ಸಾಣೇಹಳ್ಳಿ:
ಭಗವಂತನನ್ನು ಹೊರಗಿನ ಪ್ರಪಂಚದಲ್ಲಿ ಹುಡುಕುವುದಕ್ಕಿಂತ, ನಮ್ಮೊಳಗಿರುವ ದೈವತ್ವವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ನಿಜವಾದ ಲಿಂಗದೀಕ್ಷೆಯ ಉದ್ದೇಶವಾಗಿದೆ ಎಂದು ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.
ಸಾಣೇಹಳ್ಳಿ ಶ್ರೀಮಠದಲ್ಲಿ ನಡೆದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, “12ನೇ ಶತಮಾನದ ಶರಣರು ದೇವರನ್ನು ಕೇವಲ ಗುಡಿ-ಗುಂಡಾರಗಳಲ್ಲಿ ಹುಡುಕುವ ಪದ್ಧತಿಯನ್ನು ಮೀರಿ, ಭಗವಂತ ನಮ್ಮೊಳಗೇ ಇದ್ದಾನೆ ಎಂಬ ಸತ್ಯವನ್ನು ಸಾರಿದರು.

ಕಲ್ಲಿನಲ್ಲಿ ಚಿನ್ನ, ಕಟ್ಟಿಗೆಯಲ್ಲಿ ಬೆಂಕಿ ಮತ್ತು ಹಾಲಿನಲ್ಲಿ ತುಪ್ಪ ಹೇಗೆ ಅಡಗಿದೆಯೋ, ಹಾಗೆಯೇ ಪ್ರತಿಯೊಬ್ಬ ಮನುಷ್ಯನಲ್ಲೂ ದೈವಿಕ ಚೈತನ್ಯ ಅಡಗಿದೆ. ಮನುಷ್ಯ ತನ್ನ ಅರಿವನ್ನೇ ಗುರುವಾಗಿ ಸ್ವೀಕರಿಸಬೇಕು ಎಂದರು.
ಲಿಂಗದೀಕ್ಷೆಯು ಕೇವಲ ಒಂದು ವಯಸ್ಸಿಗೆ ಸೀಮಿತವಾದ ಆಚರಣೆಯಲ್ಲ; ಅದು ತಾಯಿಯ ಗರ್ಭದಿಂದಲೇ ಪ್ರಾರಂಭವಾಗಿ, ಮಗು ಬೆಳೆದು ವಿವೇಚನೆ ಬರುವವರೆಗೂ ವಿವಿಧ ಹಂತಗಳಲ್ಲಿ ನಡೆಯುವ ಜ್ಞಾನದ ದಾರಿಯಾಗಿದೆ.
ಗುರುವು ಶಿಷ್ಯನ ತಲೆಯ ಮೇಲೆ ಹಸ್ತವನ್ನಿಟ್ಟು, ಕಿವಿಯಲ್ಲಿ ಮಂತ್ರೋಪದೇಶ ನೀಡಿ ಅಂಗೈಗೆ ಇಷ್ಟಲಿಂಗವನ್ನು ಕರುಣಿಸುವುದು. ಇಲ್ಲಿ ಹಸ್ತ-ಮಸ್ತಕ ಸಂಯೋಗದ ಮೂಲಕ ಮೂರೂ ದೀಕ್ಷೆಗಳು ಸಮ್ಮಿಲನಗೊಳ್ಳುತ್ತವೆ.

ಒಮ್ಮೆ ದೀಕ್ಷೆ ಪಡೆದ ನಂತರ ಇಷ್ಟಲಿಂಗವನ್ನು ದೇಹದಿಂದ ಬೇರ್ಪಡಿಸಬಾರದು. ಇದು ಮನುಷ್ಯ ತಪ್ಪು ದಾರಿಗೆ ಹೋಗದಂತೆ ಎಚ್ಚರಿಸುವ ಜಾಗೃತಿಯ ಸಂಕೇತವಾಗಿದೆ. ಮನೆಗೆ ಗೋಡೆ, ಕಿಟಕಿಗಳು ಹೇಗೆ ರಕ್ಷಣೆ ನೀಡುತ್ತವೆಯೋ, ಹಾಗೆಯೇ ಮನುಷ್ಯನ ಜೀವನಕ್ಕೆ ಗುರು, ಲಿಂಗ, ಜಂಗಮ ಸೇರಿದಂತೆ ಅಷ್ಟಾವರಣಗಳು ರಕ್ಷಣಾ ಕವಚಗಳಾಗಿ ಕೆಲಸ ಮಾಡುತ್ತವೆ. ಕಾಮ, ಕ್ರೋಧಾದಿ ಕತ್ತಲೆಯನ್ನು ದೂರಮಾಡಲು ಇಂದಿನ ಸಮಾಜಕ್ಕೆ ಸತ್ಸಂಗದ ಅಗತ್ಯ ಹೆಚ್ಚಾಗಿದೆ ಎಂದರು.
ಸಂಗೀತ ಶಿಕ್ಷಕ ನಾಗರಾಜ ಹೆಚ್.ಎಸ್. ವಚನಗಳನ್ನು ಹೇಳಿಕೊಟ್ಟರು. ಸಿರಿಮಠ ಪೂಜಾ ವ್ಯವಸ್ಥೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
