ಬಸವ ಮಂಟಪದಲ್ಲಿ ಲಿಂಗಾನಂದ ಸ್ವಾಮೀಜಿ, ಹಳಕಟ್ಟಿ ಸ್ಮರಣೆ

ವಚನ ಸಾಹಿತ್ಯ ಮನೆಮನೆಗೆ ತಲುಪಿಸಿದ ಸಂತ ಲಿಂಗಾನಂದರು: ಚನ್ನಬಸವಾನಂದ ಶ್ರೀ

ಬೀದರ:

ನಾಡಿನ ಉದ್ದಗಲಕ್ಕೂ ಸಂಚರಿಸಿ, ಗ್ರಂಥಸ್ಥ ವಚನ ಸಾಹಿತ್ಯವನ್ನು ಜನರ ಮನೆ ಮನಗಳಿಗೆ ತಲುಪಿಸಿದ ಮನಗೂಳಿಯ ಮಹಾಸಂತ ಪೂಜ್ಯ ಲಿಂಗಾನಂದ ಸ್ವಾಮಿಗಳು ಈ ನಾಡು ಕಂಡ ಅಪರೂಪದ ಬಸವಸುತರಾಗಿದ್ದಾರೆ ಎಂದು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ಆಯೋಜಿಸಿದ ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮಿಗಳ 31ನೇ ಲಿಂಗೈಕ್ಯ ಸಂಸ್ಮರಣೆ ಹಾಗೂ ಫ.ಗು. ಹಳಕಟ್ಟಿಯವರ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಲಿಂಗಾನಂದ ಮಹಾಸ್ವಾಮಿಗಳು ತಮ್ಮ ಆದಾಯಕ್ಕಾಗಿ ಶಾಲಾ ಕಾಲೇಜು ತೆರೆಯದೆ, ಕೇವಲ ಭಾಷಣದಲ್ಲಿಯೂ ಕಾಲ ಕಳೆಯದೆ ಅಥವಾ ಬರೀ ಏಕಾಂಗಿಯಾಗಿ ತಪಸ್ಸಿನಲ್ಲೂ ಮುಳುಗದೆ, ನಿರಂತರವಾಗಿ ಹರಿವ ಗಂಗೆಯಂತೆ ನಾಡಿನ ಪ್ರತೀ ಹಳ್ಳಿಗಳಿಗೂ ತೆರಳಿ ಬಸವ ತತ್ವದ ಅರುಣೋದಯವನ್ನು ಬಾನ ದಿಗಂತಕ್ಕೆ ಪಸರಿಸಿದ ಬಸವ ತತ್ವದ ಮಹಾನ್ ಸಂತರಾಗಿದ್ದಾರೆ ಎಂದು ಪ್ರತಿಪಾದಿಸಿದರು.

ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ಮಾತನಾಡಿ, ಲಿಂಗಾನಂದ ಸ್ವಾಮಿಗಳು ಅನೇಕ ಕಷ್ಟ ಕಾರ್ಪಣ್ಯ ಅನುಭವಿಸಿ ಬಸವ ಪರಂಪರೆ ಉಳಿಸಬೇಕೆಂದು ಶ್ರಮಿಸಿದ್ದಾರೆ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವಶರಣಪ್ಪ ಹುಗ್ಗೆಪಾಟೀಲ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಗುರು ಲಿಂಗಾನಂದರು ಬೀದರ ಜಿಲ್ಲೆಗೆ ಆಗಮಿಸಿ, ಪ್ರವಚನಗೈದು ಲಕ್ಷಾಂತರ ಬಸವಭಕ್ತರನ್ನು ರೂಪಿಸಿ ಹೋಗಿದ್ದಾರೆ. ರಾಷ್ಟ್ರೀಯ ಬಸವ ದಳ ಮೂಲಕ ಇಂದು ಲಕ್ಷ ಲಕ್ಷ ಭಕ್ತರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತಿದ್ದಾರೆ. ಅವರ ಸಂಘಟನಾ ಶಕ್ತಿ, ಕಂಚಿನ ಕಂಠದ ಪ್ರವಚನ, ನಿಸ್ವಾರ್ಥ ಸೇವೆಯನ್ನು ಇಂದಿನ ಪೂಜ್ಯರು ಮತ್ತು ಕಾರ್ಯಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ನಿವೃತ್ತ ಶಿಕ್ಷಕ ಜಗನ್ನಾಥ ಮೂಲಗೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ವೇದಿಕೆ ಮೇಲೆ ಮುಖಂಡರಾದ ಶಿವರಾಜ ಶಟಕಾರ, ಶಿವರಾಜ ಪಾಟೀಲ ಅತಿವಾಳ, ಕಲ್ಲಪ್ಪ ದೇಶಮುಖ, ಮಲ್ಲಿಕಾರ್ಜುನ ಜೈಲರ್, ಹಾವಗಿರಾವ ವಟಗೆ, ರವಿಕಾಂತ ಬಿರಾದಾರ, ಓಂಪ್ರಕಾಶ ರೊಟ್ಟೆ, ಜಗದೀಶ ಬಿರಾದಾರ, ಗಣಪತಿ ಬಿರಾದಾರ, ನಿರ್ಮಲಾ ನಿಲಂಗೆ ಸೇರಿದಂತೆ ಹಲವರಿದ್ದರು. ಶಿವಕುಮಾರ ಪಾರಾ ನಿರೂಪಿಸಿದರು. ರವಿಕಾಂತ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ