‘ಬಡ ಮಕ್ಕಳಲ್ಲಿ ಭಗವಂತನ ಕಂಡ ಸುತ್ತೂರು ರಾಜೇಂದ್ರ ಸ್ವಾಮೀಜಿ’

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಬಡಮಕ್ಕಳಲ್ಲಿ ಭಗವಂತನ ಕಂಡು, ಅವರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅವರಲ್ಲಿದ್ದ ಆ ಅನಂತನನ್ನು ಆರಾಧಿಸಿದವರು ಪೂಜ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.

ಸ್ವಾಮಿಗಳಿಗೆ ನಿಜವಾದ ಪೂಜೆಯೆಂದರೆ ಅಜ್ಞಾನದ ವಿನಾಶ; ಪ್ರಜ್ಞೆಯ ವಿಕಾಸ ಎಂಬುದು ಗೊತ್ತಿತ್ತು ಎಂದು ಕವಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷರಾದ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ನಮನ ಕಲಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀಗಳ 111 ನೇ ಜಯಂತಿ ಮಹೋತ್ಸವ ಹಾಗೂ ಅವರ ಹೆಸರಿನ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ನುಡಿಗಳನ್ನಾಡುತ್ತ, ಕಂತೆಭಿಕ್ಷೆ ಬೇಡಿ ಜೆ.ಎಸ್.ಎಸ್. ಮಹಾವಿದ್ಯಾಪೀಠವನ್ನು 1954 ರಲ್ಲಿ ಸ್ಥಾಪಿಸಿದ ಶ್ರೀಗಳು ಗ್ರಾಮೀಣ ಮತ್ತು ಎಲ್ಲಾ ದೃಷ್ಟಿಯಿಂದ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಶಯ ಹೊಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿ, ‘ಶಿಕ್ಷಣ ಕ್ಷೇತ್ರದ ಹರಿಕಾರ” ರೆನಿಸಿದರು ಎಂದರು.

 ಆರ್ಥಿಕ ಸಂಕಷ್ಟ ಬಂದೊದಗಿದಾಗ,ಬಡಮಕ್ಕಳ ಅನ್ನ, ವಸತಿಗಾಗಿ ಭಕ್ತರೊಬ್ಬರು ಕೊಟ್ಟಿದ್ದ ಲಿಂಗದ ಬಂಗಾರದ ಕರಡಿಗೆಯನ್ನು ಹಾಗೂ ಚಿನ್ನಲೇಪಿತ ರುದ್ರಾಕ್ಷಿ ಮಾಲೆಯನ್ನೂ 800 ರೂ.ಗೆ ಅಡವಿಟ್ಟಿದ್ದ ಮಾತೃಹೃದಯಿಯಿವರು, ಒಟ್ಟಾರೆಯಾಗಿ ಪೂಜ್ಯರ ಮಹೋನ್ನತವಾದ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದ ಕೊಡುಗೆಗಳನ್ನು ಗಮನಿಸಿಯೇ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಪ್ರತಿಷ್ಠಿತ ‘ರಾಜಗುರು ತಿಲಕ’ ಪ್ರಶಸ್ತಿಯನ್ನು ಸ್ವತಃ ಅವರಿಗೆ ನೀಡಿ, ಗೌರವಿಸಿದರು.

ಶ್ರೀಗಳ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ ಕೇಂದ್ರ ಸರ್ಕಾರ ಇವರ ‘ಅಂಚೆ ಚೀಟಿ’ ಬಿಡುಗಡೆ ಮಾಡಿತು, ಸಮಾಜದಿಂದ ‘ಕರ್ಮಯೋಗಿ’ ಎಂಬ ಬಿರುದೂ ಹಾಗೂ ಮೈಸೂರು ವಿ.ವಿ.ಯಿಂದ ‘ಗೌರವ ಡಾಕ್ಟರೇಟ್’ ಪದವಿಗಳೂ ದೊರೆತವು, ಕರ್ಮಯೋಗಿಯೂ ಧರ್ಮಯೋಗಿಯೂ ಪರಮತ್ಯಾಗಿಯೂ ಹಾಗೂ ಮಾತೃಹೃದಯಿಯೂ ಆಗಿದ್ದ ಇವರೇ ನಿಜವಾದ ಸದ್ಗುರು, ಗುರುಗಳ ಗುರುವಾದ ಜಗದ್ಗುರು ಎಂದರು.

ಚನ್ನಬಸಪ್ಪ ವಚನ ಗಾಯನ ಮಾಡಿದರೆ, ಶಾಂತಕುಮಾರಿ ಪ್ರಾರ್ಥನೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಎನ್. ಎಂ. ನವೀನಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಮರಿಮಲ್ಲಪ್ಪ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ಲೇಖಕಿ ಮಂಗಳ ಮುದ್ದುಮಾದಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಾದ ಶಿವಬಸಪ್ಪ ಹೆಚ್.ಎಲ್, ದೇವರಾಜು ಪಿ. ಚಿಕ್ಕಳ್ಳಿ ಹಾಗೂ ಸಂಗೀತ ಕ್ಷೇತ್ರದ ಸಾಧಕಿಯಾದ ಶಾಂತಕುಮಾರಿ ಅವರುಗಳಿಗೆ “ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಸದ್ಭಾವನಾ ಪ್ರಶಸ್ತಿ” ಪ್ರದಾನ ಮಾಡಲಾಯಿತು.

ಮೈಸೂರು ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಎಲ್ಲರನ್ನೂ ಸ್ವಾಗತಿಸಿ ನಿರೂಪಣೆಯನ್ನು ಮಾಡಿದರು.

ರಂಗನಾಥ ಮೈಸೂರು, ಆರ್. ಕೆ. ಸ್ವಾಮಿ, ವೀರಭದ್ರಸ್ವಾಮಿ, ಸುಶೀಲ, ಸುಮ, ರೇಖಾ ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *