ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ: ಲಿಂಗಾಯತರ ಶತ್ರುಗಳು ಯಾರು?
ಬೆಂಗಳೂರು
ನಗರದ ಬಸವ ಸಮಿತಿಯಲ್ಲಿ ಬುಧವಾರ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ ಎರಡು ವಿಷಯಗಳ ಚರ್ಚೆಯಾಯಿತು: ಕಳೆದ ಕೆಲವು ವರ್ಷಗಳಿಂದ ಲಿಂಗಾಯತದ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಮತ್ತು ಅದರ ಹಿಂದಿರುವ ಸಂಘಟನೆಗಳು.
ಈ ಎರಡೂ ವಿಷಯಗಳ ಮೇಲೆ ಜಿಲ್ಲೆ ಜಿಲ್ಲೆಗಳಲ್ಲಿರುವ ಲಿಂಗಾಯತ ಸಂಘಟನೆಗಳಲ್ಲಿ ಒಮ್ಮತ ಮೂಡಿದೆ. ಅವರ ಒಳಗಿರುವುದು ಈಗ ಹೊರಬರಲು ಶುರುವಾಗಿದೆ.
ಲಿಂಗಾಯತರ ಮೇಲಿನ ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ಕೆಲವು ದಿನಗಳ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮಾದಾರ್ ಪತ್ರಿಕಾ ಗೋಷ್ಠಿಯಲ್ಲಿ ನೇರವಾಗಿ ಹೇಳಿದ್ದರು.
ಪಕ್ಷದ ರಾಜಕೀಯಕ್ಕೆ ತಮ್ಮನ್ನು ಮಾರಾಟ ಮಾಡಿಕೊಳ್ಳದೆ ಇರುವವರೆಲ್ಲರೂ ಇದನ್ನು ಒಪ್ಪುತ್ತಾರೆ.
ಜಾಮಾದಾರ್ ಅವರಿಗಿಂತ ಮುಂಚೆಯೇ ಚಾಮರಾಜನಗರದಲ್ಲಿ ಎಲ್ಲಾ ಬಸವ ಸಂಘಟನೆಗಳ ಪ್ರಮುಖರು ಸುದ್ದಿಗೋಷ್ಠಿ ಕರೆದಿದ್ದರು.
ಅದರಲ್ಲಿ ಅವರು ಕಲಬುರ್ಗಿ, ಗೌರಿ ಹತ್ಯೆಯ ಹಿಂದಿದ್ದ ಸಂಘಟನೆಗಳೇ ರವಿ ಹಂಜ್ ಬೆಂಬಲಕ್ಕೆ ನಿಂತಿದ್ದಾರಾ ಎನ್ನುವ ಪ್ರಶ್ನೆಯನ್ನು ಪೊಲೀಸರು ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೂಜ್ಯ ದಯಾನಂದ ಸ್ವಾಮೀಜಿ ಈ ದಾಳಿಯ ಹಿಂದಿರುವ ಸಂಘ ಪರಿವಾರದವರು ಮುಂದೆ ಬರಬೇಕೆಂದು ಆಗ್ರಹಿಸಿ ಆರೆಸ್ಸೆಸ್ ಮಾದರಿಯಲ್ಲಿ ಲಿಂಗಾಯತ ಸ್ವಯಂಸೇವಕ ಸಂಘ ರೂಪುಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಚಿಂತನ ಮಂಥನ ಸಭೆಯಲ್ಲಿಯೂ ಇದೇ ಅಭಿಪ್ರಾಯ ಮಾರ್ದನಿಸಿತು.
ಕಾರ್ಯಕ್ರಮದ ನಿರೂಪಕರ ಮನವಿಯಂತೆ ಯಾರೂ ಯಾವ ಸಂಘಟನೆಯ ಹೆಸರನ್ನೂ ಹೇಳಲಿಲ್ಲ, ಆದರೆ ಸ್ಪಷ್ಟವಾಗಿಯೇ ಖಂಡಿಸಿದರು.
ಚಿಂತಕ ಎಸ್ ಜಿ ಸಿದ್ದರಾಮಯ್ಯ ಮೂರು ಸಾವಿರ ವರ್ಷಗಳಿಂದ ಹೇರಲಾಗಿರುವ ಸಾಂಸ್ಕೃತಿಕ ಗುಲಾಮಗಿರಿ ವಿರುದ್ಧ 12ನೇ ಶತಮಾನದಲ್ಲಿ ಬಸವಾದಿ ಶರಣರು ಮೊದಲ ಬಾರಿಗೆ ಹೋರಾಟ ನಡೆಸಿದರು, ಎಂದರು.
ಅಂಬೇಡ್ಕರ್ ಅವರೂ ಅದೇ ಪ್ರಯತ್ನ ಮುಂದುವರೆಸಿದರು. ಸಾಂಸ್ಕೃತಿಕ ಸ್ವಾತಂತ್ರ್ಯ ಸಿಗುವ ತನಕ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ, ಎಂದು ಅಭಿಪ್ರಾಯಪಟ್ಟರು.
ಬಸವಣ್ಣ, ಲಿಂಗಾಯತರಿಗೆ, ಸಮುದಾಯದ ಸ್ವಾಮೀಜಿಗಳಿಗೆ, ಸಂಶೋಧಕರಿಗೆ ಅಪಮಾನ ಮಾಡಲು ಬರೆದಿರುವ ಪುಸ್ತಕದ ಲೇಖಕನ ಹಿಂದೆ ಭಟ್ಟ, ಶಾಸ್ತ್ರೀಯಂತವರು ನಿಂತಿದ್ದಾರೆ ಎಂದು ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ನಂತರ ಮಾತಾಡಿದ ಪೂಜ್ಯ ಸಿದ್ದರಾಮ ಸ್ವಾಮೀಜಿ ಬಸವ ನಿಂದನೆ ಹಿಂದೆ ವಿಕೃತ ಶಕ್ತಿಯೊಂದಿದೆ, ಎಂದರು.
“ಅದೇ ಶಕ್ತಿ ಇಂದು ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಾಶಪಡಿಸುತ್ತಿದೆ, ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಮನುವಾದ ತೂರಿಸಲು ಪ್ರಯತ್ನಿಸುತ್ತಿದೆ.
ಇದೇ ಶಕ್ತಿ ಬೌದ್ಧ ಧರ್ಮವನ್ನು ಭಾರತದಿಂದ ನಿರ್ಗಮಿಸುವಂತೆ ಮಾಡಿತ್ತು, ಗಾಂಧಿಯನ್ನು ಹತ್ಯೆ ಮಾಡಿತ್ತು,” ಎಂದು ಹೇಳಿದರು.
“ಹಂಜ್ ಸಮಾಜ ಮತ್ತು ಇತರ ವಿದ್ವಾಂಸರು ಮನ್ನಣೆ ಮಾಡಿರುವ ಸಂಶೋಧಕನಲ್ಲ. ಕಲಬುರ್ಗಿಯವರನ್ನು ‘ಕಮಂಗಿ’ ಎನ್ನುವ, ಲಿಂಗಾಯತರನ್ನು ‘ಲಿಂಗಾಹತ’ ಎನ್ನುವ ಈ ವಿಕೃತ ಮನಸ್ಸಿನ ಸ್ವಯಂಘೋಷಿತ ಸಂಶೋಧಕ ನಿಜವಾದ
ಲಿಂಗಾಹತ. ಇಂತವರನ್ನು ಬೆಂಬಲಿಸುತ್ತಿರುವ ಭಟ್ಟ ಪತ್ರಿಕಾಧರ್ಮ ಪಾಲಿಸಿಲ್ಲ,” ಎಂದರು.
“ಲಿಂಗಾಯತರು ಇನ್ನು ಮುಂದೆ ಮಲಗದೆ ಎಚ್ಚರವಾಗಿದ್ದುಕೊಂಡು ನಿರಂತ ಪ್ರತಿರೋಧ ಒಡ್ಡಬೇಕು. ತಿಳಿದವರು ಸುಮ್ಮನಿರುವುದು ಅಪಾಯ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಪೂಜ್ಯರು, ಚಿಂತಕರು ಇದೇ ಅಭಿಪ್ರಾಯವನ್ನು ಮಂಡಿಸಿದರು.
“ಮಲಗಿದ್ದ ಸಿಂಹ ಎಬ್ಬಿಸಿದ್ದಾರೆ, ಭಿನ್ನಾಭಿಪ್ರಾಯ ಮರೆತು ಲಿಂಗಾಯತರು ದಾಳಿ ಎದುರಿಸಬೇಕೆಂದು,” ಪೂಜ್ಯ ಗಂಗಾ ಮಾತಾಜಿ ಕರೆ ಕೊಟ್ಟರು.
ಬಸವಣ್ಣ ಆನೆಯ ರೀತಿ ಹೊರಟಿದ್ದರೆ, ನಾಯಿಗಳು ಬೊಗಳುತ್ತಿವೆ ಎಂದು ಹಂದಿಗುಂದದ ಪೂಜ್ಯ ಶಿವಾನಂದ ಸ್ವಾಮೀಜಿ ಹೇಳಿದರು.

ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದೇವರು ಮಾತನಾಡಿ, ಈ ದಾಳಿ ಎದುರಿಸಲು ಲಿಂಗಾಯತರಲ್ಲಿ ಗಣಾಚಾರಿ ಪಡೆ ಕಟ್ಟುವ ಅಗತ್ಯವಿದೆ. ಶರಣರು ಭೃತ್ಯಾಚಾರ, ಗಣಾಚಾರ ಎರಡೂ ಕಲಿಸಿದ್ದಾರೆ. ವಿನಯ ಅತಿಯಾದರೆ ಹೇಡಿತನವಾಗುತ್ತದೆ, ಎಂದು ಎಚ್ಚರಿಸಿದರು.
ವೀರಶೈವ ಮಹಾಸಭಾದ ನವೀನ್ ಬಿಡದಿ, “ಭಟ್ಟ ಆಸ್ಟ್ರೇಲಿಯಾದಿಂದ ಬಂದ ಮೇಲೆ ನಿಜ ಹೋರಾಟ ಶುರುವಾಗುತ್ತದೆ. ರಾಜ್ಯವ್ಯಾಪಿ ಬಸವ ಪಡೆ ಕಟ್ಟುವ ಪ್ರಯತ್ನ ನಡೆಯಲಿದೆ,” ಎಂದರು.
ಜಾತಿ, ಧರ್ಮ ಮೀರಿದ ಬಸವಣ್ಣನವರನ್ನು ಲಿಂಗಾಯತರಿಗೆ ಸೀಮಿತಗೊಳಿಸಬಾರದು. ಈ ದಾಳಿಯಿಂದ ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿಟ್ಟವರಿಗೆಲ್ಲಾ ನೋವಾಗಿದೆ, ಎಂದು ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ಪೂಜ್ಯರು ಈ ದಾಳಿಯನ್ನು ಪ್ರತಿರೋಧಿಸಲು ಹಲವಾರು ಸಲಹೆಗಳನ್ನು ನೀಡಿದರು. ಕುಂದೂರು ಮಠದ ಪೂಜ್ಯ ಶರತ್ಚಂದ್ರ ಸ್ವಾಮೀಜಿ ಒಕ್ಕೂಟದ ಕಡೆಯಿಂದ ನಿಜ ಇತಿಹಾಸ ಕಟ್ಟುವ ಯೋಜನೆ ಶುರುವಾಗಬೇಕೆಂದರು.
ಪವಾಡ ಬಸವಣ್ಣದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಜಿಲ್ಲೆ ತಾಲೂಕುಗಳಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡಿದರು.
ಸಭೆಯಲ್ಲಿ ಎಲ್ಲಾ ಮಠಾಧೀಶರು, ಚಿಂತಕರು ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯದ ಮೂಲಕ ಬಸವ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯ ವಿರುದ್ಧ ಬೀದಿಗಿಳಿದು ಹೋರಾಡುವ ಎಚ್ಚರಿಕೆಯನ್ನು ಬಸವ ವಿರೋಧಿಗಳಿಗೆ ನೀಡಿದರು.

ನಿಜವಾದ ಬಸವ ಭಕ್ತರು ಮತ್ತು ಎಲ್ಲಾ ಬಸವಪರ ಸಂಘಟನೆಗಳು ಒಗ್ಗೂಡಿ ದಿಟ್ಟತನದಿಂದ ರವಿ ಹಂಜ ಮತ್ತು ವಿಶ್ವೇಶ್ವರ ಭಟ್, ಕನ್ನೇರಿ ಸ್ವಾಮಿ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸಿ.ಜೈಬಸವ ಶರಣು ಶರಣಾರ್ಥಿ
ಬಸವಣ್ಣ ನ ಅಪಚಾರ ಲಿಂಗಾಯತೀರಿಗಲ್ಲದೆ ಇಡೀ ಶೂದ್ರ ಸಮಾಜದ ಮೇಲೆ ಆದ ದೌರ್ಜನ್ಯ ಮುಂದೆ ನಡೆಯುವ ಹೊರಟ ನಿರ್ಣಾಯಗಗಳೆಲ್ಲ ಐತಿಹಾಸಿಕ ಹಾಗೂ ಕಾನೂನಾತ್ಮಕ ವಾಗಿರಬೇಕು ಮುಂದೆಂದೂ ಇಂತ ಅಪಚಾರ ಹಾಗೂ ಅವಮಾನ ಖಂಡಿತ ನಡೆಯದಂತೆ ನೋಡಿಕೊಳ್ಳಬೇಕು
ಆಗಲೇ ಲಿಂಗಾಯತ ಸಮಾಜಕೊಂದು ಗೌರವವಿರುತ್ತೆ.
ಚಂದ್ರಶೇಖರ HE, mob- 9844471702, ಮೈಸೂರು
ಬಸವಣ್ಣ ಅವರ ನಿಂದನೆ ಸಹಿಸಲು ಅಸಾಧ್ಯ. ನೆತ್ತಿಯ ಮೇಲೆ ಇರುವ ಸೂರ್ಯನಿಗೆ ಉಗುಳಿದರೆ ಎಂಜಲು ಸಿಡಿಯುವುದು ಯಾರಿಗೆ? ಮೂಢ ನಿಂದಕರಿಗೆ ಇದು ಅರ್ಥ ಆಗಬೇಕಲ್ಲ?
ಜಾಮದಾರ್ ಅವರು rss ಕೈವಾಡ ಬಯಲಿಗೆ ಎಳೆಯಲಿ.