ರಾಯಚೂರು: ಹಂಜ್, ಭಟ್ಟ ವಿರುದ್ಧ ಸರ್ವ ಸಮಾಜಗಳ ಸಭೆ

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರು :

ನಗರದ ಬಸವ ಕೇಂದ್ರದಲ್ಲಿ ಬಸವಪರ, ಪ್ರಗತಿಪರ ಸಂಘಟನೆಗಳು, ಹಿಂದುಳಿದ ಮತ್ತು ದಲಿತ ಸಂಘಟನೆಗಳು ಈಚೆಗೆ ಒಟ್ಟಾಗಿ ಸಭೆ ಸೇರಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರ ಯೂಟೂಬ್ ಚಾನೆಲ್ ನಲ್ಲಿ ಅನಿವಾಸಿ ಭಾರತೀಯ ರವಿಹಂಜ್ ಎಂಬುವವರು ಇಲ್ಲಸಲ್ಲದ ಮಾತುಗಳನ್ನು ಆಡಿ, ವೀಡಿಯೊ ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದು, ಧರ್ಮಗುರು ಬಸವಣ್ಣನವರಿಗೆ ಮಾಡಿದ ಅವಮಾನ ಎಂದು ಹಾಗೂ ಬಸವ ಮಂಟಪ ಹೆಸರಿನ ಬಸವಣ್ಣನ ಕುರಿತು ಇತಿಹಾಸ ತಿರುಚಿ, ಸುಳ್ಳು ಬರೆದಿರುವ ಪುಸ್ತಕವನ್ನು ಒಕ್ಕೂರಲಿನಿಂದ ಖಂಡಿಸಿದರು.

ಪುಸ್ತಕವನ್ನು ಬ್ಯಾನ್ ಮಾಡಬೇಕು, ರವಿಹಂಜ್ ಮತ್ತು ವಿಶ್ವೇಶ್ವರ ಭಟ್ ಸಾರ್ವಜನಿಕ ಕ್ಷಮಾಪಣೆ ಕೇಳಬೇಕು ಹಾಗೂ ಇಬ್ಬರಿಗೂ ಶಿಕ್ಷೆಯಾಗಬೇಕು ಎಂದು ತೀರ್ಮಾನಿಸಿದರು.

ಎಲ್ಲಾ ಸಮಾಜದವರು ಸೇರಿ ಈ ವಿಷಯ ಕುರಿತು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದು, ಮತ್ತು ಹಾಗೆಯೇ ಪೋಲೀಸ್ ಠಾಣೆಯಲ್ಲಿ ಈ ಕುರಿತು ರವಿಹಂಜ್ ಹಾಗೂ ವಿಶ್ವೇಶ್ವರ ಭಟ್ ಮೇಲೆ ಕೇಸ್ ದಾಖಲಿಸಲು ನಿರ್ಣಯಿಸಿದರು.

ಮೊದಲಿಗೆ ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಮಾಜಿಕ ಹೋರಾಟಗಾರ ಎ. ಮಾರೆಪ್ಪ ವಕೀಲರು ಬಸವಣ್ಣ ಸಮಾನತೆ ಸಾರಿದ ವ್ಯಕ್ತಿ. ಬಸವಣ್ಣ ಹಾಗೂ ಅಂಬೇಡ್ಕರ್ ಚಿಂತನ ಧಾರೆಗಳು ಒಂದೇ ಇವೆ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಕೊಲೆಯ ಹಿಂದಿನ ವಿಚಾರಧಾರೆಗಳೆ ಈ ಕೃತ್ಯದ ಹಿಂದಿವೆ, ಇದರ ವಿರುದ್ಧ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದರು.

ಹಾಲುಮತದ ಮುಖ್ಯಸ್ಥ ಬಿ. ಬಸವರಾಜ ಎಲ್ಲರನ್ನು ಒಗ್ಗೂಡಿಸಿ ಅನುಭವ ಮಂಟಪ ಮಾಡಿದ ಬಸವಣ್ಣನ ಬಗ್ಗೆ ಮಾತು ಕೇಳಿ ಸಂಕಟವಾಯಿತು. ಬಸವ ಅಭಿಮಾನಿಗಳ ಒಂದು ಒಕ್ಕೂಟ ರಚನೆ ಮಾಡಿಕೊಂಡು ನಿರಂತರ ಹೋರಾಟ ಮುಂದುವರೆಸೋಣ ಎಂದರು.

ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯದರ್ಶಿ ಹನುಮಂತಪ್ಪ ಬಸವಪರ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿವಾಳ ಸಮಾಜದ ಅಧ್ಯಕ್ಷ ಜಂಬಣ್ಣ ಯಕ್ಲಾಸಪುರ ಮಾತನಾಡಿ, ಹಿಂದುಳಿದ ವರ್ಗ ಬಸವಣ್ಣನನ್ನು ವಿಶ್ವಗುರು ಎಂದು ಒಪ್ಪಿಕೊಂಡಿದೆ. ಬಸವಣ್ಣನ ರಕ್ಷಣೆ ಎಂದರೆ ಹಿಂದುಳಿದ ವರ್ಗದ ರಕ್ಷಣೆ, ಈ ಹೋರಾಟಕ್ಕೆ ಬೆಂಬಲ ಎಂದರು.

ಬಿ.ಎಸ್.ಪಿ. ಪಕ್ಷದ ಜೈಭೀಮ್ ಮಾತನಾಡಿ, ಯಾವುದೇ ಜಾತಿಯ ವ್ಯಕ್ತಿ ಇಂತಹ ಅಪಸ್ವರ ನುಡಿದಾಗ ಆಯಾ ಜಾತಿಯ ಮುಖಂಡರೇ ಮೊದಲು ಅವನ್ನು ಅಲ್ಲಗಳೆಯಬೇಕು. ಉಳಿದವರು ತಪ್ಪದೇ ಬೆಂಬಲಿಸುವರು. ಬಸವ ಕೇಂದ್ರ ಅನುಭವ ಮಂಟಪವಾಗಿ ಎಲ್ಲರ ಒಗ್ಗೂಡಿಸಿ ಮುನ್ನೆಡೆಯಲಿ ನಾವು ಈ ಹೋರಾಟಕ್ಕೆ ಸಿದ್ಧ ಎಂದು ಬೆಂಬಲ ಘೋಷಿಸಿದರು.

ಆರ್ಐಎಂಎಸ್ ವೈದ್ಯಾಧಿಕಾರಿ ಡಾ. ರಮೇಶಬಾಬು ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ನಮಗೆ ಜ್ಞಾನ ಕೊಟ್ಟರು. ಸಂಘಟನೆ ಮೂಲಕ ವ್ಯಕ್ತಿಯ ಈ ಅಪಸ್ವರದ ಮಾತಿಗೆ “We never React, we should Respond” ರೀತಿ ಮೂಲಕ ಶಾಂತಿಯುತ ಹೋರಾಟ ನಡೆಸೋಣ ಎಂದರು.

ವಾಲ್ಮೀಕಿ ಸಂಘದ ಉಪಾಧ್ಯಕ್ಷ ಭೀಮರಾಯ ಮಾನಾಡಿ, ಬಸವಣ್ಣನವರನ್ನು ವಿಶ್ವಗುರು ಎಂದು ಒಪ್ಪಿಕೊಂಡಿರುವ ನಾವು ಈ ಹೋರಾಟದಲ್ಲಿ ಭಾಗವಹಿಸುವೆವು ಎಂದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಮಾತನಾಡಿ, ಪುಸ್ತಕ ಬ್ಯಾನ್ ಮಾಡಿಸುವುದು, ಕ್ಷಮಾಪಣೆ, ಮತ್ತು ಅವರಿಗೆ ಶಿಕ್ಷೆ ಕುರಿತು ಮಾತನಾಡಿ ಬಸವದಳ ಹೋರಾಟದಲ್ಲಿ ಭಾಗಿಯಾಗುತ್ತದೆ ಎಂದರು.

ರಾಯಚೂರು ಎಐಐಎಂಎಸ್ ಹೋರಾಟದ ಮುಖ್ಯಸ್ಥ
ಡಾ. ಬಸವರಾಜ ಕಳಸದ ಮಾತನಾಡಿ, ಅನೇಕ ದಲಿತ, ಹಿಂದುಳಿದ ಹೋರಾಟಗಾರರು ಬಂದಿದ್ದಾರೆ. ಲಿಂಗಾಯತ ಸಮಾಜ ಹೋರಾಟ ಮಾಡಲಿ ಬಿಡಲಿ, ಬಸವಣ್ಣನ ಇವನಾರವ ಎನ್ನದಿರಯ್ಯ, ಇವ ನಮ್ಮವ ಎನ್ನಯ್ಯ ಮಾತಿಗೆ ಬೆಲೆ ಕೊಟ್ಟು ನಾವು ಹೋರಾಟ ಮಾಡೇ ಮಾಡುತ್ತೇವೆ ಎಂಬ ವಕೀಲ ಎ. ಮಾರೆಪ್ಪ ಅವರ ಮಾತನ್ನು ನೆನಪಿಸಿಕೊಂಡು ಹೋರಾಟವನ್ನು ಬಸವ ಕೇಂದ್ರ ಅನುಭವ ಮಂಟಪವಾಗಿ ಲೀಡ್ ಮಾಡಲಿ ಎಂದರು.

ಸಮಾಜದ ಮುಖಂಡರು ಗಿರಿಜಾಶಂಕರ ಮಾತನಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್, ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮುಂತಾದವರನ್ನು ಕೊಲ್ಲುವ ಶಕ್ತಿಯೇ ಇಲ್ಲಿ ಕೆಲಸ ಮಾಡುತ್ತಿದೆ. ಈ ವಿಚಾರವೇ ಸಂವಿಧಾನ ವಿರೋಧಿಯಾದುದು. ಇದರ ವಿರುದ್ಧ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ ಮಾತನಾಡಿ, ಇಂತಹ ತಪ್ಪುಗಳನ್ನು ಹತ್ತಿಕ್ಕೋಣ ಎಂದ್ಹೇಳಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕೊನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಮಾತನಾಡಿ, ಬಸವಣ್ಣ ಹುಟ್ಟಿದ ಜೀವಿಗಳೆಲ್ಲರೂ ಸಮಾನರು. ಕಾರಣ ಈ ಅಸಮಾನತೆಯ ಬೀಜ ಹುಡುಕಿ ಅದರ ಪರಿಹಾರಕ್ಕೆ ಅಂಗೈಗೆ ಲಿಂಗ ಕೊಟ್ಟರು. ಬಯಸುವ ಎಲ್ಲರಿಗೂ ಲಿಂಗಧಾರಣೆ ಮಾಡಿ ಕಾಯಕದ ಸಂಸ್ಕಾರ ಕೊಟ್ಟರು.

ಅಂದು ಗಾಂಧಿ, ಅಂಬೇಡ್ಕರ್ ವಿರೋಧಿಸಿದ ವಿಚಾರಧಾರೆಗಳೆ ಇಂದು ಕೆಲಸ ಮಾಡಿವೆ. ರವಿ ಹಂಜ್ ರ ಕ್ಷಮಾಪಣೆಯಲ್ಲಿ ಪಶ್ಚಾತಾಪದ ಮಾತುಗಳಿಲ್ಲ. ಅಲ್ಲಿಯೂ ಅಹಂಕಾರದ ಮಾತು, ಕಾಟಾಚಾರದ ಕ್ಷಮಾಪಣೆಯಾಗಿದೆ. ಹೋರಾಟ ಮುಂದುವರೆಸೋಣ ಎಂದು ತಿಳಿಸಿದರು. ವಚನ ಪ್ರಾರ್ಥನೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *