ಹಂಜ್, ಭಟ್ಟರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಶಿವಮೊಗ್ಗ :
12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಮಹಾಮಾನವತಾವಾದಿ, ಹಾಗೂ ಸಾಂಸ್ಕೃತಿಕ ನಾಯಕ ಗುರು ಬಸವಣ್ಣನವರ ಕುರಿತು ವಿವಾದಾತ್ಮಕ ಕೃತಿಯ ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ಟರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಬಸವದಳ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಆಗ್ರಹಿಸಿವೆ.
ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾ ಆಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.

ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯದ ಮೌಲ್ಯ ಹಾಗೂ ಕಲ್ಯಾಣ ಕ್ರಾಂತಿಯ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡದೆ, ಸಂಶೋಧನೆಯ ಹೆಸರಿನಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದ ಬಸವ ತತ್ವದ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸಂಶೋಧನೆಗಳು ಮಾನವ ಬದುಕಿನ ವಿಕಾಸಕ್ಕೆ ಪೂರಕವಾಗಿರಬೇಕೇ ಹೊರತು ದ್ವೇಷ, ಅಸೂಯೆಗಳಿಗೆ ಕಾರಣವಾಗಿರಬಾರದು. ಬಸವಣ್ಣನವರ ವ್ಯಕ್ತಿತ್ವ, ಅವರ ಮಹತ್ವಕ್ಕೆ ಅವರ ವಚನಗಳೇ ಸಾಕ್ಷಿಯಾಗಿವೆ. ಅಂತಹ ಮಹಾನ್ ಸಂತನ ಘನತೆಗೆ ಧಕ್ಕೆ ತರುವುದು ನಾಡಿನ ಸಾಂಸ್ಕೃತಿಕ ಪರಂಪರೆ, ಶರಣ ಸಂಸ್ಕೃತಿಗೆ ಮಾಡಿದ ಅಪಚಾರವಾಗಿದೆ.

ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ಭಟ್ಟರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ
ಕೈಗೊಳ್ಳಬೇಕು. ಇನ್ನು ಮುಂದೆ ಬಸವಣ್ಣನವರ ಘನತೆಗೆ ಧಕ್ಕೆ ತರುವ ಕೃತ್ಯಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸುವಂತೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಟ್ರಸ್ಟ್ನ ಗೌರವ ಅಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ, ಯೋಗೀಶ ನಿರ್ವಿಕಲ್ಪ, ಹೆಚ್.ಸಿ. ಯೋಗೇಶ, ಅನುಸೂಯಮ್ಮ, ರತ್ನಮ್ಮ, ಶಿವರುದ್ರಪ್ಪ, ಎ.ಸಿ. ಮೂಲಿಮನಿ, ಸತೀಶ, ಮಹೇಶ್ವರಪ್ಪ, ಹಾಲೇಶಗೌಡ್ರು, ಜಿ.ಎಸ್. ಶಿವಕುಮಾರ ಸೇರಿದಂತೆ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
