ಬೆಂಗಳೂರು
ಬಸವ ನಿಂದನೆ ಮಾಡಿರುವ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗಬೇಕು ಎಂದು ಬಸವ ತತ್ವ ಚಿಂತಕ ಶರಣ ಜಿ ಎಚ್ ರಾಜಶೇಖರ ಅಭಿಪ್ರಾಯಪಟ್ಟರು.
ನಗರದ ಶ್ರೀ ಗುರು ಬಸವ ಮಂಟಪದಲ್ಲಿ ಆಯೋಜಿಸಲಾಗಿದ್ದ ತುರ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವೇಶ್ವರ ಭಟ್ಟರ ಸಾರಥ್ಯದ ವಿಶ್ವವಾಣಿಯ ಕಾರ್ಯಕ್ರಮದಲ್ಲಿ ರವಿ ಹಂಜ್ ಎನ್ನುವ ಬಸವಣ್ಣನವರ ಕುರಿತು ಹಗುರವಾಗಿ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ನಿಂದಿಸಿರುವುದು ಬಸವ ಭಕ್ತರು ಸಹಿಸಲು ಸಾಧ್ಯವಿಲ್ಲ.
ಶರಣರು ಅತ್ಯಂತ ಮೌಲ್ಯಯುತವಾದ ವಚನ ಸಾಹಿತ್ಯ ರಚಿಸಿ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ಆದರೆ ಪಟ್ಟ ಭದ್ರ ಹಿತಾಸಕ್ತಿಗಳು ದುರುದ್ದೇಶದಿಂದ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟಿ ತುಳಿಯುವ ತಂತ್ರವನ್ನು ಮಾಡುತ್ತಿದ್ದಾರೆ.
ಇಂಥವರಿಗೆ ತಮ್ಮ ಮೆದುಳನ್ನು ಅಡ ಇಟ್ಟಿರುವ ಕೆಲವು ಲಿಂಗಾಯತರು ತಮ್ಮ ಧರ್ಮವನ್ನೇ ನಿಂದಿಸಿಕೊಂಡು ತಿರುಗುತ್ತಿರುವುದು ಅತ್ಯಂತ ವಿಷಾದನೀಯ.
ತಪ್ಪು ಯಾರೇ ಮಾಡಿದರು ಅವರ ಮೇಲೆ ಕಾನೂನಿನ ಮುಖಾಂತರ ಕ್ರಮ ಜರುಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಎಲ್ಲ ಬಸವ ಭಕ್ತರು ಬಸವಪರ ಸಂಘಟನೆಯವರು, ಬಸವಾಭಿಮಾನಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ದಿನಾಂಕ 21 ಶನಿವಾರದಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು, ನಂತರ 12 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಾಗುವುದು, ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ಬಸವ ಅಭಿಮಾನಿಗಳು ಒಪ್ಪಿಗೆ ಸೂಚಿಸಿದರು.

ನಂತರ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶರಣೆ ಕುಸುಮ ಲೋಕೇಶ್ ಅವರು ದಾವಣಗೆರೆ ನಗರದ ಬಸವ ಭಕ್ತರಿಂದ ಅಂದಾಜು 5,000 ಪತ್ರಗಳನ್ನು ಬರೆಸಿ ವಿಶ್ವೇಶ್ವರ ಭಟ್ ಮತ್ತು ರವಿ ಹಂಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಕಳಿಸುವ ಪತ್ರ ಚಳುವಳಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಅಶೋಕ್ ಬಣಕಾರ್ ಮಾತನಾಡಿ ಅನಿವಾಸಿ ಭಾರತೀಯ ಆದ ಮಾತ್ರಕ್ಕೆ ತೋಚಿದ್ದನ್ನು ಮಾತನಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ , ಭಾರತದ ಕಾನೂನು ಕಠಿಣವಾಗಿದ್ದು, ಆರೋಪಿಯು ಎಲ್ಲೇ ಇದ್ದರೂ ಅವರನ್ನು ನ್ಯಾಯಾಲಯಕ್ಕೆ ಕರೆತಂದು ವಿಚಾರಣೆ ನಡೆಸಿ ತೀರ್ಪು ಕೊಡುವ ವ್ಯವಸ್ಥೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಗುರುಬಸವ ಮಂಟಪದ ವೀಣಾ, ಆಶಾ, ಪೂರ್ಣಿಮ, ಮಮತಾ, ವೀಣಾ ಮಂಜುನಾಥ್, ವನಜ ಮಹಾಲಿಂಗಯ್ಯ, ರಾಷ್ಟ್ರೀಯ ಬಸವದಳದ ಸುವರ್ಣ ಕೊಟ್ರೇಶ್, ವಿನೋದ ಅಜಗಣ್ಣ, ತ್ಯಾಗರಾಜ್, ಸಂಗನಬಸವ ನೆಸ್ವಿ, ಅಡಿವಪ್ಪ, ಮಂಜುನಾಥ ವಿಟಿ, ರವೀಂದ್ರನಾಥ್ ಉಪಸ್ಥಿತರಿದ್ದರು.
