ಆ. 31ರಿಂದ ಸೆ. 4ರವರೆಗೆ ಬಸವೇಶ್ವರ ಜಾತ್ರಾ ಮಹೋತ್ಸವ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಯಶಸ್ಸಿಗೆ ಸಹಕರಿಸಲು ಬಸವೇಶ್ವರ ಸೇವಾ ಸಮಿತಿ ಮನವಿ

ಬಸವನಬಾಗೇವಾಡಿ:

ಬಸವೇಶ್ವರ ಜಾತ್ರೆ ಎಲ್ಲ ಬಾಂಧವರ ಜಾತ್ರೆಯಾಗಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 4ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಜಾತ್ರಾಮಹೋತ್ಸವವನ್ನು ಯಶಸ್ವಿಗೊಳಿಸಲು ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಜೊತೆಗೆ ಎಲ್ಲರೂ ಸಹಕಾರ ನೀಡಿದರೆ ಜಾತ್ರೆಯು ಯಶಸ್ವಿಯಾಗಲು ಸಾಧ್ಯ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದ ಮುಂಭಾಗ ಗುರುವಾರ ಸಂಜೆ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾ ಮಹೋತ್ಸವದಂಗವಾಗಿ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳು ಗಮನ ಹರಿಸಬೇಕು. ರೌಡಿಶೀಟರ್‌ಗಳು ಸೇರಿದಂತೆ ಕಿಡಿಗೇಡಿಗಳ ಮೇಲೆ ಪೊಲೀಸ್ ಇಲಾಖೆ ವಿಶೇಷ ನಿಗಾವಹಿಸಬೇಕು. ಪುರಸಭೆ ಅಧಿಕಾರಿಗಳು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯವರು ಮುನ್ನಚ್ಚರಿಕೆಯ ಕ್ರಮವಾಗಿ ಸಂಚಾರಿ ಆಸ್ಪತ್ರೆಗಳನ್ನು ಆಯಾಕಟ್ಟಿನ ಸ್ಥಳದಲ್ಲಿ ಇರುವಂತೆ ಕೈಗೊಳ್ಳುವಂತಾಗಬೇಕು. ಪಟ್ಟಣದಲ್ಲಿ ಜಾತ್ರೆಯಂಗವಾಗಿ ದೀಪಾಲಂಕಾರ ಮಾಡಲಾಗುತ್ತಿದೆ. ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಜಾತ್ರೆಯ ಸಂದರ್ಭದಲ್ಲಿ ವಾಹನಗಳನ್ನು ಮೆಗಾ ಮಾರುಕಟ್ಟೆ ಆವರಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗುವುದು. ಐದು ದಿನಗಳ ಕಾಲ ವಾಹನಗಳ ಶುಲ್ಕ ವಿನಾಯಿತಿ ನೀಡುವಂತೆ ಅವಕಾಶ ಮಾಡಿಕೊಡಲಾಗುವದು.

ಮೆರವಣಿಗೆ ವೇಳೆ ಬೈಕ್ ಸೇರಿದಂತೆ ಯಾವುದೇ ವಾಹನಗಳು ಮೆರವಣಿಗೆಯ ಮಧ್ಯೆ ಪ್ರವೇಶಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.

ಆ.13 ರಿಂದ ಆರಂಭವಾಗಿರುವ ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯ ಬಸವಪ್ರಸಾದ ಸೇವೆಗೆ ಭಕ್ತರು ಸ್ವಯಂಪ್ರೇರಿತವಾಗಿ ಮುಂದಾಗುತ್ತಿರುವುದು ಶ್ಲಾಘನೀಯವಾಗಿದೆ. ಜಾತಿ-ಮತ ಭೇದವಿಲ್ಲದೆ ನಡೆಯುವ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ಮಾತನಾಡಿ, ಬಸವೇಶ್ವರ ಜಾತ್ರೆಯನ್ನು ಪ್ರತಿವರ್ಷದಂತೆ ಸುವ್ಯವಸ್ಥಿತವಾಗಿ ಆಚರಿಸಲು ತಾಲೂಕು ಆಡಳಿತ ಸಕಲ ರೀತಿಯಲ್ಲಿ ಸಹಕಾರ ನೀಡಲಿದೆ.

ಜಾತ್ರೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ತಾಲೂಕು ಆಡಳಿತದಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆಗೆ ಪುರಸಭೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಪಿಐ ಗುರುಶಾಂತ ದಾಶ್ಯಾಳ ಮಾತನಾಡಿ, ಜಾತ್ರೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೆರವಣಿಗೆಯ ಸಂದರ್ಭದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗುವುದು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಶಾಂತಿಯುತವಾಗಿ ಜಾತ್ರೆ ಆಚರಿಸಬೇಕು ಎಂದು ಮನವಿ ಮಾಡಿದರು.

ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಮಾತನಾಡಿ, ಅಧಿಕಾರಿಗಳೊಂದಿಗೆ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಇದು ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಭಕ್ತರು ಯಾವುದೇ ರೀತಿಯ ಗಲಾಟೆ ಮಾಡದೆ ಶಾಂತಿಯುತವಾಗಿ ಜಾತ್ರೆಯಲ್ಲಿ ಭಾಗವಹಿಸಬೇಕೆಂದರು.

ಸಭೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಎಂ.ಜಿ. ಆದಿಗೊಂಡ, ಭರತ ಅಗರವಾಲ, ಶೇಖರ ಗೊಳಸಂಗಿ, ಡಾ. ಬಸವರಾಜ ಕೋಟಿ, ರವಿ ಚಿಕ್ಕೊಂಡ, ಸುರೇಶಗೌಡ ಪಾಟೀಲ, ಸಂಗಮೇಶ ಓಲೇಕಾರ, ಡಾ. ಜಗದೀಶ ನಿಡಗುಂದಿ, ಸಂಕನಗೌಡ ಪಾಟೀಲ, ಜಟ್ಟಿಂಗರಾಯ ಮಾಲಗಾರ, ಅಮರ ಗಾಯಕವಾಡ, ರವಿ ನಾಯ್ಕೋಡಿ, ಭದ್ರು ಮಣ್ಣೂರ, ಯಶ್ ಅಗರವಾಲ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇತರರು ಇದ್ದರು. ರವಿ ರಾಠೋಡ ಸ್ವಾಗತಿಸಿ,ನಿರೂಪಿಸಿದರು. ವಿನುತ ಕಲ್ಲೂರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *