ಬಸವ ಶಕ್ತಿ: ನೂರು ವರ್ಷದಿಂದ ಬಿದ್ದಿದ್ದ ಒಣಹುಲ್ಲಿಗೆ ಒಂದು ಕಡ್ಡಿ ಗೀರಿದ್ರ ಏನಾಗತೈತಿ?

ರವಿ ಹಂಜ್, ವಿಶ್ವೇಶ್ವರ ಭಟ್ಟರು ಸೃಷ್ಟಿಸಿರುವ ವಿವಾದ ರಾಷ್ಟ್ರಾದ್ಯಂತ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇದನ್ನು ಲಿಂಗಾಯತ ಸಮಾಜ ಹೇಗೆ ಅರ್ಥೈಸಬೇಕು, ಮುಂದೇನು ಮಾಡಬೇಕು ಎಂದು ಬಸವ ಮೀಡಿಯಾ ಕೇಳಿದ ಐದು ಪ್ರಶ್ನೆಗಳಿಗೆ ಇಂದು ಶರಣತತ್ವ ಚಿಂತಕ ವಿನಯ್ ಶಿರಹಟ್ಟಿಮಠ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು

1)ರವಿ ಹಂಜ್, ವಿಶ್ವೇಶ್ವರ ಭಟ್ಟರ ವಿರುದ್ದ ಆಕ್ರೋಶ ಪ್ರಕಟವಾಗುತ್ತಿದೆ. ಎಲ್ಲಾ ಸಂಘಟನೆ, ರಾಜಕಾರಣಿಗಳು ಒಮ್ಮತದಿಂದ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಣದಿದ್ದ ಇಷ್ಟು ದೊಡ್ಡ ಬೆಳವಣಿಗೆ ಆಗಿದ್ದು ಹೇಗೆ?

ನೂರು ವರ್ಷದಿಂದ ಹೊಲದಾಗ ಬಿದ್ದಿದ್ದ ಒಣಹುಲ್ಲಿಗೆ ಒಂದು ಕಡ್ಡಿ ಗೀರಿದ್ರ ಏನಾಗತೈತಿ? ಇದೂ ಹಂಗೇ ಆತು.

ಕಳೆದ ವರ್ಷದ ಬಸವ ಸಂಸ್ಕೃತಿ ಅಭಿಯಾನದ ನಂತರ ಹಳ್ಳಿ ಹುಡುಗರು ವಚನ ಹಾಡಾಕ ಶುರು ಮಾಡಿದ್ರು. ಅಂಥ ಹೊತ್ತಿನ್ಯಾಗ ಸಂದರ್ಶನದಾಗ “ಬಸವಣ್ಣ ಅಂಡ್ ಕಂಪನಿ” ಅನ್ನೋ ಮಾತು ಬಂತು. ತಮ್ಮನ್ನ ಟೀಕಿಸೋರಿಗೆ “ದಮ್ಮ ಇದ್ರೆ ಬಾರಪ್ಪ” ಅಂತ ಸವಾಲೂ ಬಂತು.

ಜನ ಆ ಸವಾಲನ್ನ ಸ್ವೀಕರಿಸಿದ್ರು, ಆದ್ರ ಠಾಣೆ ಮತ್ತು ಕೋರ್ಟಿನ ದಾರಿಯಿಂದ. ನನ್ನ ಫೇಸ್‌ಬುಕ್ ಪುಟ ಓದೋ ಜನರಲ್ಲಿ ಇಷ್ಟು ಸಿಟ್ಟು ನಾನು ಹಿಂದೆಂದೂ ನೋಡಿರಲಿಲ್ಲ. ರಾಜಕಾರಣಿಗಳು ಜನರ ನಾಡಿ ನೋಡಿ ನಡೀತಾರ. ಮಹಾಸಭಾದ ಖಂಡ್ರೆಯವರು, ಬಿಜೆಪಿಯ ವಿಜಯೇಂದ್ರರು, ಸಚಿವ ಎಂ.ಬಿ. ಪಾಟೀಲರು ಒಂದೇ ಸಾಲಿನ್ಯಾಗ ನಿಂತಿದ್ದು ಅದಕ್ಕ. ಪುಸ್ತಕ ಬಿಡುಗಡೆ ಆಗಿ ನಾಲ್ಕೇ ದಿನದಾಗ ಸಚಿವ ಸಂಪುಟ ಜಪ್ತಿಗೆ ಒಪ್ಪಿಗೆ ಕೊಡ್ತು.

ಬಸವಣ್ಣ ಇವತ್ತು ಒಂದು ಸಮುದಾಯದ ಗುರು ಅಷ್ಟೇ ಉಳದಿಲ್ಲ, ಸರ್ಕಾರವೇ ಘೋಷಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ. ಆ ಸ್ಥಾನಕ್ಕ ಕೈ ಹಾಕಿದ್ರ ಇಡೀ ನಾಡು ಎದ್ದು ನಿಲ್ಲತೈತಿ.

2)ಕೆಲವೊಂದು ಪುಸ್ತಕಗಳು ಮುಂಚೆಯೂ ಲಿಂಗಾಯತರ ಆಕ್ರೋಶ ಎದುರಿಸಿವೆ. ಆ ಘಟನೆಗಳಿಗೂ ರವಿ ಹಂಜ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಏನಾದರು ವ್ಯತ್ಯಾಸ ಕಾಣುತ್ತಿದೆಯೇ?

    ಹಿಂದಿನ ಘಟನೆಗಳಿಗೂ ಇದಕ್ಕೂ ನೆಲ ಆಕಾಶದ ವ್ಯತ್ಯಾಸ ಐತಿ. ಕಲಬುರ್ಗಿಯವರ “ಮಾರ್ಗ ೧”, ನಾರಾಯಣರ “ಧರ್ಮಕಾರಣ”, ಮಾತೆ ಮಹಾದೇವಿಯವರ “ಬಸವ ವಚನ ದೀಪ್ತಿ” ಬಂದಾಗ ಚರ್ಚೆ ನಮ್ಮ ನಾಡಿನ ಸಾಹಿತ್ಯ, ಸಂಶೋಧನೆಯ ಅಂಗಳದೊಳಗ ಇತ್ತು.

    ಆ ಲೇಖಕರ ಅಭಿಪ್ರಾಯ ನಮಗ ಒಪ್ಪಿಗೆ ಆಗದೇ ಇರಬಹುದು, ಆದ್ರ ಅವರು ಸಂಶೋಧನೆ, ಸಾಹಿತ್ಯ, ವಚನ ಸಂಪಾದನೆಯ ದಾರಿಯಾಗ ನಡದವರು.

    ಆ ದಾರಿಯ ಮೊದಲ ಹೆಜ್ಜೆ ಇಟ್ಟ ಫ.ಗು. ಹಳಕಟ್ಟಿಯವರು ವಚನ ಪ್ರಕಟಿಸಾಕ ತಮ್ಮ ಮನೆ ಮಾರಿದ್ರು, ಹೆಂಡತಿಯ ಒಡವೆ ಒತ್ತೆ ಇಟ್ರು.

    ಈ ಸಲ ಒಂದು ಪುಸ್ತಕ ಬಿಡುಗಡೆಗೆ ಮುಂಚೇನೇ ಮೂರು ಸಾವಿರ ಪ್ರತಿ ಮಾರಾಟ ಆಗೇದ ಅಂತ ಲೇಖಕರೇ ಹೇಳಿದ್ರು. ಮೂರು ದಿನದಾಗ ಕ್ಷಮೆ ವಿಡಿಯೋ ಬಂತು. ಆ ನಲವತ್ತೈದು ಸೆಕೆಂಡಿನ ವಿಡಿಯೋ ನಾನು ಪದಪದ ಕೇಳಿದೆ. “ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ” ಅಂತ ಶುರು, “ನೋವುಂಟಾಗಿದ್ದರೆ” ಅನ್ನೋ ಷರತ್ತು, ಕೊನೆಗೆ ಪ್ರತಿ ಜಿಲ್ಲೆಯಲ್ಲಿ ಮರುಬಿಡುಗಡೆ ಘೋಷಣೆ.

    ತಪ್ಪು ಕೇಳುಗರದು, ಪ್ರಚಾರ ತಮ್ಮದು. ಹಿಂದಿನದು ಸಂಶೋಧನೆಯ ಜಗಳ. ಇದು ಮಾರುಕಟ್ಟೆಯ ಲೆಕ್ಕ.

    3) ಲಿಂಗಾಯತ ಧರ್ಮದ ಹೋರಾಟದ ಮೇಲೆ, ಬಸವ ಸಂಘಟನೆಗಳ ಮೇಲೆ, ಒಟ್ಟಾರೆ ಲಿಂಗಾಯತ ಸಮಾಜದ ಮೇಲೆ ಈ ಘಟನೆ ಏನಾದರು ಪರಿಣಾಮ ಬೀರುತ್ತದೆಯೇ?

      ಪರಿಣಾಮ ಆಗೇ ಆಗತೈತಿ. ಅದು ಯಾವ ಕಡೆ ಹೋಗತೈತಿ ಅನ್ನೋದು ನಮ್ಮ ಕೈಯಾಗ ಐತಿ. ನನ್ನ ಪೋಸ್ಟ್‌ಗಳ ಕೆಳಗ ಈಗ ಒಂದು ಪ್ರಶ್ನೆ ಪದೇಪದೇ ಬರತೈತಿ. “ಬಸವಣ್ಣನ ನಿಂದನೆಗೆ ತಕ್ಷಣ ಕ್ರಮ, ಭಗವಾನರ ಮ್ಯಾಲೆ ಯಾಕಿಲ್ಲ?”

      ಇದು ಸಣ್ಣ ಪ್ರಶ್ನೆ ಅಲ್ಲ. ಈ ಹೋರಾಟವನ್ನ ಲಿಂಗಾಯತ ವಿರುದ್ಧ ಹಿಂದೂ ಜಗಳ ಅಂತ ತಿರುಗಿಸೋ ಪ್ರಯತ್ನ ಅದರೊಳಗ ಐತಿ. ನಾವು ಸಿಟ್ಟಿನಿಂದ ಉತ್ತರ ಕೊಟ್ರ ಆ ಬಲೆಗೆ ಬೀಳತೀವಿ. ದಾಖಲೆಯಿಂದ ಕೊಟ್ರ ಗೆಲ್ಲತೀವಿ.

      ಸಾಣೇಹಳ್ಳಿ ಶ್ರೀಗಳು ತಮ್ಮ ಭಕ್ತರಿಗೆ ವಚನ ಹಾಡ್ರಿ ಅಂದಿದ್ದಕ್ಕೂ, ಬಸವಣ್ಣನನ್ನ ಕಳ್ಳ ಅಂತ ಚಿತ್ರಿಸಿದ್ದಕ್ಕೂ ಇರೋ ವ್ಯತ್ಯಾಸ ತಿಳಿಸಿ ಹೇಳಬೇಕು. ಭಗವಾನರ ಮ್ಯಾಲೂ ಕೇಸು ಆಗ್ಯಾವ, ಕೋರ್ಟು ತೀರ್ಮಾನ ಕೊಟ್ಟೈತಿ ಅಂತ ಶಾಂತವಾಗಿ ಹೇಳಿದ ಕೂಡಲೇ ಚರ್ಚೆ ತಣ್ಣಗಾಗತೈತಿ.

      ಧರ್ಮ ಮಾನ್ಯತೆಯ ಹೋರಾಟಕ್ಕ ಈ ಘಟನೆ ಒಂದು ಪಾಠ ಕಲಿಸೇದ. ನಮ್ಮ ಶಕ್ತಿ ರಸ್ತೆಯ ಗದ್ದಲದಾಗ ಇಲ್ಲ, ಕಾಗದದ ದಾಖಲೆಯಾಗ ಐತಿ. ಬಸವ ಸಂಘಟನೆಗಳು ಈ ಸಿಟ್ಟು ಆರೋದ್ರೊಳಗ ಊರೂರಿನ್ಯಾಗ ವಚನ ಓದಿನ ಗುಂಪು ಕಟ್ಟಿದ್ರ ಮುಂದಿನ ಪೀಳಿಗೆಗೆ ಅದೇ ದೊಡ್ಡ ಆಸ್ತಿ.

      4) ಲಿಂಗಾಯತ ವೀರಶೈವ ಸಂಬಂಧದ ಮೇಲೆ ಈ ಘಟನೆ ಏನಾದರು ಪರಿಣಾಮ ಬೀರುತ್ತದೆಯೇ?

        ನನ್ನ ಪ್ರಕಾರ ಈ ಘಟನೆ ಎರಡು ಕಡೆಯವರ ನಡುವೆ ಒಂದು ಸೇತುವೆ ಕಟ್ಟೋ ಅವಕಾಶ ಕೊಟ್ಟೈತಿ. ಮದುವೆ ಮನೆಯಾಗ ಬೀಗರ ನಡುವೆ ಸಣ್ಣಪುಟ್ಟ ಮುನಿಸು ಇರತೈತಿ. ಆದ್ರ ಯಾರಾದ್ರೂ ಮದುಮಗಳಿಗೆ ಅವಮಾನ ಮಾಡಿದ್ರ ಎರಡೂ ಕಡೆಯವರು ಒಟ್ಟಿಗೇ ಎದ್ದು ನಿಲ್ಲತಾರ. ಇಲ್ಲಿ ಆದದ್ದೂ ಅದೇ.

        ವೀರಶೈವ ಮಹಾಸಭಾದ ಅಧ್ಯಕ್ಷರು ಪುಸ್ತಕ ಜಪ್ತಿ ಕೇಳಿದ್ರು. ಎಂ.ಬಿ. ಪಾಟೀಲರು ಬಸವಣ್ಣನ ವಿಷಯದಾಗ ನಾವೆಲ್ಲಾ ಒಂದೇ ಅಂದ್ರು. ಇತಿಹಾಸದ ಭಿನ್ನಾಭಿಪ್ರಾಯ ಇದ್ದೇ ಇರತೈತಿ, ಅದನ್ನ ವಿಚಾರ ಸಂಕಿರಣದಾಗ, ಪುಸ್ತಕದ ಪುಟದಾಗ ಗೌರವದಿಂದ ಚರ್ಚೆ ಮಾಡೋಣ.

        ಬಸವಣ್ಣನ ಭಾವಚಿತ್ರ ಎರಡೂ ಕಡೆಯ ಮನೆಯ ಗೋಡೆ ಮ್ಯಾಲೆ ಐತಿ. ಆ ಫೋಟೋ ಮುಂದ ನಿಂತು ಜಗಳ ಆಡೋದು ನಮಗ ಶೋಭೆ ತರಂಗಿಲ್ಲ. ಈ ಹೊತ್ತಿನ್ಯಾಗ ಅಹಂ ಬಿಟ್ಟು ಮಾತಾಡೋದು ಮುಖ್ಯ. ಬಸವಣ್ಣ ಹೇಳ್ಯಾನ, “ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.”

        ಎರಡೂ ಕಡೆಯ ಹಿರಿಯರು ಈ ಒಂದು ಸಾಲನ್ನ ಎದೆಯಾಗ ಇಟ್ಕೊಂಡು ಒಂದು ವೇದಿಕೆ ಮ್ಯಾಲೆ ಕುಂತು ಮಾತಾಡಿದ್ರ, ಹಂಜ್ ಸಾಹೇಬರು ಬಿತ್ತಿದ ಗೊಂದಲಕ್ಕಿಂತ ದೊಡ್ಡ ಬೆಳೆ ಅದರಿಂದ ಬರತೈತಿ.

        5) ರವಿ ಹಂಜ್ ಹಿಂದೆ ಯಾವುದಾದರು ಸಂಘಟನೆಗಳಿವೆಯಾ? ಅವರ ಉದ್ಧೇಶವೇನು? ಅವರನ್ನು ಲಿಂಗಾಯತರು ಹೇಗೆ ನಿಭಾಯಿಸಬೇಕು?

          ಯಾವ ಸಂಘಟನೆ ಹಿಂದ ಐತಿ ಅನ್ನೋದಕ್ಕ ನನ್ನ ಬಳಿ ದಾಖಲೆ ಇಲ್ಲ. ಅದಕ್ಕ ನಾನು ಯಾರ ಹೆಸರೂ ಹೇಳಂಗಿಲ್ಲ. ಆದ್ರ ಕೆಲವು ಲೆಕ್ಕ ಎಲ್ಲಾರ ಮುಂದ ಇಡಬೇಕು.

          ಅವರು ಪ್ರತಿ ಜಿಲ್ಲೆಯಲ್ಲಿ ಮರುಬಿಡುಗಡೆ ಮಾಡ್ತೀವಿ ಅಂದಾರ. ಕರ್ನಾಟಕದಾಗ ಮೂವತ್ತೊಂದು ಜಿಲ್ಲೆ. ಒಂದು ಕಾರ್ಯಕ್ರಮಕ್ಕ ಐವತ್ತು ಸಾವಿರ ಖರ್ಚು ಅಂದ್ರೂ ಹದಿನೈದೂವರೆ ಲಕ್ಷ ರೂಪಾಯಿ. ನನ್ನ ಅಂದಾಜಿನ ಪ್ರಕಾರ ಅದನ್ನ ತುಂಬಾಕ ಏಳು ಸಾವಿರಕ್ಕೂ ಹೆಚ್ಚು ಪ್ರತಿ ಮಾರಬೇಕು.

          ನಾನು ನೋಡಿದಾಗ ಅಮೆಜಾನ್‌ನ್ಯಾಗ ಆ ಪುಸ್ತಕ ಹೊಸ ಬಿಡುಗಡೆಗಳ ಪಟ್ಟಿಯಾಗ ಮೂವತ್ತೆಂಟನೇ ಸ್ಥಾನದಾಗ ಐತಿ.

          ಹಂಗಾದ್ರ ಈ ಪ್ರವಾಸದ ಖರ್ಚು ಯಾರು ಹೊರತಾರ? ಇದು ಆರೋಪ ಅಲ್ಲ, ಪ್ರಶ್ನೆ. ಉತ್ತರ ಅವರೇ ಕೊಡಬೇಕು. ನಾವು ನಿಭಾಯಿಸೋ ದಾರಿ ಸರಳ. ಕೇಸನ್ನ ಕೊನೆತನಕ ಬಿಡದೇ ನಡಸೋದು.

          ಅವರು ಯಾವ ಜಿಲ್ಲೆಗೆ ಬರತಾರೋ ಅದೇ ದಿನ ಅದೇ ಊರಿನ್ಯಾಗ ವಚನ ಓದಿನ ಸಭೆ ಮಾಡೋದು. ಅವರು ಪುಸ್ತಕ ಮಾರಲಿ, ನಾವು ವಚನ ಹಂಚೋಣ. ಜನ ಯಾವುದನ್ನ ಮನೆಗೆ ತಗೊಂಡು ಹೋಗತಾರೋ ನೋಡೋಣ.

          ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
          https://chat.whatsapp.com/LKx5yQpivBVC6opWuKbovh

          Share This Article
          Leave a comment

          Leave a Reply

          Your email address will not be published. Required fields are marked *