ಶರಣೆ ನೀಲಾಂಬಿಕೆ ತಾಯಿಯವರ ಜಯಂತ್ಯುತ್ಸವ
ಚಿತ್ರದುರ್ಗ :
ನಮ್ಮ ಆಚರಣೆಗಳಲ್ಲಿ ವೈಚಾರಿಕತೆ, ವಿಜ್ಞಾನ ಇದೆ, ಸತ್ಸಂಪ್ರದಾಯ ವಿವೇಚನೆಯೂ ಇದೆ. ಅದರೊಂದಿಗೆ ಮೂಢನಂಬಿಕೆ, ಅಂಧಶ್ರದ್ಧೆ ಇನ್ನು ಮುಂತಾದ ಆಚರಣೆಗಳೂ ಇವೆ. ಅವು ಆರಾಧನೆ, ಅನುಸರಣೆ ಮತ್ತು ಅನುಸಂಧಾನದ ಮೂಲಕ ವ್ಯಕ್ತವಾಗಬಹುದು.
ವಚನ ಚಳುವಳಿಯ ನಂತರ ಹರಿಹರ, ಚಾಮರಸ ಇನ್ನು ಮುಂತಾದ ಕವಿಗಳು ಬಂದರು. ಅವರು ಶರಣರ ಜೀವನವನ್ನು ಚರಿತ್ರೆಯ ಮೂಲಕ ಕಾವ್ಯಗಳನ್ನು ರಚಿಸಿದರು. ಅವರ ವಿಚಾರಗಳನ್ನು ಸೃಜನಾತ್ಮಕವಾಗಿಯೂ ಹಾಗೂ ಕೆಲ ಸಂದರ್ಭದಲ್ಲಿ ಹೊಗಳಿಕೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಅವರನ್ನು ಈ ಜಗತ್ತಿಗೆ ಪರಿಚಯಿಸುವ ಸಲುವಾಗಿ ಸಾಹಿತ್ಯ ಹೊರಬಂತು. ಪ್ರಮುಖ ಕಾವ್ಯಗಳಲ್ಲಿ ಕೆಲವರ ವ್ಯಕ್ತಿ ಚಿತ್ರಣವನ್ನು ಹೊಗಳುವುದು ಕಾಲ್ಪನಿಕವಾಗಿ ರಚಿಸಿದ್ದಿದೆ. ಅದು ಸತ್ಯವೇ ಎನ್ನುವುದು ಗೊತ್ತಾಗಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕಿದೆ.
ಈ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ಬದುಕು ಇತಿಹಾಸ ಮತ್ತು ಚಾರಿತ್ರಿಕ ಸತ್ಯ. ಅವರ ನಡೆ-ನುಡಿ ವಚನಗಳಲ್ಲಿ ವ್ಯಕ್ತವಾಗಿದೆ. ಈ ಮೂಲಕ ನಾವು ಅವರನ್ನು ಕಾಣಬೇಕಿದೆ. ಅಂತಹ ಐತಿಹಾಸಿಕ ಪುರುಷರ ನಡೆಯನ್ನು ಅಪಮೌಲ್ಯಗೊಳಿಸಿದವರು ಯಾರೇ ಆಗಲಿ ಅದು ಖಂಡನಾರ್ಹ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಮುರುಘರಾಜೇಂದ್ರ ವಿಶ್ವವಿದ್ಯಾಲಯದ ವತಿಯಿಂದ ಶ್ರೀಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಶರಣೆ ನೀಲಾಂಬಿಕಾ ತಾಯಿಯವರ ಜಯಂತ್ಯುತ್ಸವ (ಶರಣೋತ್ಸವ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರ ಬಗೆಗೆ ವಿವಾದಾತ್ಮಕ ಹೇಳಿಕೆ ಮತ್ತು ಕೃತಿ ರಚಿಸಿ ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸಿರುವ ವ್ಯಕ್ತಿಯ ನಡೆ ಬಸವಾದಿ ಶಿವಶರಣರಿಗೆ ಬಗೆದ ದ್ರೋಹವಾಗಿದೆ. ಬಸವಾದಿ
ಶಿವಶರಣರನ್ನು ಕಾಲ್ಪನಿಕ ಹಿನ್ನೆಲೆಯಲ್ಲಿ ನೋಡುವುದಕ್ಕಿಂತ ಅವರ ವಚನಗಳ ಮೂಲಕ ನೋಡಿ. ಹಾಗೆಯೇ ನೀಲಾಂಬಿಕಾ ತಾಯಿಯವರ ವ್ಯಕ್ತಿತ್ವ ಆಕೆಯ ೨೮೮ ವಚನಗಳಲ್ಲಿ ಅಡಕವಾಗಿದೆ. ಅದನ್ನು ನಾವು ಅರಿಯಬೇಕಿದೆ ಎಂದರು.

ಯಾರೇ ಆಗಿರಲಿ ಸಾರ್ವಜನಿಕವಾಗಿ ಮಾತನಾಡುವಾಗ ಸಾಧ್ಯವಾದಷ್ಟು ಕಾಲ್ಪನಿಕ ವಿಚಾರಗಳಿಗೆ ಕಡಿವಾಣ ಹಾಕಿ, ಸತ್ಯದ ವಿಚಾರಗಳನ್ನು ಹೇಳುವುದೊಳಿತು. ಸಕಲ ಜೀವರಾಶಿಗೆ ಲೇಸಾಗಲಿ ಎನ್ನುವ ಜೀವಕಾರುಣ್ಯ ಹೊಂದಿ ಅದರಂತೆ ನಡೆದ ಮಹಾಮಾನವತಾವಾದಿಗಳ ಬಗ್ಗೆ ಅಸಭ್ಯ ವರ್ತನೆಯ ಭಾಷೆ ಬಳಸಬಾರದು.
ಫ.ಗು. ಹಳಕಟ್ಟಿ ಮತ್ತಿತರರ ಶ್ರಮದಿಂದ ಶರಣರ ೨೫ ಸಾವಿರಕ್ಕು ಹೆಚ್ಚು ವಚನಗಳು ನಮಗೆ
ದೊರೆತಿವೆ. ಅವುಗಳ ಬಗ್ಗೆ ಮಾತನಾಡಿ. ಹಳಕಟ್ಟಿಯವರ ಶಿವಾನುಭವ ಪತ್ರಿಕೆಗೆ ಶತಮಾನೋತ್ಸವ ಕಂಡ ಹಿನ್ನೆಲೆಯಲ್ಲಿ ಅದರಲ್ಲಿನ ಸಾರವನ್ನು ಬಿ.ಎಲ್.ಡಿ. ಸಂಸ್ಥೆ ಸಂಪುಟದಲ್ಲಿ ಹೊರತರುವ ಪ್ರಯತ್ನದಲ್ಲಿದೆ.
ಆ ಪತ್ರಿಕೆಯಲ್ಲಿ ಕಾಲ್ಪನಿಕತೆ ನಗಣ್ಯವಾಗಿದ್ದು ಬರೀ ವಚನಗಳ ವಿಶ್ಲೇಷಣೆಯೇ ಪ್ರಧಾನವಾಗಿದೆ. ಅದಕ್ಕಾಗಿ ಶರಣರ ಜೀವನ, ನಡೆ-ನುಡಿ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸುವುದು ಸೂಕ್ತ ಎಂದು ಸಲಹೆ ಮಾಡಿದರು.
ಮುಖ್ಯಅತಿಥಿಗಳಾಗಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಶರಣೆ ನೀಲಾಂಬಿಕೆ ಉನ್ನತ ಸ್ಥಾನದಲ್ಲಿದ್ದ ಪೋಷಕರ ಮನೆಯಲ್ಲಿ ಬೆಳೆದ ಕಾರಣ ಒಳ್ಳೆಯ ಶಿಕ್ಷಣ, ಸಂಸ್ಕೃತಿ, ಸನ್ನಡತೆ ದೊರೆತಿತ್ತು. ವೈಚಾರಿಕ ಪ್ರಜ್ಞೆ ಮೂಡಿತ್ತು. ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ಆಕೆ ಮೆಚ್ಚುತ್ತಿದ್ದರು.
ಬಸವಣ್ಣನವರ ಹೊಸ ಆಲೋಚನೆಗಳಿಂದ ಪ್ರೇರಿತಳಾಗಿ ಧರ್ಮ, ಪ್ರಭುತ್ವ, ಮೌಢ್ಯ, ಕಂದಾಚಾರಗಳು ಹೀಗೆ
ಹಲವಾರು ಚಿಂತನೆಗಳು ಆಕೆಯಲ್ಲಿದ್ದವು. ಶರಣ ದಾಂಪತ್ಯ ಕೇವಲ ಲೌಕಿಕಕ್ಕೆ ಸೀಮಿತಗೊಳ್ಳದೆ ಆಧ್ಯಾತ್ಮಿಕವಾಗಿಯೂ ಹಾಗೂ ಆತ್ಮೋನ್ನತಿಯ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತದೆ ಎನ್ನುವ ಉದಾತ್ತ ದಾಂಪತ್ಯ ತತ್ವ ನೀಡಿ ಸಮಾಜಕ್ಕೆ ಕುಟುಂಬ ಮೌಲ್ಯವನ್ನು ತಿಳಿಸಿದ ನೀಲಾಂಬಿಕೆ ಮತ್ತು ಗಂಗಾಂಬಿಕೆಯರು ಬಸವಣ್ಣನವರ ಎಲ್ಲ ಕಾರ್ಯಗಳಿಗೆ ಕೈಜೋಡಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀಲಾಂಬಿಕೆಯವರ ಬಗೆಗೆ ವಿಷಯಾವಲೋಕನ ಮಾಡಿದ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಮಹೇಶ ಕುಂಚಿಗನಾಳ ಮಾತನಾಡುತ್ತ, ಪ್ರಶ್ನಿಸುವ ಮನೋಭಾವನೆ ಕಲಿಸಿಕೊಟ್ಟದ್ದು ವಚನ ಸಾಹಿತ್ಯ. ಶಿರಾ ತಾಲ್ಲೂಕಿನ ತಡಕಲೂರಿನಲ್ಲಿ ನೀಲಮ್ಮನ ಕುರಿತಾಗಿ ಜನಪದಕಾರರು ಹಾಡುತ್ತಾರೆ ಎಂದರೆ ಕಲ್ಯಾಣದ ನೀಲಮ್ಮನ ಪ್ರಭಾವದ ಹರವು ಬೆರಗು ಮೂಡಿಸುತ್ತದೆ.
೧೨ನೇ ಶತಮಾನದ ಶರಣ ಚಳವಳಿಯು ಪ್ರಪಂಚದ ಸಾಹಿತ್ಯಿಕ ಇತಿಹಾಸದಲ್ಲೇ ಅನುಪಮವಾದುದು. ಮೊದಲಬಾರಿಗೆ ಮಹಿಳೆಯು ಸಹ ಪುರುಷನಂತೆ ಸಾಹಿತ್ಯ ರಚಿಸಬಲ್ಲಳು ಎಂಬುದನ್ನು ತೋರಿಸಿಕೊಟ್ಟ ಸಂದರ್ಭವಾಗಿದೆ ಎಂದರು.
ಅಕ್ಕನಾಗಮ್ಮ, ಅಕ್ಕಮಹಾದೇವಿ, ಮುಕ್ತಾಯಕ್ಕ ಇಂಥವರ ಸಾಲಿಗೆ ನೀಲಮ್ಮ ಸಹ ಸೇರುತ್ತಾಳೆ. ಸ್ವತಃ ಬಸವಣ್ಣನವರಿಂದ ಹೊಂದಾಣಿಕೆ ಸ್ವಭಾವದ, ಶಿಸ್ತಿನ, ವಿಚಾರಪರ ಹೆಂಡತಿ ಎಂದು ಹೊಗಳಿಸಿಕೊಂಡವಳು.
ಕಲ್ಯಾಣದ ಬಿಜ್ಜಳನ ಮಂತ್ರಿಯಾದ ಸಿದ್ಧರಸ ಹಾಗೂ ಪದ್ಮಗಂಧಿಯವರ ಮಗಳು ನೀಲಾಂಬಿಕೆ. ಬಾಲ್ಯದಲ್ಲಿ ಬಿಜ್ಜಳ ತಮ್ಮನ ಜೊತೆಯಲ್ಲಿ ಬೆಳೆದವಳು. ಸಹಜವಾಗಿ ರಾಜ ಪರಿಸರದ ಆಡಳಿತ ನೈಪುಣ್ಯತೆ, ಜ್ಞಾನ, ತಿಳುವಳಿಕೆ ಆಕೆಗೆ ಸಿದ್ಧಿಸಿದ್ದವು. ಬಸವಣ್ಣನವರ ವಿಚಾರ ಪತ್ನಿಯೆಂದೇ ಕರೆಸಿಕೊಂಡ ಉದಾಹರಣೆ ಇದೆ.
ನೀಲಾಂಬಿಕೆ ವಚನಗಳಲ್ಲಿ ಸ್ವವಿಮರ್ಶೆ, ಲೋಕವಿಮರ್ಶೆ, ಲಿಂಗವಂತ ಸಿದ್ಧಾಂತ ಆಚರಣೆಗಳ ನಿರೂಪಣೆ ಪ್ರಧಾನವಾಗಿ ತೋರುತ್ತದೆ. ಕಲ್ಯಾಣದ ಕ್ರಾಂತಿಯ ನಂತರ ಬಸವಣ್ಣ ಕೂಡಲಸಂಗಮದಲ್ಲಿ ನೆಲೆಸುತ್ತಾರೆ. ನೀಲಾಂಬಿಕೆಯನ್ನು ಕರೆತರಲು ತಿಳಿಸಿದಾಗ, ಎಲ್ಲಾ ಕಡೆ ಸಂಗಯ್ಯನಿರುವಾಗ ಬರುವುದಿಲ್ಲ ಎನ್ನುತ್ತಾಳೆ. ಹಡಪದ ಅಪ್ಪಣ್ಣನ ಒತ್ತಾಯಕ್ಕೆ ಮಣಿದು ಬರುತ್ತಾರೆ.
ತಂಗಡಗಿಯಲ್ಲಿ ಇವತ್ತಿಗೂ ನೀಲಾಂಬಿಕೆ ಬಯಲಾದ ಸಮಾಧಿ ಇದೆ. ಬಸವಧರ್ಮವು ಮಾನವೀಯತೆ, ಅಂತಃಕರಣ, ತಾಯಿ ಹೃದಯವನ್ನು ನೀಲಾಂಬಿಕೆಯ ವಚನಗಳಲ್ಲಿ ಕಾಣಬಹುದು ಎಂದು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಬಸವ ಮುರುಘೇಂದ್ರ ಶ್ರೀಗಳು, ಡಾ. ಬಸವ ಚೇತನ ಶ್ರೀಗಳು ಹಾಗೂ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯಕ್ಕೆ ನೂತನವಾಗಿ
ನೇಮಕಗೊಂಡ ಪ್ರಾಚಾರ್ಯ ವಿನಯ್ ವಿ. ಕುಪ್ಪಸ್ತ ಹಾಗೂ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿಗೆ ನೂತನವಾಗಿ ಪ್ರಾಚಾರ್ಯರಾಗಿ ನೇಮಕಗೊಂಡಿರುವ ಆರ್. ರವಿಕಾಂತ ಪಾಟೀಲ ಅವರುಗಳು ಉಪಸ್ಥಿತರಿದ್ದರು.
ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಹನುಮಂತಪ್ಪ, ಎಸ್. ವೀರೇಶ್, ಮಹಾಂತಮ್ಮ, ಬಸವರಾಜ ಕಟ್ಟಿ, ನಾಗರಾಜ ಸಂಗಂ, ಡಿ.ವಿ. ಮುರುಘೇಶ ದಂಪತಿ, ವಕೀಲರಾದ ಹೊಸಳ್ಳಿ ಹನುಮಂತಪ್ಪ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಎಸ್.ವಿ. ಕೊಟ್ರೇಶ, ನಿಂಬೆಕಾಯಿ ನಾಗಣ್ಣ, ಅಣಜಿ ವೀರಣ್ಣ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೊಟ್ರೇಶಪ್ಪ, ಪ್ರಾಚಾರ್ಯ ಆನಂದ್, ಡಾ. ಚಿದಾನಂದಪ್ಪ, ಹೆಚ್.
ಬಸವರಾಜು, ಸ್ಕೌಟ್ ಬಸವರಾಜಪ್ಪ, ಪ್ರತಿಮಾ ಜೆ. ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರದ ಚಂದ್ರವಳ್ಳಿ ಎಸ್.ಜೆ.ಎಂ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ನೀಲಾಂಬಿಕೆಯವರ ವಚನ ಪ್ರಾರ್ಥನೆ ಹಾಡಿದರೆ, ಉಪನ್ಯಾಸಕಿ ಡಾ. ತಾರಾ ಟಿ. ಸ್ವಾಗತಿಸಿದರು. ಮತ್ತೋರ್ವ ಉಪನ್ಯಾಸಕಿ ಡಾ. ಪುಷ್ಪ ಕೆ. ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
