ಬಸವ ಕಲ್ಯಾಣ
ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದಲ್ಲಿ ಮಹಿಳಾ ಗೋಷ್ಠಿ ಶನಿವಾರ ನಡೆಯಿತು.
ಜನರು ಧರ್ಮದ ಕಡೆಗೆ ಬಾರದಿದ್ದಾಗ ಧರ್ಮವನ್ನು ಮನೆ ಮನಗಳ ಬಾಗಿಲಿಗೆ ಕೊಂಡೊಯ್ಯುವ ಕಾರ್ಯವನ್ನು ಪೂಜ್ಯ ಮಹಾದೇವಿ ಮತ್ತು ಲಿಂಗಾನಂದ ಸ್ವಾಮೀಜಿಯವರು ಮಾಡಿದರು ಎಂದು ಚಿಂತಕಿ ಮೀನಾಕ್ಷಿ ಬಾಳಿ ಹೇಳಿದರು.
ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದ ಮಹಿಳಾ ಗೋಷ್ಠಿಯಲ್ಲಿ ಮಾತನಾಡುತ್ತಾ ಅವರುಗಳು ಶುರು ಮಾಡಿದ ಕೆಲಸ ನಾವು ಮುಂದುವರೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಿ.ಶಬಿನಾ ಮಹಮದ್ ಅಲಿ ಚಳ್ಳಿಕೆರೆ ಅವರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶರಣತತ್ವಗಳನ್ನು ಮಕ್ಕಳಿಗೆ ಬೋಧಿಸುಬೇಕು ಎಂದು ಹೇಳಿದರು. ಲಿಂಗ ಭೇದ, ಜಾತಿ ಬೇಧಗಳನ್ನು ಮಾಡಬಾರದು, ಏಕದೇವ ನಿಷ್ಠೆ, ಕಾಯಕ ದಾಸೋಹ ನಿಷ್ಠೆಯನ್ನು ಬಸವಣ್ಣನವರು ಬೋಧಿಸಿದ್ದಾರೆ ಅದರಂತೆ ಇಂದಿನ ಸಮಾಜ ನಡೆಯಬೇಕು ಎಂದರು.
ಬಳ್ಳಾರಿಯ ರಾಷ್ಟ್ರೀಯ ಬಸವದಳದ ಶಾರದಾ ತಾಯಿ ಅವರು ಮಾತನಾಡಿ, ಮಹಿಳೆಯರು ಜಗದ್ಗುರುವಾಗುವಂಥ ಶಕ್ತಿಯನ್ನು ಕೊಟ್ಟಂತಹ ಧರ್ಮ ಯಾವುದಾದರೂ ಇದ್ದರೆ ಅದು ಲಿಂಗಾಯತ ಧರ್ಮ ಎಂದು ನುಡಿದರು.
ಮಹಿಳೆಯರು ಮಕ್ಕಳಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಬಸವಣ್ಣನವರ ವಚನಗಳು ಪೂರಕವಾಗಿವೆ. ಈ ಆಧುನಿಕ ಯುಗದಲ್ಲಿ ವಚನಗಳ ಪ್ರಸಾರ ಮಾಡಬೇಕಾದ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ನುಡಿದರು.
ಡಾ. ಗಂಗಾಮಾತಾಜಿ ಸಾನಿಧ್ಯವಹಿಸಿದ್ದರು. ಡಾ.ಗಂಗಾಂಬಿಕ ಅಕ್ಕ, ಗೀತಾ ಖಂಡ್ರೆ, ಪ್ರೊ. ವೀಣಾ ಬಿರಾದರ ಹುಬ್ಬಳ್ಳಿ, ಸೋನಾಲ್ ಸಿಂಗ್, ಶಕುಂತಲಾ ಬೆಲ್ಲಾಳೆ, ನಿರ್ಮಲಾ ಶಿವಣಕರ, ವಿಜಯಲಕ್ಷ್ಮಿ ಗಡ್ಡೆ,ಡಾ.ಜಯಶ್ರೀ ಬಶೆಟ್ಟಿ, ರಾಜಶ್ರೀ ಖೂಬಾ, ಸುವರ್ಣಾ ಚಿಮಕೋಡೆ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.