ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ವೀರವಿರಾಗಿಣಿ ಅಕ್ಕನಾಗಮ್ಮ ಹಾಗೂ ಶಂಕರ ದಾಸಿಮಯ್ಯ ಶರಣರ ಜಯಂತಿ ಅಂಗವಾಗಿ ವಿಶೇಷ ಚಿಂತನಾ ಗೋಷ್ಠಿ ನಡೆಯಿತು.
ತಾಲೂಕ ಜಾ.ಲಿಂ. ಮಹಾಸಭೆಯ ಅಧ್ಯಕ್ಷ ಜೆ. ಬಸವರಾಜ ಅವರು ಮಾತನಾಡಿ, ಮರುಳಶಂಕರದೇವರು ಆದ್ಯ ವಚನಕಾರರಾಗಿದ್ದು, ನಿಜಗುರು ಶಂಕರದೇವ ನಾಮಾಂಕಿತದ 5 ವಚನಗಳು ಲಭ್ಯವಾಗಿವೆ. ಇವರ ಜನ್ಮಸ್ಥಳ ನರಗುಂದ ತಾಲೂಕಿನ ಕಂದಗಲ್. ಇವರು ಬಟ್ಟೆಗೆ ಬೇಕಾಗುವ ನೂಲಿಗೆ ಬಣ್ಣ ಹಾಕುವ ಕಾಯಕದ ಬಣಕಾರರು.
ಇವರು ಶಿವಭಕ್ತಿ ಮತ್ತು ಕಾಯಕ ತತ್ವಗಳನ್ನು ತಮ್ಮ ವಚನಗಳ ಮುಖಾಂತರ ಸಾರಿದರು. ಆದ್ಯ ವಚನಕಾರ ಜೇಡರ (ದೇವರ) ದಾಸಿಮಯ್ಯನವರ ಸೂಕ್ಷ್ಮ ಅಹಂಕಾರವನ್ನು ಅಧ್ಯಾತ್ಮದ ಚೌಕಟ್ಟಿನಲ್ಲಿ ಹೋಗಲಾಡಿಸಿದ ಮಹಾನ್ ಸಂತನೆಂದು ತಿಳಿಸಿದರು.
ಮುಕ್ತಾಯಕ್ಕ ಶರಣಬಸವ ನರಕಲದಿನ್ನಿಯವರು ಈ ವಾರ ವಿಶ್ಲೇಷಣೆಗೆ ನೀಡಿದ ವಚನ,” ಎನ್ನ ಕುಲಸೂತಕವ ಕಳೆದಾತ ಬಸವಣ್ಣ….. ” ಕುರಿತು ಮಾತನಾಡುತ್ತಾ, ಅಕ್ಕನಾಗಮ್ಮನವರು ಮಹಾಶರಣೆ, ಬಸವಣ್ಣನವರ ಅಕ್ಕ, ತಾಯಿಗಿಂತಲೂ ಹೆಚ್ಚಿನ ಪ್ರೀತಿಯಿಂದ ಬಸವಣ್ಣನವರೊಡನೆ ಇದ್ದು, ಬೆನ್ನಾಸರೆಯಾಗಿ ನಿಂತವರು. ಬಸವಣ್ಣನವರು ಸಂಸ್ಕಾರವನ್ನು ತಿರಸ್ಕರಿಸಿ ಮನೆ ಬಿಟ್ಟ ಸಹೋದರನೊಡನೆ ಹೊರಟು ನಿಂತವರು ನಾಗಮ್ಮನವರು.

ಅಷ್ಟೇ ಅಲ್ಲದೆ ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣ ಅವರನ್ನು ಲೋಕಕ್ಕಿತ್ತ ಮಹಾಮತೆ. ಲಿಂಗಾಯತ ಧರ್ಮದ ಸಂವಿಧಾನ ಶಿಲ್ಪಿ ಚನ್ನಬಸವಣ್ಣನವರು.
ಸಹೋದರ ಬಸವಣ್ಣನವರ ಹಾಗೂ ಕಲ್ಯಾಣದ ಶರಣ ಸಂಕುಲದ ಏಳಿಗೆಯಲ್ಲಿ ಅಕ್ಕನಾಗಮ್ಮನವರ ಪಾತ್ರ ಬಹು ಪ್ರಾಮುಖ್ಯತೆ ಪಡೆದಿದೆ. ತಂದೆ ಸಂಗನಬಸವಣ್ಣನ ಮಹಿಮೆಯಿಂದ ಚನ್ನಸಂಗ ಹೃದಯದಲ್ಲಿ ನಿಜನಿವಾಸಿಯಾಗುವ ಸೌಭಾಗ್ಯ ದೊರೆತಿರುವುದನ್ನು ನಿರೂಪಿಸುವ ಅಕ್ಕನಾಗಮ್ಮನವರ ವಚನದಲ್ಲಿರುವ ಆ ತಾಯಿ ಪ್ರೀತಿಗೆ ನೆರೆದ ಶರಣರ ಕಣ್ಣಾಲಿಗಳು ತುಂಬಿದವು.
ಡಾ. ಪ್ರಿಯಾಂಕಾ ಗದ್ವಾಲ್ ಉಳುವಿಯಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯರಾದ ನಂತರ ಧ್ವತಿಗೆಡದ ನಾಗಮ್ಮನವರು ಮರಣವೇ ಮಹಾನವಮಿ ಎಂದು ಭಾವಿಸಿ, ಶರಣತತ್ವ ಪ್ರಚಾರ ಮಾಡುತ್ತಾ, ಪ್ರವಾಸ ಮಾಡಿ ಕೊನೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೇರಿಯಲ್ಲಿ ನೆಲೆಸಿ ಅಲ್ಲೇ ಬಯಲಾದ ಮಹಾನ್ ಜ್ಯೋತಿ ಎಂದು ಬಣ್ಣಿಸಿದರು. ಮತ್ತು ಬಸವ ಕೇಂದ್ರದಲ್ಲಿ ಮಕ್ಕಳಿಗೆ ವಚನ ಪಾಠಗಳನ್ನು ಹೇಳಿಕೊಟ್ಟರು.
ಕೇಂದ್ರದ ಉಪಾಧ್ಯಕ್ಷರಾದ ಚನ್ನಬಸವ ಇಂಜನಿಯರ್ ಮಾತನಾಡಿ, ಬಸವೇಶ್ವರರ ಅಮೂಲ್ಯವಾದ ಸಾಹಿತ್ಯ ಮತ್ತು ವಚನಗಳನ್ನು ಅಳಿಸಿ ಹಾಕಲು ಕೆಲವು ಪಟ್ಟಭದ್ರಶಕ್ತಿಗಳು ಪ್ರಯತ್ನಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಆದ್ದರಿಂದ ನಾವುಗಳು ಸದಾ ಜಾಗೃತೆಯಿಂದ ಶರಣರ ತತ್ವ, ಆದರ್ಶಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಜನ್ಮ ಸಾರ್ಥಕವೆಂದರು.
ನಾಗೇಶ್ವರಪ್ಪ ಮತ್ತು ಎಸ್. ಶಂಕರಗೌಡರು ವಚನ ಗಾಯನವನ್ನು ನಡೆಸಿಕೊಟ್ಟರು. ಪಾರ್ವತಿ ಪಾಟೀಲ ಅವರು ಸಾಮೂಹಿಕ ಬಸವ ಪ್ರಾರ್ಥನೆಯನ್ನು ಮಾಡಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ವೆಂಕಣ್ಣ ಆಶಾಪುರ್ಯ ಸ್ವಾಗತಿಸಿದರು, ಜಗದೇವಿ ಚನ್ನಬಸವ ವಂದಿಸಿದರು.
ಕಾರ್ಯಕ್ರಮದಲ್ಲಿ ಸರೋಜಮ್ಮ ಮಾಲಿಪಾಟೀಲ, ಬಸಲಿಂಗಮ್ಮ, ಈ. ಸೋಮಶೇಖರ, ಧನಂಜಯ ಹಡಪದ ಮುಂತಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
