‘ಸಂವಿಧಾನದ ಆಶಯಗಳು, ವಚನಗಳ ಮೌಲ್ಯಗಳು ಸಮಾಜದ ಎರಡು ಕಣ್ಣುಗಳು’

ನರಗುಂದ :

ಸಂವಿಧಾನ ದಿನಾಚರಣೆಯು ಕೇವಲ ಸಂವಿಧಾನವನ್ನು ಸ್ಮರಿಸುವ ದಿನವಾಗಿರದೆ, ಪ್ರಜಾಪ್ರಭುತ್ವದ ಮೌಲ್ಯಗಳು, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿದೆ.

ಇಂದಿನ ಯುವಜನತೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಅರಿತು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಗೌರವಿಸಿ, ವಚನಕಾರರ ಮಾನವೀಯ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಧಾರವಾಡ ಉಚ್ಛನ್ಯಾಯಾಲಯದ ನ್ಯಾಯವಾದಿಗಳಾದ ಕೆ.ಎಸ್‌. ಕೋರಿಶೆಟ್ಟರ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಸಂವಿಧಾನದ ಪೂರ್ವಪೀಠಿಕೆಯನ್ನು ಎಲ್ಲರಿಗೂ ಪ್ರತಿಜ್ಞೆ ಮಾಡಿಸಿ ನಂತರ ಮಾತನಾಡಿದರು.

ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಮತ್ತು ಗೌರವವನ್ನು ನೀಡಿದರೆ, ವಚನ ಸಾಹಿತ್ಯವು ಪ್ರತಿಯೊಬ್ಬ ಮನುಷ್ಯನೂ ಆತ್ಮಗೌರವದಿಂದ ಬದುಕುವ ಮಾರ್ಗವನ್ನು ತೋರಿಸಿಕೊಟ್ಟಿದೆ. ಹೀಗಾಗಿ ವಚನ ಸಾಹಿತ್ಯದ ಆಶಯಗಳು ಮತ್ತು ಸಂವಿಧಾನದ ಮೌಲ್ಯಗಳು ಒಂದಕ್ಕೊಂದು ಪೂರಕವಾಗಿವೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ಪರಿವರ್ತನೆಯ ಸಂದೇಶ ಸಾರಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ಭಾರತದ ಸಂವಿಧಾನವು ತನ್ನ ಎಲ್ಲಾ ಪ್ರಜೆಗಳಿಗೆ ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಅಮೂಲ್ಯವಾದ ಮೂಲಭೂತ ಹಕ್ಕನ್ನು ನೀಡಿದೆ ಇವೇ ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಅಡಿಗಲ್ಲಾಗಿವೆ ಹಾಗೂ ನೈತಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಾನಿದ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಸಂವಿಧಾನವನ್ನು ಗೌರವಿಸುವುದಷ್ಟೇ ಅಲ್ಲ, ಅದರ ಆಶಯಗಳನ್ನು ಬದುಕಿನಲ್ಲಿ ಅನುಷ್ಠಾನಗೊಳಿಸುವುದೇ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

ಭಾರತದ ಸಂವಿಧಾನವು ಕೇವಲ ಆಡಳಿತ ನಡೆಸುವ ಕಾನೂನುಗಳ ಪುಸ್ತಕವಲ್ಲ; ಅದು ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯ ಬದುಕಿಗೆ ಭದ್ರ ಬುನಾದಿಯಾಗಿದೆ.

ನವೆಂಬರ್ 26 ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಹನ್ನೆರಡನೇ ಶತಮಾನದಲ್ಲಿಯೇ ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ವಚನಕಾರರು ಸಂವಿಧಾನದ ಆಶಯಗಳಿಗೆ ಪೂರಕವಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಣ್ಣೂರು ವಿರಕ್ತಮಠದ ಪೂಜ್ಯ ಚನ್ನವೀರೇಶ್ವರ ಮಹಾಸ್ವಾಮಿಗಳು, ಪೂಜ್ಯ ಗುರುಪಾದ ದೇವರು, ಎಸ್‌. ಟಿ. ಚೌಡರೆಡ್ಡಿ, ಎಸ್‌.ಬಿ. ಯಲಿಗಾರ, ಎನ್‌.ಕೆ. ಸೋಮಾಪೂರ, ಇಸಾಕ್‌ ಮಸೂತಿಮನಿ, ಪ್ರಾಚಾರ್ಯ ಕೆ.ಎಮ್‌. ಮಾಕನ್ನವರ, ಮಡಿವಾಳಪ್ಪ ಶಿರಿಯಣ್ಣವರ, ಬಿ‌.ಬಿ. ಐನಾಪೂರ, ಈರಪ್ಪ ಐನಾಪೂರ, ಶಿವಪ್ಪಯ್ಯನಮಠ, ಪ್ರೊ ಆರ್‌.ಕೆ. ಐನಾಪೂರ ಪ್ರಮುಖರು ಉಪಸ್ಥಿತರಿದ್ದರು. ಸುನೀಲ ಕಳಸದ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *