ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅವಮಾನ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ, ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನೆನ್ನೆ ಅವರ ನೇತೃತ್ವದ ಸಚಿವ ಸಂಪುಟ ಬಸವ ನಿಂದಕ ರವಿ ಹಂಜ್‌ ಮತ್ತು ಅವರ ಪ್ರಕಾಶಕ ವಿಶ್ವವಾಣಿಯ ಸಂಪಾದಕ ವಿಶ್ವೇಶ್ವರ ಭಟ್ಟರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು.

ಇಂದು ನೀಡಿರುವ ಪ್ರಕಟಣೆಯಲ್ಲಿ ಶಿವಕುಮಾರ್, ” ರವಿ ಹಂಜ್‌ ಎನ್ನುವ ಲೇಖಕ ʻಬಸವ ಮಂಟಪ’ ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ.

ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇವೆ.

ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.

ಜಗತ್ತಿಗೆ ಮೊಟ್ಟಮೊದಲ ಬಾರಿಗೆ ‘ಅನುಭವ ಮಂಟಪ’ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು.

ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ,” ಎಂದು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPB

Share This Article
Leave a comment

Leave a Reply

Your email address will not be published. Required fields are marked *