದ ಸಾಧಕರು ಆಗಿದ್ದಾರೆ. ರೋಗಿಗಳ ಸೇವೆಯೇ ದೇವರ ಸೇವೆ ಎಂದು ನಂಬಿ ನಾಟಿ ಔಷದದ ಮೂಲಕ ರೋಗಿಗಳ ರೋಗವನ್ನು ಗುಣಪಡಿಸುವ ಪ್ರಸಿದ್ಧ ವೈದ್ಯರಾಗಿದ್ದಾರೆ. ಇವರ ಮನೆತದಲ್ಲಿ ನಾಟಿವೈದ್ಯರ ಒಂದು ಪರಂಪರೆಯೇ ಇದೆ. ಇವರ ನಾಟಿವೈದ್ಯದ ಉಪಚಾರದಿಂದ ಸಾವಿರಾರು ಜನರ ರೋಗ ಗುಣಮುಕ್ತವಾಗಿದೆ. ಇವರ ಸಮಗ್ರ ಸೇವೆಯನ್ನು ಗುರುತಿಸಿ, ‘ಶರಣ ವೈದ್ಯ ಸಂಗಣ್ಣ ಪ್ರಶಸ್ತಿ’ ನೀಡಿ
ಗೌರವಿಸಲಾಗುತ್ತಿದೆ.
ಶರಣ ಆಕಾಶ ಮಲ್ಲಿಕಾರ್ಜುನ ಮೋಳಕೆರೆ, ಕಲಬುರಗಿ ಇವರು ಅರಣ್ಯ ಕೃಷಿ, ತೋಟಗಾರಿಕೆ ಮತ್ತು ಸಾವಯವ ಆಹಾರ ಸಂಸ್ಕರಣೆಯನ್ನು ಒಳಗೊಂಡ ಸಮಗ್ರ ಕೃಷಿ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯೇ ಸುಮಾರು ೧೦೦ ಹಸುಗಳನ್ನು ಸುಲಭವಾಗಿ ನಿರ್ವಹಿಸಬಹುದಾದ ವೈಜ್ಞಾನಿಕ ಮತ್ತು ಶ್ರಮರಹಿತ ಗೋಶಾಲೆಯ ಮಾದರಿಯನ್ನು ಇವರು ವಿನ್ಯಾಸಗೊಳಿಸಿದ್ದಾರೆ. ಇವರ ಕೃಷಿ ಸೇವೆಯನ್ನು ಗುರುತಿಸಿ ‘ಶರಣ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.
ಈ ಎಲ್ಲ ಪ್ರಶಸ್ತಿಗಳನ್ನು ಅನುಭವಮಂಟಪ ಉತ್ಸವದಲ್ಲಿ ಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
