ಕನ್ನಡ ರಾಜ್ಯೋತ್ಸವ ಸನ್ಮಾನ
ಗದಗ :
ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದೆ. ಈ ಭಾಷೆಯನ್ನು ವೈವಿಧ್ಯಮಯವಾಗಿ ಬೆಳೆಸುವಲ್ಲಿ ಅನೇಕ ಲಿಂಗಾಯತ ಮಠಗಳ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೮೨೪ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಾದಿ ಶರಣರು ಜೀವನದ ಮೌಲ್ಯ ಸಿದ್ಧಾಂತ ಮತ್ತು ಸಾಮರಸ್ಯ ಬದುಕಿನ ವಿಧಾನವನ್ನು ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.

ಆಡು ಭಾಷೆ ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಓಲೆ ಮಠಗಳು ತಾಡೊಲೆಗಳನ್ನು ಸಂಗ್ರಹಿಸಿ, ವಿಂಗಡಿಸಿ ಕನ್ನಡ ಭಾಷೆ ಉಳಿಸಿದರೆ, ಸಾಲಿಮಠಗಳು ಕನ್ನಡ ಶಾಲೆಗಳ ಮೂಲಕ ಶಿಕ್ಷಣಕ್ಕೆ ಸೇವೆಗೈದಿದ್ದಾರೆ. ಓದಿಸುವ ಮಠಗಳು ಮಕ್ಕಳನ್ನು ಓದಿಸುವ ಕೆಲಸ ಮಾಡಿವೆ ಎಂದರು.
ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳವರು ೭೦೧ ಶಿಷ್ಯರನ್ನು ಕಟ್ಟಿಕೊಂಡು ವಚನ ಬರೆದು, ನಾಡಿನ ಉದ್ದಗಲಕ್ಕೂ ಸಂಚರಿಸಿ, ವಚನಗಳೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಜನಮಾನಸಕ್ಕೆ ಹಂಚಿದ್ದಾರೆ, ಬೆಳೆಸಿದ್ದಾರೆ ಎಂದರು.
ಸುತ್ತೂರು, ಬಾಲ್ಕಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ತುಮಕೂರು ಮುಂತಾದ ಮಠಗಳು ಕನ್ನಡದ ನೆಲ, ಜಲ ಸಂರಕ್ಷಣೆಗೆ ಅನುಪಮವಾದ ಸೇವೆ ಸಲ್ಲಿಸುತ್ತಿವೆ ಎಂದರು.
ಗದುಗಿನ ತೋಂಟದಾರ್ಯ ಮಠವು ಪುಸ್ತಕ ಪ್ರಕಟಣೆ, ಕಲಾವಿದರು, ಸಾಹಿತಿಗಳು, ಪ್ರತಿಭಾ ಸಂಪನ್ನರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ಆಧುನಿಕ ದಿನಮಾನದಲ್ಲಿ ಕನ್ನಡಿಗರಿಗಾಗಿ ಕನ್ನಡ ರಕ್ಷಿಸುವ ಸಂದರ್ಭ ಬಂದಿದೆ. ಇಂದು ಪಾಲಕರು ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಕಲಿಸಬೇಕೆಂಬ ತವಕದಲ್ಲಿ ಕನ್ನಡಕ್ಕೆ ಹಿನ್ನಡೆಯಾಗುತ್ತಿದೆ. ಮಾತೃಭಾಷೆಯಲ್ಲಿ ಓದಿದ ಮಕ್ಕಳು ಸರ್ವಕ್ಷೇತ್ರದಲ್ಲಿ ಸಾಧನೆ ಮಾಡುವ ಶಕ್ತಿ ಹೊಂದುತ್ತಾರೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ೨೦೨೬ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬೆಳಗಾವಿಯ ಡಾ. ಸುಜಾತಾ ಜಾಲಿ ಮತ್ತು ರಂಗಕಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಡಾ. ಡಿ. ಎಸ್. ಚೌಗಲೆ ಅವರನ್ನು ಸನ್ಮಾನಿಸಿ ಅವರ ಸೇವೆ ವೈಶಿಷ್ಟವಾದದ್ದು ಎಂದರು.

ಗದಗ ಪರಿಸರದ ಯುವ ಚಿತ್ರಕಲಾವಿದರಾದ ರವಿ ಶಿಶುವಿನಹಳ್ಳಿ, ಫಕ್ಕಿರೇಶ ಕುಳಗೇರಿ ಅವರನ್ನು ಸನ್ಮಾನಿಸಿದರು.
ಬೆಳಗಾವಿಯ ಶರಣ ಸಾಹಿತಿ ಪ್ರಕಾಶ್ ಗಿರಿಮಲ್ಲನವರ ಅವರು ‘ಕನ್ನಡಕ್ಕೆ ಲಿಂಗಾಯತ ಮಠಗಳ ಕೊಡುಗೆ’ ಕುರಿತು ಉಪನ್ಯಾಸ ಮಾಡುತ್ತಾ, ಹಸ್ತಪ್ರತಿ, ವಚನಗಳು, ಮೌಖಿಕವಾಗಿ ಕಲೆಯ ಮೂಲಕ ಕನ್ನಡವನ್ನು ಬೆಳೆಸಿದ ಲಿಂಗಾಯತ ಮಠಗಳ ಸೇವೆ ಅಪಾರವಾದದ್ದು ಎಂದರು.
ವಿವಿಧ ಕಾಲಘಟ್ಟಗಳ ಭಾಷೆಯ ಬೆಳವಣಿಗೆ ಕುರಿತು ಮಾತನಾಡಿದರು. ಲಲಿತಾ ಅರಳಿ ಅವರು ಬರೆದ ಆರಾಧನೆ ಮತ್ತು ಮಿನುಗು ನಕ್ಷತ್ರಗಳು ಪುಸ್ತಕಗಳು ಲೋಕಾರ್ಪಣೆಗೊಂಡವು.
ಪುಸ್ತಕದ ಕುರಿತು ವಿ.ಟಿ. ಮಾಗಳದ ಮಾತನಾಡಿದರು. ಸಾನ್ವಿ ರಾಜಪ್ಪನವರ ಗ್ರಂಥಪಠಣ, ಪ್ರತಿಕ್ಷ ತುಕ್ಕಣ್ಣವರ ವಚನಚಿಂತನ ಮಾಡಿದರು. ಸಂಡೂರಿನ ಕೆ. ಎಸ್. ನಾಗರಾಜ ರಾಣೇಬೆನ್ನೂರಿನ ಲಲಿತ ಅರಳಿ ದಾಸೋಹ ಸೇವೆ ಮಾಡಿದರು. ಮೃತ್ಯುಂಜಯ ಮತ್ತು ಹೇಮಂತಕುಮಾರ ಅವರಿಂದ ವಚನ ಸಂಗೀತ ಜರುಗಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತ ಕೋರಿದರು. ಡಾ. ರಮೇಶ ಕಲನಗೌಡರ, ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಿದ್ದಣ್ಣ ಬಂಗಾರಶೆಟ್ಟರ, ದಾನಯ್ಯ ಗಣಾಚಾರಿ, ಜಿ. ಬಿ. ಪಾಟೀಲ, ಗಂಗಾಧರ ಹಿರೇಮಠ, ಕೆ .ಎ. ಬಳಿಗೇರ, ಪ್ರತಿಭಾ ಬಡ್ನಿ, ಸುನಂದಾ ಪಿಳ್ಳಿ, ಸೋಮು ಪುರಾಣಿಕ, ಆದೇಶ ಅಂಗಡಿ ಮುಂತಾದವರು ಹಾಜರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
