‘ಬಸವ ಮಂಟಪ’ ಪುಸ್ತಕ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಎಫ್‌ಐಆರ್

ಬಸವ ಮೀಡಿಯಾ
ಬಸವ ಮೀಡಿಯಾ

ಸಾರ್ವಜನಿಕ ಶಾಂತಿ ಭಂಗ, ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಬಿಎನ್‌ಎಸ್ ಸೆಕ್ಷನ್ 192, 196(1), 353(2), 299ರಡಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು

ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಶಬ್ಧ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಂಶೋಧಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ರವಿ ಹಂಜ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದರು.

ಬಸವ ಮಂಟಪ ಕೃತಿಗೆ ಸಂಬಂಧಿಸಿದಂತೆ ಬಸವ ಸಮಿತಿಯವರು ಮುಖ್ಯಮಂತ್ರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ದೂರಿನನ್ವಯ ಲೇಖಕ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ಟರ ವಿರುದ್ಧ ಸಾರ್ವಜನಿಕ ಶಾಂತಿ ಭಂಗ, ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಬಿಎನ್‌ಎಸ್ ಸೆಕ್ಷನ್ 192, 196(1), 353(2), 299ರಡಿ ಎಫ್‌ಐಆರ್ ದಾಖಲಾಗಿದೆ.

ಬಸವ ಸಮಿತಿ ದೂರು

ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಲೇಖಕನ ವಿರುದ್ಧ ಬಸವ ಸಮಿತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಿದೆ.

ಅನಿವಾಸಿ ಭಾರತೀಯ ಹಾಗೂ ಲೇಖಕ ರವಿ ಹಂಜ್ ಮತ್ತು ಅವರ ಸಂದರ್ಶನ ಪ್ರಸಾರಕ್ಕೆ ವೇದಿಕೆ ಒದಗಿಸಿದ್ದ ವಿಶ್ವವಾಣಿಯ ಸಂಪಾದಕ ವಿಶ್ವೇಶ್ವರ ಭಟ್ಟರ ವಿರುದ್ಧವೂ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ದೂರು ನೀಡಿದ್ದಾರೆ.

ಬಸವಣ್ಣ ಅವರ ಕುರಿತಂತೆ ಬಸವ ಮಂಟಪ ಪುಸ್ತಕ ಬರೆದಿರುವ ರವಿ ಹಂಜ್ ಅವರು ನವೆಂಬರ್​15ರಂದು ಕೆ. ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದರು. ಪುಸ್ತಕ ಬಿಡುಗಡೆಗೂ ಮುನ್ನ ನ.13ರಂದು ಪತ್ರಿಕೆಯೊಂದರ ಯುಟ್ಯೂಬ್ ವಾಹಿನಿಯಲ್ಲಿ ಬಸವಣ್ಣ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ ಎಂಬ ಆರೋಪ ಇದೆ.

ಇಷ್ಟೇ ಅಲ್ಲದೆ, ಫೇಸ್​ಬುಕ್ ಖಾತೆ ಹಾಗೂ ಪ್ರತ್ಯೇಕ ಯೂಟ್ಯೂಬ್ ಚಾನಲ್​ನಲ್ಲಿ ಪ್ರಸಾರವಾದ ವಿಡಿಯೋಗಳು ಬಸವಣ್ಣನವರ ವಚನ ಪರಂಪರೆ ಹಾಗೂ ಲಿಂಗಾಯತ ಧರ್ಮದ ಪೂಜ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಲಿಂಕ್ ಸಮೇತ ಜತ್ತಿ ಅವರು ದೂರಿನಲ್ಲಿ ಲಗತ್ತಿಸಿದ್ದಾರೆ.

ಶರಣ ಪರಂಪರೆ ಅಥವಾ ಲಿಂಗಾಯತ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಸಮಾಜದ ಶಾಂತಿ ಕದಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಲೇಖಕ ಹಾಗೂ ಪ್ರಸಾರಕ್ಕೆ ವೇದಿಕೆ ಮಾಡಿಕೊಟ್ಟ ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅರವಿಂದ ಜತ್ತಿ ಉಲ್ಲೇಖಿಸಿದ್ದಾರೆ.

ದೂರು ಕೊಟ್ಟ ಬಳಿಕ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನ ಮಾಡಿದವರಿಗೆ ಶಿಕ್ಷೆ ಆಗಬೇಕು. ಹೀಗಾಗಿ ದೂರು ಕೊಟ್ಟಿದ್ದೇವೆ. ಅವಹೇಳನಕಾರಿ ಹೇಳಿಕೆಯಿಂದ ವಿಶ್ವದಾದ್ಯಂತ ಬಸವಣ್ಣ ಅಭಿಮಾನಿಗಳಿಗೆ ನೋವಾಗಿದೆ ಎಂದು ಬೇಸರ ಹೊರ ಹಾಕಿದರು.

ಎಂ ಬಿ ಪಾಟೀಲ್ ಸಂತಸ

ರವಿ ಹಂಜ್ ವಿವಾದದ ತ್ವರಿತವಾಗಿ ಸ್ಪಂದಿಸಿರುವ ಸರ್ಕಾರದ ಕ್ರಮದ ಬಗ್ಗೆ ಸಚಿವ ಎಂ ಬಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಷಯದ ಮೇಲೆ ನೀಡಿರುವ ಹೇಳಿಕೆಯಲ್ಲಿ “ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಪರಂಪರೆಯ ಘನತೆಗೆ ಧಕ್ಕೆ ತರುತ್ತಿರುವ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಾಯಿಸಿದೆ.

ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೆ.ಎಚ್. ಮುನಿಯಪ್ಪ, ಬಸವರಾಜ ರಾಯರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ವಿಜಯಾನಂದ ಕಾಶಪ್ಪನವರ, ಎಸ್.ಎಸ್. ಮಲ್ಲಿಕಾರ್ಜುನ, ಈಶ್ವರ ಖಂಡ್ರೆ ಸೇರಿದಂತೆ ಸಂಪುಟದ ಸಚಿವರು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.

ಎಲ್ಲ ಸಚಿವರ ಒಗ್ಗಟ್ಟಿನ ನಿಲುವಿಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇಂದಿನ ಸಚಿವ ಸಂಪುಟದ ಒಗ್ಗಟ್ಟಿನ ಧ್ವನಿ ಬಸವಣ್ಣನವರ ಅನುಯಾಯಿಗಳಿಗೆ ಮಾತ್ರವಲ್ಲ, ಬಸವತತ್ವದಲ್ಲಿ ನಂಬಿಕೆಯಿಟ್ಟಿರುವ ಸಮಸ್ತ ಕನ್ನಡಿಗರಿಗೆ ಭರವಸೆಯ ಸಂದೇಶವಾಗಿದೆ,” ಎಂದು ಹೇಳಿದ್ದಾರೆ.

ಖಂಡ್ರೆ ಧನ್ಯವಾದ

ಬಸವಣ್ಣ ಹಾಗೂ ಲಿಂಗಾಯತರನ್ನು ಅವಹೇಳನ ಮಾಡಿರುವ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ಹಾಗೂ ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಸಚಿವ ಈಶ್ವರ ಬಿ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.

ರವಿ ಹಂಜಿ ಬಸವಣ್ಣನವರ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳ ವಿಡಿಯೋಗಳನ್ನು ಸಾಮಾಜಿಕ ತಾಣಗಳಿಂದ ಈ ಕುರಿತ ಎಲ್ಲ ವಿಡಿಯೋ ತೆಗೆದು ಹಾಕುವಂತೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದೂ ತಿಳಿಸಿದ್ದಾರೆ.

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನಂತಹ ಮಹಾಪುರಷರ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಸಂಪುಟದ ಸಹೋದ್ಯೋಗಿಗಳಾದ ಎಂ.ಬಿ. ಪಾಟೀಲ್, ಡಾ.ಶರಣ ಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಬಸವರಾಜ ರಾಯರೆಡ್ಡಿ, ವಿ.ಮುನಿಯಪ್ಪ ಸೇರಿದಂತೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯವರು ಈ ನಿರ್ಣಯಕ್ಕೆ ಅನುಮೋದನೆ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.

ಯಡಿಯೂರಪ್ಪ ಖಂಡನೆ

ರವಿ ಹಂಜ್ ಖಂಡಿಸಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ:

“12ನೇ ಶತಮಾನದಲ್ಲಿಯೇ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಮತ್ತು ದಾಸೋಹದ ಮೂಲಕ ಮನುಕುಲಕ್ಕೆ ಹೊಸ ದಿಕ್ಕು ತೋರಿದ ವಿಶ್ವಗುರು ಅಣ್ಣ ಬಸವಣ್ಣನವರು ಕನ್ನಡ ನಾಡಿನ ಹೆಮ್ಮೆ ಮಾತ್ರವಲ್ಲ, ಇಡೀ ವಿಶ್ವದ ಮಾನವೀಯ ಮೌಲ್ಯಗಳ ಪ್ರತೀಕ.

ಇತ್ತೀಚೆಗೆ ಕೃತಿಕಾರ ರವಿ ಹಂಜ್ ಅವರ “’ಬಸವ ಮಂಟಪ’ ಕೃತಿಯಲ್ಲಿ ಅಣ್ಣ ಬಸವಣ್ಣನವರ ಗೌರವ ಮತ್ತು ಚಿಂತನೆಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಉಲ್ಲೇಖಿಸಿರುವುದಾಗಿ ಹೇಳಲಾಗುತ್ತಿದ್ದು, ಜಗಜ್ಯೋತಿ ಬಸವೇಶ್ವರರ ಬಗ್ಗೆ ಯಾರೇ ಕೀಳಾಗಿ ಮಾತನಾಡಿದ್ದರೂ ಅದನ್ನು ಅತ್ಯಂತ ಕಟುವಾಗಿ ಮತ್ತು ತೀವ್ರವಾಗಿ ಖಂಡಿಸುತ್ತೇನೆ,” ಎಂದು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
6 Comments
  • ಬಿಜೆಪಿಯ ಬಕೆಟ್ ನಾಯಕರು ಎಲ್ಲಿ ಹೋಗಿದ್ದಾರೆ ಯಡಿಯೂರಪ್ಪ ಮತ್ತು ವಿಜಯೇಂದ್ರನ ಬಿಟ್ಟು ಯಾವನು ಮಾತಾಡಿಲ್ಲ. ಎಲ್ಲಿದ್ದೀಯಪ್ಪ ಬಸವನಗೌಡ.

  • ಬಿಜೆಪಿಯ ಬಕೆಟ್ ನಾಯಕರು ಎಲ್ಲಿ ಹೋಗಿದ್ದಾರೆ ಯಡಿಯೂರಪ್ಪ ಮತ್ತು ವಿಜಯೇಂದ್ರನ ಬಿಟ್ಟು ಯಾವನು ಮಾತಾಡಿಲ್ಲ. ಎಲ್ಲಿದ್ದೀಯಪ್ಪ ಬಸವನಗೌಡ. ಕನ್ನೆರಿಯನ್ನು ಬೆಳೆಸುತ್ತಿರುವ ಮಹಾ ನಾಯಕರೆ ತಿಳಿದುಕೊಳ್ಳಿ.

  • ಒಳ್ಳೆಯ ಸಂತಸ ಸಮಾಚಾರ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ ಐ ಆರ್ ದಾಖಲಿಸಿದಕ್ಕೆ ಜೈ ಬಸವ ಶರಣು ಶರಣಾರ್ಥಿ

  • ಅತ್ಯಂತ ಸಂತೋಷದ ಸುದ್ದಿ ನೀಡಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು ರವಿ ಅಂಜಿ ಹಾಗೂ ವಿಶ್ವೇಶ್ವರ ಭಟ್ ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು

  • ಒಳ್ಳೆಯ ಸಂತಸ ಸಮಾಚಾರ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ ಐ ಆರ್ ದಾಖಲಿಸಿದಕ್ಕೆ ಜೈ ಬಸವ ಶರಣು ಶರಣಾರ್ಥಿ

  • ಸರಿಯಾದ ನಿರ್ಣಯ ಸರಿಯಾಗಿ ಶರಣರು ತತ್ವವರಿಯದೆ ಸಮಾಜದ ಶಾಂತಿ ಕದಡುವ ಇಂತಹ ಕುತಂತ್ರಿಗಳಿಗೆ ಶಿಕ್ಷೆ ಆಗಲೇಬೇಕು.

Leave a Reply

Your email address will not be published. Required fields are marked *