ರಾಯಚೂರು :
ನವರಾತ್ರಿ(ದಸರೆ)ಯ ಅಂಗವಾಗಿ ಬಸವ ಸಂಘಟನೆಗಳಿಂದ 9 ದಿನಗಳ ಕಾಲ ಬಸವಾದಿ ಶರಣೆಯರ ಅನುಭಾವ ಚಿಂತನೆ, ವಿಚಾರಗಳನ್ನು ಮನೆಮನೆ ತಲುಪಿಸುವ ಸಲುವಾಗಿ ಶರಣ ಸಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಗದೇವಿ ಚೆನ್ನಬಸವ ಅವರು ನಿಜಲಿಂಗಪ್ಪ ಕಾಲೋನಿಯಲ್ಲಿರುವ ಬಸಲಿಂಗಮ್ಮ ಆದೋನಿ ಅವರ ಮನೆಯಲ್ಲಿ ಮೊದಲ ದಿನ ೧೨ ರಂದು ಶರಣೆ ಹಡಪದ ಲಿಂಗಮ್ಮ ತಾಯಿಯವರ ಚಿಂತನೆಯನ್ನು ಲಿಂಗಮ್ಮರ ವಚನದೊಂದಿಗೆ ನಡೆಸಿಕೊಟ್ಟರು.
ಲಿಂಗಮ್ಮ ಅವರ ವಚನ:
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ. ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು. ಕಂಗಳಮುಂದಣ ಕತ್ತಲೆ ಹರಿಯಲೊಡನೆ, ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಕೀಳು ಕುಲದಲ್ಲಿ ಹುಟ್ಟಿದ ಶರಣೆ ಲಿಂಗಮ್ಮ ತಾವು ಹುಟ್ಟಿದ ಕುಲದ ಸೂತಕವನ್ನು ಶರಣರ ಸಂಘದಿಂದ ಕಳೆದುಕೊಂಡೆ ಎಂದು ಹೇಳುತ್ತಾರೆ.
ಮನದ ಚಂಚಲತೆ ಮನವನ್ನು ನಿಗ್ರಹಿಸುವುದರಿಂದ ಮತ್ತು ಗುರು ಲಿಂಗ ಜಂಗಮ ಸೇವೆಯ ಮೂಲಕ, ಭಕ್ತಿ ಶರಣರ ನುಡಿಬೋಧೆ ಆಚಾರ ನಿಷ್ಠೆಯಿಂದ ಅಂತರಂಗ ಬಹಿರಂಗ ಶುದ್ಧ ಮಾಡಿಕೊಳ್ಳಬೇಕು.

ತೋರಿಕೆ/ಡಾಂಭಿಕ ಭಕ್ತಿ ಕೂಡದು ಎಂಬ ನಿಲುವು ಲಿಂಗಮ್ಮನದು. ಅವರ ವಚನಗಳು ಗಣಾಚಾರದ ರೀತಿಯಲ್ಲಿ ಇವೆ ಎಂದು ತೋರುತ್ತದೆ. ಅವರು ಶಿವಯೋಗದಲ್ಲಿ ಉನ್ನತ ಸಾಧನೆಯನ್ನು ಮಾಡಿದ್ದರು ಎಂಬುದನ್ನು ಜಗದೇವಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶಿವಯೋಗದ ಪ್ರಾತ್ಯಕ್ಷಿತೆಯನ್ನು ಡಾ. ಪ್ರಿಯಾಂಕ ಗದ್ವಾಲ್ ನಡೆಸಿಕೊಟ್ಟರು. ಪಾರ್ವತಿ ಪಾಟೀಲ ವಚನ ಪ್ರಾರ್ಥನೆ ಹಾಡಿದರು. ಬಸವಲಿಂಗಮ್ಮ ಸ್ವಾಗತಿಸಿದರು, ಅನ್ನಪೂರ್ಣಮ್ಮ ಹರಿವಿ ನಿರೂಪಣೆ ಮಾಡಿದರು.
ಮುಕ್ತ ನರಕಲದಿನ್ನಿ ವಚನ ಸಂವಿಧಾನ ಪ್ರತಿಜ್ಞೆ ನೆರವೇರಿಸಿದರು. ಪೂರ್ಣಿಮಾ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಯಶ್ರೀ ಮಹಾಜನಶೆಟ್ಟಿ, ಸರೋಜಮ್ಮ, ಅನ್ನಪೂರ್ಣಮ್ಮ ಮೇಟಿ, ಅಕ್ಕನ ಬಳಗದ ಶರಣೆಯರು ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
