ದಾವಣಗೆರೆ
ಇದೇ ತಿಂಗಳು ಸೆಪ್ಟೆಂಬರ್ 27ರಂದು ನಗರದ ಗುರುಬಸವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ, ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ.
ಇಳಕಲ್ಲಿನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಶರಣೆ ಶಾಮನೂರು ಸಾವಿತ್ರಮ್ಮ ಕಲ್ಲಪ್ಪ ಪಬ್ಲಿಕ್ ಟ್ರಸ್ಟ್ , ಶರಣ ಟಿ ಎಸ್ ಪಾಟೀಲ್ ಭಕ್ತವೃಂದ ಹಾಗೂ ಬಸವ ಪರ ಸಂಘಟನೆಗಳು ಆಯೋಜಿಸಿವೆ.
“ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಿಸಿದ ಕೀರ್ತಿಯು ದಾವಣಗೆರೆಗೆ ಸಲ್ಲುತ್ತದೆ.
ಇದು ತರಳಬಾಳು, ಮುರುಗರಾಜೇಂದ್ರ, ಸಾಣೇಹಳ್ಳಿ, ಪಾಂಡೋಮಟ್ಟಿ ಮುಂತಾದ ಪೂಜ್ಯರು ಬಸವಾದಿ ಶರಣರ ತತ್ವಗಳನ್ನು ಸಾರುತ್ತಿರುವ ಕ್ಷೇತ್ರವೂ ಆಗಿದೆ.
ಆದರೂ ಪಟ್ಟ-ಭದ್ರಾ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ತಮ್ಮ ಧರ್ಮದ ಅದ್ಭುತ ವಿಚಾರಗಳನ್ನ ತಿಳಿಯದೆ ದಾರಿ ತಪ್ಪಿರುವ ಲಿಂಗಾಯತ ಯುವಕರಲ್ಲಿ ಲಿಂಗಾಯತ ಧರ್ಮದ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯ ಬಸವಪರ ಸಂಘಟನೆಗಳು ಈ ಶ್ರವಣ ಮಾಸದಲ್ಲಿ ಮನೆ ಮನೆಗೆ ತೆರಳಿ ಬಸವ ಜ್ಯೋತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದವು.
ಜೊತೆಗೆ ಪ್ರತಿದಿನ ಸಂಜೆ 6ರಿಂದ 7 ಗಂಟೆಯವರೆಗೆ ಗುರುಬಸವ ಮಂಟಪದಲ್ಲಿ ಶರಣರ ತತ್ವಾನುಭವದಲ್ಲಿ ಚಿಂತನೆ ನಡೆಸುತ್ತಿರುವುದಲ್ಲದೆ, ಶರಣರ ಸಂಜೆ ಕಾರ್ಯಕ್ರಮದ ಮೂಲಕ ಹಳ್ಳಿಗಳಿಗೆ ತೆರಳಿ ಬಸವ ತತ್ವ ಪ್ರಸಾರ ಮಾಡುತ್ತಿವೆ.
ಈಗ ಆಯೋಜಿಸುತ್ತಿರುವ ಸಾಮೂಹಿಕ ಇಷ್ಟಲಿಂಗ ದೀಕ್ಷೆ, ಪ್ರಾತ್ಯಕ್ಷಿಕೆಯಲ್ಲಿ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು,” ಎಂದು ಆಯೋಜಕರು ಮನವಿ ಮಾಡಿದ್ದಾರೆ.

