ಸುದ್ದಿಗೋಷ್ಠಿ ನಂತರ ಆರೆಸ್ಸೆಸ್ ರಕ್ಷಣೆಗೆ ಬಂದ ವಿಜಯೇಂದ್ರ
ಬೆಂಗಳೂರು
ಬಸವ ನಿಂದಕ ರವಿ ಹಂಜ್ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಪೊಲೀಸ್ ತನಿಖೆ ನಡೆಸುವಂತೆ ಶಾಸಕ ಬಿ ಆರ್ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಕರೆ ಕೊಟ್ಟಿದ್ದಾರೆ.
“ಈ ವಿಷಯ ಗೋಪ್ಯವಾಗೇನು ಉಳಿದಿಲ್ಲ ರವಿ ಹಂಜ್ ಅವರ ಮೂಲಕ ಬಸವಣ್ಣನವರಿಗೆ ಅವಮಾನ ಮಾಡುವಲ್ಲಿ ಆರ್ಎಸ್ಎಸ್ನ ಕೈವಾಡವಿದೆ. ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚಿಸಬೇಕು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಶನಿವಾರ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಹೇಳಿಕೆಯನ್ನು ಪುಷ್ಟಿಕರಿಸಲು ಕೆಲವು ಉದಾಹರಣೆಗಳನ್ನು ಹೇಳಿದರು.
“ಎರಡು ವರ್ಷದ ಹಿಂದೆ ಶರಣರ ವಚನಗಳನ್ನು ತಿರುಚಲು ಪ್ರಕಟವಾದ ‘ವಚನ ದರ್ಶನ’ ಕೃತಿಯನ್ನು ಆರ್ಎಸ್ಎಸ್ನ ಎರಡು ಸಂಸ್ಥೆಗಳು ಪ್ರಕಟಿಸಿದ್ದವು. ದತ್ತಾತ್ರೇಯ ಹೊಸಬಾಳೆ, ಬಿ.ಎಲ್.ಸಂತೋಷ್ ಸೇರಿದಂತೆ ಆರ್ಎಸ್ಎಸ್ನ ಅನೇಕ ಹಿರಿಯ ಪದಾಧಿಕಾರಿಗಳು ಆ ಪುಸ್ತಕವನ್ನು ಒಂಬತ್ತು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದರು.
ವೀಣಾ ಬನ್ನಂಜೆ ಅವರ ಮೂಲಕ ‘ಅನುಭವ ಮಂಟಪವೇ ಇರಲಿಲ್ಲ’ ಎಂದು ಹೇಳಿಸಿದ್ದರು. ಶರಣರ ಬಗ್ಗೆ ತಪ್ಪು ಕಲ್ಪನೆ ಮೂಡಿಸಲು ಒಂದು ಸಿನೆಮಾ ಕೂಡ ತೆಗೆದರು. ಈ ಎಲ್ಲದರ ಹಿಂದೆ ಆರ್ಎಸ್ಎಸ್ ನೇರವಾಗಿ ಭಾಗಿಯಾಗಿತ್ತು,” ಎಂದು ಆರೋಪಿಸಿದರು.

ಹಂಜಿಗೆ ವಿಶ್ವೇಶ್ವರ ಭಟ್ಟರ ಕುಮ್ಮುಕ್ಕು
ಒಂದೂವರೆ ವರ್ಷಗಳಿಂದ ನಡೆದು ಬರುತ್ತಿರುವ ರವಿ ಹಂಜಿನ ಅವಹೇಳನಕಾರಿ ಬರಹಗಳಿಗೆ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರ ಕುಮ್ಮಕ್ಕೇ ಕಾರಣ ಎಂದು ಜಾಮದಾರ್ ಹೇಳಿದರು.
“ರವಿ ಹಂಜ್ ಬರೆದಿದ್ದ ಒಂದು ಸಣ್ಣ ಲೇಖನ ನೋಡಿ ಅದನ್ನೇ ಅಂಕಣದ ರೂಪದಲ್ಲಿ ಸರಣಿ ಲೇಖನಗಳನ್ನಾಗಿ ಬರೆಯಿರಿ ಎಂದು ವಿಶ್ವೇಶ್ವರ ಭಟ್ಟರು ಹೇಳಿದ್ದರಂತೆ. ಇದನ್ನು ಹಂಜ್ ಅವರೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಟ್ಟರ ಸಮ್ಮುಖದಲ್ಲಿಯೇ ಹೇಳಿದ್ದಾರೆ. ವಿಶ್ವೇಶ್ವರ ಭಟ್ಟ ಅವರ ಹಿಂದೆ ಯಾರಿದ್ದಾರೆ,” ಎಂದು ಜಾಮದಾರ್ ಪ್ರಶ್ನಿಸಿದರು.
‘ರವಿ ಹಂಜ್ ಬರಹಗಳನ್ನು ವಿರೋಧಿಸಿ ಹಲವರು ಆ ಪತ್ರಿಕೆಗೆ ಪತ್ರ ಬರೆದಿದ್ದರು. ಫೇಸ್ಬುಕ್ನಲ್ಲಿಯೂ ಆಕ್ಷೇಪ ದಾಖಲಿಸಿದ್ದರು. ಆದರೆ ಅವರು ಆ ಎಲ್ಲರನ್ನೂ ಕೆಟ್ಟ ಭಾಷೆಯಲ್ಲಿ ‘ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಮ್ಮ ಹುಡುಗರು ನೋಡಿಕೊಳ್ಳುತ್ತಾರೆ’ ಎಂದು ಜೀವ ಬೆದರಿಕೆ ನೀಡಿದ್ದಾರೆ. ಇಂತಹ ಬೆದರಿಕೆಗಳ ವಿರುದ್ಧ ಈಗ ದೂರು ನೀಡಲಾಗುತ್ತಿದೆ,” ಎಂದು ಮಾಹಿತಿ ನೀಡಿದರು.
ಭಟ್ಟರು ಈ ಹಿಂದೆಯೂ ಶಾಂತಿ ಕದಡುವ ಕೆಲಸ ಮಾಡಿದ್ದಾರೆ’ ಎಂದು ಜಾಮದಾರ ದೂರಿದರು.
‘ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಯು.ಆರ್.ಅನಂತಮೂರ್ತಿ ಬರೆದಿದ್ದನ್ನೇ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನು ಕಲಬುರ್ಗಿ ಅವರೇ ಹಿಂದೂಗಳ ಅವಹೇಳನ ಮಾಡಲು ಹೇಳಿದ್ದ ಮಾತುಗಳು ಎಂಬಂತೇ ಬಿಂಬಿಸಿ ತಾವು ಹಿಂದೆ ಸಂಪಾದಕರಾಗಿದ್ದ ಪತ್ರಿಕೆಯಲ್ಲಿ ಸಾಲು–ಸಾಲು ವರದಿಗಳನ್ನು ವಿಶ್ವೇಶ್ವರ ಭಟ್ಟ ಪ್ರಕಟಿಸಿದ್ದರು’ ಎಂದು ಆರೋಪಿಸಿದರು.
‘ಆ ವರದಿಗಳಿಂದ ಕುಮ್ಮಕ್ಕು ಪಡೆದ ಗುಂಪೇ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿತು. ನಾನು ಆಗಲೇ ವಿಶ್ವೇಶ್ವರ ಭಟ್ಟರನ್ನು ಅರೆಸ್ಟ್ ಮಾಡಬೇಕೆಂದು ಹೇಳಿದ್ದೆ.
ಅದೇ ಗುಂಪು ಗೌರಿ ಲಂಕೇಶ್ ಅವರನ್ನೂ ಕೊಂದಿತು. ಈ ಎರಡೂ ಪ್ರಕರಣಗಳಲ್ಲಿ ಇನ್ನೂ ಶಿಕ್ಷೆಯಾಗಿಲ್ಲ. ಇಂತಹ ಕುಮ್ಮಕ್ಕು ನೀಡುವ ಕೆಲಸವನ್ನು ಮಾಡುತ್ತಲೇ ಬಂದಿರುವ ವಿಶ್ವೇಶ್ವರ ಭಟ್ ಈಗ ಸಮಾಜದ ಶಾಂತಿ ಕದಡುತ್ತಿದ್ದಾರೆ,” ಎಂದರು.

ಬಸವಣ್ಣನವರನ್ನು ಸಹಿಸಲಾಗುತ್ತಿಲ್ಲ
ಕಳೆದ ನೂರು ವರ್ಷಗಳಿಂದ ವಚನಗಳ ಸಂಶೋಧನೆ, ಪ್ರಕಟಣೆ, ಪ್ರಸಾರ ನಿರಂತರವಾಗಿ ನಡೆಯುತ್ತಿರುವುದರಿಂದ ಲಿಂಗಾಯತ ಧರ್ಮ, ಬಸವಣ್ಣನವರ ಬಗ್ಗೆ ಸ್ಪಷ್ಟ ಕಲ್ಪನೆ ಮೂಡುತ್ತಿದೆ,
ಬಸವ ಯುಗದ 12,000 ವಚನಗಳಲ್ಲಿ
ನೀತಿ ಶಾಸ್ತ್ರ, ಧರ್ಮ ಶಾಸ್ತ್ರ, ಜಗತ್ತಿನ ಉಗಮದ ಬಗ್ಗೆ ಚಿಂತನೆಯಿದೆ. ಒಂದು ಸ್ವತಂತ್ರ ಧರ್ಮಕ್ಕೆ ಬೇಕಾದ ಎಲ್ಲಾ ಚಿಂತನೆ ವಚನಗಳಲ್ಲಿದೆ. ಇದು ಆರೆಸ್ಸೆಸ್ ಅವರಿಗೆ ಸಹಿಸಲಾಗುತ್ತಿಲ್ಲ, ಎಂದರು.
ಜಾಗತಿಕ ಮಹಾಸಭಾದ ಬಸವರಾಜ ರೊಟ್ಟಿ, ಜಿ.ಬಿ.ಪಾಟೀಲ, ಕುಂಬಳಗೋಡಿನ ಬಸವಧರ್ಮ ಪೀಠದ ಬಸವಯೋಗಿ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಏನ್ ಚಂದ್ರಮೌಳಿ, ಕಿರಣ್ ಬೆಲ್ಲದ, ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್, ಲಿಂಗಾಯತ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತೆ ಮತ್ತೀತ್ತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆರೆಸ್ಸೆಸ್ ರಕ್ಷಣೆಗೆ ಬಂದ ವಿಜಯೇಂದ್ರ
ಜಾಮದಾರ್ ಅವರ ಸುದ್ದಿ ಗೋಷ್ಠಿಯ ಒಂದು ದಿನದೊಳಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೆಸ್ಸೆಸ್ ರಕ್ಷಣೆಗೆ ಧಾವಿಸಿದ್ದಾರೆ.
ರವಿ ಹಂಜ್ ಜೊತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ, ಎಂದು ಹೇಳಿದ್ದಾರೆ.
ಇಂದು ನೀಡಿರುವ ಪ್ರಕಟಣೆಯಲ್ಲಿ, “ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ.
ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ,” ಎಂದು ಹೇಳಿದ್ದಾರೆ.

R SS ಧುಷ್ಟ ಬಾಗವೇ ಈ ಬಿಜೆಪಿ ದುರಂಕಾರ ನಾಯಕ ಇವರನ್ನ ನಂಬಿ ನಾವು ಕೆಟ್ಟು ನಮ್ಮ ಧರ್ಮ ಮಾರ್ಗ ತಪ್ಪಿಸಿ ಹಾಳು ಮಾಡುವರನ್ನು ಖಂಡಿತ ಮುಂದಿನ ದಿನ ಲಿಂಗಾಯತ ರು ಪಾಠ ಕಲಿಸಿ 🙏🏻🙏🏻
ಮೊದಲು ವೀರಶೈವ ( ಲಿಂಗೀ ಬ್ರಾಹ್ಮಣರ) ಪದ ತೆಗೆದು ಹಾಕಿ, ನಾವು ಲಿಂಗಾಯತರು ವೀರಶೈವ ಲಿಂಗಾಯತರಲ್ಲ.
ಲಿಂಗಾಯತ ಧರ್ಮದ ಒಳಪಂಗಡಗಳು ಒಟ್ಟುಗುಡಿಸಬೇಕು ಆಗ ಮಾತ್ರ ನಾವು ಸಂಘಟಿತರಾಗಿ ಹೋರಾಡಬೇಕು ಜೈಬಸವ