ಬೈಲಹೊಂಗಲ :
ಬಸವಣ್ಣನವರು, ವಚನ ಸಾಹಿತ್ಯ, ಲಿಂಗಾಯತರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟರ ವಿರುಧ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಈಚೆಗೆ ವಿವಿಧ ಬಸವಪರ ಸಂಘಟನೆಗಳು ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದವು.
ಲಿಂಗಾಯತ ಸಮಾಜದ ಮುಖಂಡರಾದ ಶ್ರೀಶೈಲ ಬೋಳನ್ನವರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ ಅವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.
ಬಸವ ಮಂಟಪ ವಿವಾದಾತ್ಮಕ ಕೃತಿ ಹಾಗೂ ವಿಶ್ವವಾಣಿ ಪತ್ರಿಕೆಯನ್ನು ಮುಟ್ಟುಗೋಲು ಹಾಕಲು ಹಾಗೂ ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಜರಗಿಸಲು ವಿವಿಧ ಬಸವಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸರಕಾರಕ್ಕೆ ಒತ್ತಾಯಿಸಿದವು.
ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕನಿಗೆ ಆದ ಅನ್ಯಾಯ ಕರ್ನಾಟಕ ಅಷ್ಟೇ ಅಲ್ಲ, ವಿಶ್ವಮಾನ್ಯ ತತ್ವ ಸಂದೇಶ ಸಾರುವ ವಚನ ಸಾಹಿತ್ಯವನ್ನು ಒಪ್ಪಿಕೊಂಡಿರುವ ಜಗತ್ತು ಇದನ್ನು ಸಹಿಸುವುದಿಲ್ಲ. ಕೂಡಲೇ ಸಂಬಂಧಿಸಿದ ಎಲ್ಲ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟಗಿ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಕಾಯಕ ದಾಸೋಹದ ಪರಿಕಲ್ಪನೆಯಲ್ಲಿ ವಿಶ್ವವನ್ನೇ ಪ್ರೀತಿಸಿದ ಅಪ್ಪ ಬಸವ ತಂದೆಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಅಕ್ಷಮ್ಯ ಅಪರಾಧ. ಸಂಬಂಧಿತರಿಗೆ ಶಿಕ್ಷೆ ಆಗಲೇಬೇಕು ಎಂದರು.
ರಾಷ್ಟ್ರೀಯ ಬಸವ ದಳದ ವಿರೇಶ ಹಲಕಿ ಅವರು ಮನವಿಪತ್ರ ಓದಿ ಪೊಲೀಸ್ ಅಧಿಕಾರಿಗಳಿಗೆ ವಿಷಯ ಮನವರಿಕೆ ಮಾಡಿದರು.
ಜನಪದ ಸಾಹಿತ್ಯ ತಾಲೂಕ ಘಟಕದ ಅಧ್ಯಕ್ಷ ಚಂದ್ರಣ್ಣ ಕೊಪ್ಪದ, ಸ್ವಾನುಭಾವ ನೆಲೆಯ ಶಿವಾನಂದ ಅರಭಾಂವಿ, ಮಡಿವಾಳಪ್ಪ ಸಂಗೊಳ್ಳಿ, ಬಸವ ಕೇಂದ್ರದ ನೇಗಿನಹಾಳದ ಬಸವರಾಜ ಹುಬ್ಬಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾ ನಗರ ಘಟಕದ ಅಧ್ಯಕ್ಷ ಮಹೇಶ ಕೋಟಗಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಡಾ. ಎ. ಎನ್. ಬಾಳಿ, ಎಸ್. ಎಂ. ಪಾಟೀಲ, ನಾಗನಗೌಡ ಪಾಟೀಲ, ಶಂಕರಗೌಡ ಪಾಟೀಲ, ಗಂಗಣ್ಣ ಅಂಗಡಿ, ಮಹದೇವ ಕರಡಿಗುದ್ದಿ, ಈರಣ್ಣ ಸಣ್ಣಮನಿ, ಗೀತಾ ಅರಳಿಕಟ್ಟಿ, ಅಶ್ವಿನಿ ಮಸ್ತನ್ನವರ, ಸುಮಾ ಸವದಿ, ಲೀಲಾ ಪಟ್ಟಣಶೆಟ್ಟಿ, ಶೋಭಾ ಛಬ್ಬಿ, ರಾಷ್ಟ್ರೀಯ ಬಸವದಳ, ಮುಕ್ತಾಯಕ್ಕ ಅಜಗಣ್ಣ ಬಳಗ ತಾಲೂಕಿನಾದ್ಯಂತ ಅನೇಕ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿ, ಪ್ರಕರಣ ದಾಖಲಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
