‘ಉತ್ತಮ ಆರೋಗ್ಯಕ್ಕೆ ಅಡುಗೆಮನೆ ಔಷಧಾಲಯ, ಆಹಾರ ಔಷಧವಾಗಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಮನುಷ್ಯ ಜೀವನಪೂರ್ತಿ ಆರೋಗ್ಯದಿಂದ ಬದುಕಲು ಆಧ್ಯಾತ್ಮವನ್ನು ಬದುಕಿನ ಒಂದು ಭಾಗವನ್ನಾಗಿ ಸ್ವೀಕರಿಸಬೇಕು. ಅಂದಾಗ ಬದುಕು ಒತ್ತಡರಹಿತವಾಗಿ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಭೈರನಟ್ಟಿ ಹಾಗೂ ಶಿರೋಳ ಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೧೭ನೆಯ ಶಿವಾನುಭವದ ಸಮ್ಮುಖವನ್ನು ವಹಿಸಿ ಮಾತನಾಡಿದ ಶ್ರೀಗಳು, ದೇಹದಲ್ಲಿ ಹೃದಯದ ಬಡಿತ ಚೆನ್ನಾಗಿದ್ದರೆ, ನಮ್ಮ ಬದುಕು ಚೆನ್ನಾಗಿರುತ್ತದೆ. ಹೃದಯದ ಆರೋಗ್ಯ ಕಾಯ್ದುಕೊಳ್ಳಲು ಇಂದಿನ ಒತ್ತಡದ ಕಾಲದ ಮದ್ಯೆಯು ಬಿಡುವು ಮಾಡಿಕೊಂಡು ವ್ಯಾಯಾಮ, ಆಧ್ಯಾತ್ಮ, ಉತ್ತಮ ಆರೋಗ್ಯಪೂರ್ಣ ಆಹಾರ, ಉತ್ತಮ ಜೀವನಶೈಲಿಯನ್ನು ಹೊಂದಿ ಬದುಕಬೇಕೆಂದರು.

ಪ್ರತಿ ಮನೆಯಲ್ಲಿಯ ಅಡುಗೆಮನೆಯು ಔಷಧಾಲಯವಿದ್ದಂತೆ ಇರಬೇಕು. ನಾವು ಮಾಡುವ ಊಟವೇ ಔಷಧವಾಗಬೇಕೇ ಹೊರತು ಔಷದಗಳನ್ನು ಆಹಾರದಂತೆ ಸೇವಿಸಬಾರದು ಎಂದು ಹೇಳಿದರು.

ಡಾ. ಆನಂದ ಪಾಂಡುರಂಗಿ ಅವರು ಶ್ರೀಮಠದ ಪರಮಭಕ್ತರಾಗಿದ್ದರು. ಜಾತ್ರೆಯಾದಿಯಾಗಿ ಮಠದ ಯಾವುದೇ ಕಾರ್ಯಕ್ರಮಗಳಲ್ಲಿ ತ್ರಿಕರಣಪೂರ್ವಕವಾಗಿ ಒಳಗೊಳ್ಳುತ್ತಿದ್ದರು. ಅವರು ತಮ್ಮಲ್ಲಿ ಬರುವ ರೋಗಿಗಳ ಮನಸ್ಸಿನೊಂದಿಗೆ ಮಾತನಾಡಿ ಔಷಧವಿಲ್ಲದೆ ಗುಣಮುಖರನ್ನಾಗಿ ಮಾಡುವ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ಅವರ ಅಗಲುವಿಕೆ ವೈದ್ಯಲೋಕಕ್ಕೆ ತುಂಬಲಾರದ ನಷ್ಟವೆಂದರು.

ಹೃದಯ ರಕ್ಷಣೆ ಹಾಗೂ ಹೃದಯಾಘಾತ ಕುರಿತು ಮುನ್ನೆಚ್ಚರಿಕೆ ಎಂಬ ವಿಷಯದ ಕುರಿತು ಗದುಗಿನ ಕೆ.ಎಚ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಂಭು ಉಮೇಶ ಪುರದ ಅವರು ಹೃದಯದ ಸಂರಕ್ಷಣೆ, ಕಾರ್ಯ, ನಮ್ಮ ಕೆಟ್ಟ ಜೀವನ ಶೈಲಿಯಿಂದ ಹೃದಯಕ್ಕೆ ಉಂಟಾಗುವ ಹಾನಿ, ಅದರ ರಕ್ಷಣೆಯ ಕುರಿತು ವಿಡಿಯೋ ಮೂಲಕ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ಹೃದಯ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.

ಗದುಗಿನ ಖ್ಯಾತ ಹೃದಯ ರೋಗ ತಜ್ಞರಾದ ಡಾ. ಸಂಜೀವ ಚಿಂತಾಮಣಿ ಅವರು ಹೃದಯಾಘಾತ, ತುರ್ತು ಚಿಕಿತ್ಸೆ ಹಾಗೂ ಔಷಧಿ ಸೇವನೆಯ ಕುರಿತು ವಿಡಿಯೋ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಇಂದಿನ ಜನಾಂಗ ಧೂಮಪಾನ, ಮದ್ಯಪಾನ ಹಾಗೂ ಆಧುನಿಕ ಜೀವನ ಶೈಲಿಯಿಂದ ಹಾಗೂ ಜಂಕ್ ಫುಡ್‌ಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ತೊಂದರೆಗೆ ಒಳಗಾಗಿ ಹೃದಯಘಾತದಂತಹ ರೋಗಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಡಿಸಿಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.

ಗದಗ ಪರಿಸರ ಇಂದು ನಾಲ್ಕು ಕ್ಯಾಥ್‌ಲ್ಯಾಬಗಳನ್ನು ಹೊಂದಿದ್ದರೂ, ಇರುವ ಜನಸಂಖ್ಯೆಗೆ ಹಾಗೂ ರೋಗಿಗಳ ಸಂಖ್ಯೆಗೆ ಇವುಗಳು ಇಂದು ಸಾಕಾಗುತ್ತಿಲ್ಲವೆಂದರು.

ಶಿವಾನುಭವದಲ್ಲಿ ಗೌರವ ಅತಿಥಿಗಳಾಗಿದ್ದ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಚನ್ನಬಸಪ್ಪ ಐಲಿ ಅವರಿಗೆ ಪೂಜ್ಯರು ಗೌರವಿಸಿದರು.

ಗೌರವ ಸ್ವೀಕರಿಸಿ ಐಲಿ ಅವರು ಮಾತನಾಡುತ್ತಾ, ಲಿಂಗಾಯತರಲ್ಲಿ ಧರ್ಮ-ಸಂಸ್ಕೃತಿಗಳ ವಿಕಸನವಾಗಲು ಶ್ರೀಮಠ ಹಾಗೂ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳವರು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮಗಳೇ ಕಾರಣವೆಂದರು.

ಗದುಗಿನ ಬಸವದಳದ ಮಾಜಿ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ, ಬಸವ ಸಮುದಾಯ ಭವನದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಎಂ.ಬಿ. ಲಿಂಗದಾಳ, ಬಸವದಳದ ನೂತನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಅವರನ್ನು ಪೂಜ್ಯರು ಸನ್ಮಾನಿಸಿದರು.

ಸನ್ಮಾನೋತ್ತರವಾಗಿ ವಿ. ಕೆ. ಕರೇಗೌಡ್ರ ಮಾತನಾಡಿ ಅಭಿನಂದನೆಗಳನ್ನು ಸಲ್ಲಿಸಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಅಭಿಷೇಕ್ ಬಿ. ಹುಬ್ಬಳ್ಳಿ, ವಚನ ಚಿಂತನ ಚಂದನ ಬಳಿಗೇರ, ದಾಸೋಹ ಸೇವೆಯನ್ನು ಕೆ.ವಿ. ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ. ಎಸ್. ದಲಾಲಿ ಅವರು ಕೈಗೊಂಡಿದ್ದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ ಡಾ. ರಮೇಶ ಕಲ್ಲನಗೌಡರ ಮಾಡಿದರು. ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಮತ್ತು ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *