ಪ್ರಭುಲಿಂಗಲೀಲೆ ಕಾವ್ಯದ ಗಮಕವಾಚನ
ಗದಗ :
ತಾಮಸ ಶಕ್ತಿಗೆ ಭಗವಂತನ ಕೃಪೆಯಾಗಲಾರದು. ಸಾತ್ವಿಕ ಶಕ್ತಿಗೆ ಮಾತ್ರ ಭಗವಂತ ಒಲಿಯುತ್ತಾನೆ. ಮಾಯೆ ಅಂದರೆ ಅಜ್ಞಾನ ಅಥವಾ ಕತ್ತಲು, ಸುಜ್ಞಾನವೆಂದರೆ ಬೆಳಕು. ಮಮಕಾರದಿಂದ ಮೋಹ ಹುಟ್ಟುತ್ತದೆ ಅದೇ ಮಾಯೆ. ಈ ಮಾಯೆಯನ್ನು ಗೆದ್ದವರು ಅಲ್ಲಮಪ್ರಭುಗಳು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಶ್ರೀ ಮಠದಲ್ಲಿ ಜರುಗಿದ ೨೮೨೪ನೇ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಚಾಮರಸನ ಪ್ರಭುಲಿಂಗಲೀಲೆ ಕುರಿತು ಜರುಗಿದ ಗಮಕವಾಚನದ ಕುರಿತು ಮಾತನಾಡುತ್ತ, ಶೂನ್ಯ ಸಂಪಾದನೆಯಲ್ಲಿ ಜೋಳದ ರಾಶಿ ದೊಡ್ಡನಗೌಡರ ಗಮಕ ವಾಚನ ಅಮೋಘ. ಗಮಕ ವಾಚನಕ್ಕೆ ಅವರ ಕೊಡುಗೆ ಅಪಾರ.
ಕಾವ್ಯಗಳನ್ನು ರಾಗ, ಲಯ, ಮತ್ತು ಸಂಗೀತ ಪರಿಕರಗಳನ್ನು ಉಪಯೋಗಿಸಿಕೊಂಡು ಜನಮಾನಸಕ್ಕೆ ಲಯಬದ್ಧವಾಗಿ ಹಾಡುತ್ತಾ ಅದರ ಅರ್ಥವನ್ನು ವಿವರಿಸುವ ಶೈಲಿ ಅದ್ಭುತವಾದದ್ದು. ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿ, ಚಾಮರಸನ ಪ್ರಭುಲಿಂಗಲೀಲೆ ಅದ್ಬುತವಾದ ಕಾವ್ಯಗಳು ಎಂದರು.

ಗುರುವಿನಹಳ್ಳಿಯ ಶ್ರೀನಿವಾಸ್ ಕುಲಕರ್ಣಿ ಅವರು ಚಾಮರಸನ ಪ್ರಭುಲಿಂಗಲೀಲೆ ಕುರಿತು ಗಮಕವಾಚನ ಮಾಡಿದರು.
೩೦೦ಕ್ಕೂ ಹೆಚ್ಚು ವರ್ಷಗಳ ಕಾಲ ಕುಲಕರ್ಣಿ ಅವರ ಕುಟುಂಬ ಗಮಕ ಸಾಹಿತ್ಯವನ್ನು ಮತ್ತು ಕಲೆಯನ್ನು ರೂಢಿಸಿಕೊಂಡು ಉಳಿಸಿಕೊಂಡು ಬಂದಿರುವುದು ಅಭಿನಂದನೀಯವಾದುದು ಎಂದರು.
ಕರ್ನಾಟಕ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಮೋಹನ ಕೋಟಿ ಹಾಗೂ ಉದ್ಯಮರತ್ನ ಪ್ರಶಸ್ತಿ ಪುರಸ್ಕೃತರಾದ ನಿರ್ಮಲಾ ಕೊಳ್ಳಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿದರು.
ಐದು ವರ್ಷಗಳ ಕಾಲ ಕನ್ನಡದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕನ್ನಡ ಸೇವೆ ಸಲ್ಲಿಸಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಹಾಗೂ ಗದಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಶ್ಮಿ ಅಂಗಡಿ ಅವರು ಸನ್ಮಾನಿಸಲ್ಪಟ್ಟರು.
ಸನ್ಮಾನೋತ್ತರವಾಗಿ ಮಾತನಾಡುತ್ತಾ, ಸರ್ವರ ಸಹಕಾರ ಮತ್ತು ಕನ್ನಡ ಮನಸ್ಸುಗಳ ಪ್ರೋತ್ಸಾಹದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು. ರಶ್ಮಿ ಅಂಗಡಿಯವರು ಕವನವಾಚನ ಮಾಡಿದರು.
ಬಸವೇಶ್ವರ ಪ್ರಾಥಮಿಕ ಶಾಲೆಯ ಮಕ್ಕಳಿಂದ ಕನ್ನಡ ರಾಜ್ಯೋತ್ಸವ ಕುರಿತಾದ ವಿವಿಧ ಚಟುವಟಿಕೆಗಳು ಜರುಗಿದವು. ಮೃತ್ಯುಂಜಯ ಮತ್ತು ಗುರುನಾಥ ಸುತಾರ ಅವರಿಂದ ವಚನ ಸಂಗೀತ ಸೇವೆ ಜರಗಿತು. ಶ್ರೇಯಸ್ ಅಂಗಡಿ ವಚನ ಚಿಂತನ, ಐಶ್ವರ್ಯ ಕವಿಶೆಟ್ಟಿ ಧರ್ಮಗ್ರಂಥ ಪಠಣ ಮಾಡಿದರು. ದಾಸೋಹ ಸೇವೆಯನ್ನು ಲಿಂಗೈಕ್ಯ ಮುದುಕನಗೌಡ ಎಸ್. ಪಾಟೀಲ ಅವರ ಸ್ಮರಣಾರ್ಥ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಂಗಾಧರ ಹಿರೇಮಠ, ದಾನಯ್ಯ ಗಣಾಚಾರಿ, ಭಾರತಿ ಕೋಟಿ, ಎಸ್. ಆಯ್. ಪಟ್ಟೇದ, ಸುರೇಶ ಬಳೆಗಾರ, ಸುನಂದಾ ಪಿಳ್ಳೆ, ಸೋಮು ಪುರಾಣಿಕ, ಕೆ.ಎಸ್.ಕೋರಿಮಠ, ಡಾ. ಆದೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
