ಬಸವತತ್ವವನ್ನು ರಾಜಕೀಯವಾಗಿ ಪ್ರತಿಪಾದಿಸುವ ಶಕ್ತಿಯನ್ನು ಬಸವ ಸಂಘಟನೆಗಳು ಹೊಂದಲೇಬೇಕು.
ಕಲಬುರ್ಗಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಯುವ ಚಿಂತಕ ಶರಣು ಶಿಣ್ಣೂರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಹೌದು, ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ.
ಭಾರತದಲ್ಲಿ ಸಧ್ಯಕ್ಕೆ ಜನಾಂಗೀಯ ದ್ವೇಷ ಮತ್ತು ಏಕಸಂಸ್ಕೃತಿಯ ವೈದಿಕ ರಾಜಕಾರಣವು ಪ್ರಾಬಲ್ಯವನ್ನು ಸಾಧಿಸಿದೆ. ಇಂತಹ ಕೆಟ್ಟ ಏಕಸಂಸ್ಕೃತಿಯ ವೈದಿಕ ಸಿದ್ಧಾಂತದ ಪ್ರತಿಪಾದಕರು ತಂತ್ರ ಕುತಂತ್ರದಿಂದ ಇಡೀ ರಾಜಕೀಯವನ್ನು ನಿಯಂತ್ರಿಸುತ್ತಿದ್ದು, ಕರ್ನಾಟಕ ಮೂಲದ ಲಿಂಗಾಯತ ಸ್ವಾಮೀಜಿಗಳೂ, ರಾಜಕಾರಣಿಗಳೂ ಒಳಗೊಂಡು ಬಹುತೇಕ ಸಮುದಾಯವೂ ಇದರ ಪರಿಣಾಮಕ್ಕೆ ಒಳಗಾಗಿದೆ.
ಇಂತಹ ಸಂದರ್ಭದಲ್ಲಿ ರಾಜಕೀಯ ಪ್ರಭಾವವಿಲ್ಲದೆ ಬಸವತತ್ವದ ಅಸ್ಮಿತೆಯನ್ನು ಉಳಿಸುವದು ಅಷ್ಟೊಂದು ಸುಲಭ ಸಾಧ್ಯವಿಲ್ಲ.
ಆದರೆ ಈ ರಾಜಕೀಯ ಪ್ರಭಾವವು ಪಕ್ಷ ರಾಜಕೀಯಕ್ಕೆ ಸೇರಿಕೊಳ್ಳುವ ರೀತಿಯಲ್ಲಿ ಇರದೇ ಪಕ್ಷಾತೀತ, ಸಂವಿಧಾನಾತ್ಮಕ ಮತ್ತು ತತ್ವಾಧಾರಿತ Pressure Group ಆಗಿ ಕಾರ್ಯನಿರ್ವಹಿಸಬೇಕು.
ವೈದಿಕ ಸಿದ್ಧಾಂತವು ಜನಾಂಗೀಯ ವೈಷಮ್ಯದ ಮುಖೇನ ಸಮಾಜವನ್ನು ದುರ್ಬಲಗೊಳಿಸುತ್ತಿದ್ದರೆ, ಬಸವತತ್ವವು ಮಾನವೀಯ ಏಕತೆ ಮತ್ತು ಘನತೆಯ ಮೂಲಕ ಸಮಾಜವನ್ನು ಬಲಪಡಿಸುತ್ತದೆ.
ಬಹುಜನ ಚಳುವಳಿಯ ಮುಖೇನ ರೂಪುಗೊಂಡ ಬಸವತತ್ವವು ಮಾನವನ ಅಧ್ಯಾತ್ಮ, ಘನತೆ, ಸಮಾನತೆ, ಶ್ರಮಗೌರವ ಮತ್ತು ವೈಚಾರಿಕ ಸ್ವಾತಂತ್ರ್ಯ ಪ್ರತಿಪಾದಿಸುವ ಮಹಾನ್ ತತ್ವ.
ಸ್ಪಷ್ಟತೆಯಿಂದ ಈ ತತ್ವವನ್ನು ಮತ್ತು ವ್ಯತ್ಯಾಸವನ್ನು ರಾಜಕೀಯವಾಗಿ ಪ್ರತಿಪಾದಿಸುವ ಶಕ್ತಿಯನ್ನು ಬಸವ ಸಂಘಟನೆಗಳು ಹೊಂದಲೇಬೇಕು. ರಾಜಕೀಯದಿಂದ ದೂರ ಉಳಿದರೆ, ರಾಜಕೀಯವೇ ಬಸವತತ್ವವನ್ನು ವಿಕೃತಗೊಳಿಸುವ ಅಪಾಯ ಇರುತ್ತದೆ.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಖಂಡಿತವಾಗಿಯೂ ತರಬೇತಿ ಅತ್ಯಗತ್ಯ.
ವೈದಿಕರು ತಮ್ಮ ಸಿದ್ಧಾಂತವನ್ನು ಕೇವಲ ಭಾವನೆ ಮೂಲಕವಲ್ಲ, ದೀರ್ಘಕಾಲದ ತರಬೇತಿ, ಸಂಘಟನೆ, ಸಂವಹನ ಮತ್ತು ರಾಜಕೀಯ ತಂತ್ರಗಳ ಮೂಲಕ ಹರಡಿದ್ದಾರೆ. ಅದರ ಎದುರು ಬಸವತತ್ವವನ್ನು ಕೇವಲ ನೈತಿಕ ಸತ್ಯವೆಂದು ಹೇಳುವುದು ಸಾಕಾಗುವುದಿಲ್ಲ; ಅದನ್ನು ಸಾಮಾಜಿಕ, ರಾಜಕೀಯ ಹಿನ್ನೆಲೆಯಲ್ಲಿ ಸಮರ್ಥವಾಗಿ ಪ್ರತಿಪಾದಿಸುವ ಸಾಮರ್ಥ್ಯ ಬೇಕು. ಇದಕ್ಕೆ ತರಬೇತಿಯು ಕಡ್ಡಾಯ ಮತ್ತು ಅತ್ಯವಶ್ಯ.
ಈ ತರಬೇತಿಯು ಜನರನ್ನು ಹೋರಾಟಕ್ಕೆ ಪ್ರಚೋದಿಸುವುದಕ್ಕಿಂತ, ವೈಚಾರಿಕವಾಗಿ ಗಟ್ಟಿಗೊಳಿಸುವುದಕ್ಕೆ ಪ್ರಾಮುಖ್ಯತೆ ನೀಡಬೇಕು. ಸಂವಿಧಾನ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಮಾಧ್ಯಮ ನಿರ್ವಹಣೆ, ಅಪಪ್ರಚಾರಕ್ಕೆ ಸೂಕ್ತ ಪ್ರತಿಕ್ರಿಯೆ, ಚುನಾವಣೆ ಸಮಯದ ಜಾಗೃತಿ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಬೇಕು.
ಇದರಿಂದ ಲಿಂಗಾಯತ ಯುವಕರಲ್ಲಿ ಬಸವತತ್ವದ ಬಗ್ಗೆ ಹೆಮ್ಮೆ ಮೂಡುತ್ತದಲ್ಲದೇ ವೈದಿಕರ ದ್ವೇಷಾಧಾರಿತ narrativeಗೆ ಪರಿಣಾಮಕಾರಿಯಾಗಿ ಬೌದ್ಧಿಕ ಪ್ರತಿರೋಧ ಒಡ್ಡಿದಂತಾಗುತ್ತದೆ.
3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಬಸವಶಕ್ತಿ ಸಮಾವೇಶವು ಕ್ರಿಯೆಗೆ ಪ್ರತಿಕ್ರಿಯೆ ಎಂಬಂತಾಗದೇ ಪರ್ಯಾಯ ದೃಷ್ಟಿಕೋನವನ್ನು ನೀಡುವ ವೇದಿಕೆಯಾಗಬೇಕು.
ಮೊದಲ ಹಂತದಲ್ಲಿ ಬಸವತತ್ವದ ತಾತ್ವಿಕ ಆಳ, ಅದರ ಘನ ಮಾನವತಾವಾದಿ ಸ್ವರೂಪ ಮತ್ತು ಅದು ಜನಾಂಗೀಯ ದ್ವೇಷಕ್ಕೆ ಪರಿಹಾರ ಹೇಗೆ ಎಂಬುದನ್ನು ಸ್ಪಷ್ಟವಾಗಿ ಚರ್ಚಿಸಬೇಕು.
ಒಟ್ಟು ಸಮಾಜದೊಳಗೆ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದೊಳಗೆ ವೈದಿಕರು ಹೇಗೆ ಬಸವತತ್ವದಲ್ಲಿ ತಮ್ಮದನ್ನು ಸೇರಿಸಿ ಕಲಬೆರಿಕೆ ಉಂಟುಮಾಡುತ್ತಿದ್ದಾರೆ, ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಬೇಕು. ಇದರಿಂದ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ.
ಮುಂದಿನ ಹಂತದಲ್ಲಿ ಕಾರ್ಯತಂತ್ರದ ಚರ್ಚೆ ನಡೆಯಬೇಕು. ಬಸವ ಸಂಘಟನೆಗಳು ಸಮಾಜದಲ್ಲಿ, ಶಿಕ್ಷಣದಲ್ಲಿ, ಮಾಧ್ಯಮದಲ್ಲಿ ಮತ್ತು ರಾಜಕೀಯದಲ್ಲಿ ಹೇಗೆ ಹಸ್ತಕ್ಷೇಪ, ಮಧ್ಯಪ್ರವೇಶ ಮಾಡಬೇಕು ಎಂಬ ಸ್ಪಷ್ಟವಾದ ತಂತ್ರ ಮಾರ್ಗಸೂಚಿಗಳು ರೂಪುಗೊಳ್ಳಬೇಕು.
ಸಮಾವೇಶದ ಅಂತ್ಯದಲ್ಲಿ ಮಾನವ ಘನತೆಯನ್ನು ಕೇಂದ್ರವಾಗಿರಿಕೊಂಡು ಬಸವತತ್ವದ ಸಾರ್ವಜನಿಕ ಘೋಷಣಾಪತ್ರ ಹೊರಬರಬೇಕು. ಇದು ಕೇವಲ ಲಿಂಗಾಯತರಿಗೆ ಮಾತ್ರವಲ್ಲ, ಎಲ್ಲಾ ಸಮುದಾಯಗಳಿಗೆ ಆಕರ್ಷಿಸಬೇಕು, ಯಾಕೆಂದರೆ ಬಸವತತ್ವ ಹುಟ್ಟಿಕೊಂಡಿದ್ದು ಕೇವಲ ಮಾತ್ರ ಬಸವಣ್ಣನವರಿಂದಲ್ಲ; ಬಸವಾದಿ ಎಲ್ಲಾ ಕಾಯಕ ವರ್ಗಗಳ ಶರಣರಿಂದ.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?
ಈ ಸಮಾವೇಶಕ್ಕೆ ಭಾಗವಹಿಸುವವರ ಸಂಖ್ಯೆಗಿಂತ ಅವರ ಪಾತ್ರ ಮತ್ತು ಬದ್ಧತೆ ಮುಖ್ಯ.
ಸಮಾವೇಶದ ನಂತರವೂ ನಿರಂತರವಾಗಿ ಕೆಲಸ ಮಾಡುವ ಮನೋಭಾವ ಹೊಂದಿರುವ ಎಲ್ಲಾ ಬಸವಪರ ಸಂಘಟನೆಗಳ ಚಿಂತಕರು, ಯುವ ಕಾರ್ಯಕರ್ತರು, ಸಾಮಾಜಿಕ ಹೋರಾಟದಲ್ಲಿ ಅನುಭವ ಹೊಂದಿರುವವರು ಕಡ್ಡಾಯವಾಗಿ ಭಾಗವಹಿಸುತ್ತೇವೆ.
ಭಾಗವಹಿಸುವವರು ಕೇವಲ ಭಾಷಣ ಕೇಳಿ ಹೋಗುವವರಾಗದೇ, ತಮ್ಮ ತಮ್ಮ ಪ್ರದೇಶಗಳಲ್ಲಿ ಬಸವತತ್ವದ ಜಾಗೃತಿ ಮೂಡಿಸುವವರಾಗಬೇಕು. ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಇರಬೇಕು. ಇವರ ಮೂಲಕ ಬಸವತತ್ವವು ಸಮುದಾಯದ ಒಳಗೆ ಮಾತ್ರವಲ್ಲ, ಸರ್ವ ಸಮಾಜಕ್ಕೆ ತಲುಪುವ ಸಾಧ್ಯತೆ ಇದೆ.
5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಹೌದು, ಸಂಪೂರ್ಣ ಆಸಕ್ತಿ ಮತ್ತು ಬದ್ಧತೆಯಿದೆ. ಇದು ಕೇವಲ ಒಂದು ಸಮಾವೇಶವಲ್ಲ; ಬಸವಣ್ಣನವರು ಪ್ರತಿಪಾದಿಸಿದ ಮಾನವ ಘನತೆಯನ್ನು ಸಾರುವ ನೈಜ ರಾಜಕಾರಣದ ಪುನರ್ ಸ್ಥಾಪನೆಯ ಪ್ರಯತ್ನದ ಭಾಗವಾಗಿದೆ.
ವೈದಿಕರ ದ್ವೇಷಾಧಾರಿತ ತತ್ವಕ್ಕೆ ಪರ್ಯಾಯವಾಗಿ ಬಸವತತ್ವವನ್ನು ಸಮಾಜದ ಮುಂದೆ ತಂದು ನಿಲ್ಲಿಸುವುದು ಜವಾಬ್ದಾರಿಯೂ ಸಹ. ಇಂತಹ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳುವುದು ಹೋರಾಟವೂ ಹೌದು; ಸಮಾಜ ಸೇವೆಯೂ ಹೌದು.
ಈ ಸಮಾವೇಶವು ಕೇವಲ ಲಿಂಗಾಯತ ಅಸ್ಮಿತೆಯನ್ನು ಉಳಿಸುವುದಷ್ಟೇ ಅಲ್ಲದೇ, ಭಾರತೀಯ ಸಮಾಜಕ್ಕೆ ದ್ವೇಷರಹಿತ, ಮಾನವೀಯ ರಾಜಕಾರಣಕ್ಕೆ ಹೊಸದಿಕ್ಕು ತೋರಿಸುವ ಶಕ್ತಿಯ ಭಾಗವಾಗುತ್ತದೆ.
ಒಟ್ಟಾರೆ ಹೇಳುವುದಾದರೆ ವೈದಿಕ ಸಿದ್ಧಾಂತದ ಬಂಡವಾಳ ಮತ್ತು ಶಕ್ತಿಯು ದ್ವೇಷ ಹರಡುವುದರಲ್ಲಿದ್ದರೆ, ಬಸವತತ್ವದ ಬಂಡವಾಳ ಮತ್ತು ಶಕ್ತಿಯು ಮಾನವ ಘನತೆಯನ್ನು ಜಾರಿತರುವುದರಲ್ಲಿ ಇದೆ.
ಆದ್ದರಿಂದ ಇಂದಿನ ಭಾರತದ ಮತ್ತು ಕರ್ನಾಟಕದ ವಾಸ್ತವ ರಾಜಕೀಯ ಸ್ಥಿತಿ, ಹಾಗೂ ಮಾನವನ ಘನತೆಯನ್ನು ಮುಖ್ಯವಾಗಿರಿಸಿಕೊಂಡು ದ್ವೇಷಕ್ಕೆ ಪ್ರತಿದ್ವೇಷವಲ್ಲ, ಬದಲಾಗಿ ತತ್ವಚಿಂತನೆ, ಜಾಗೃತಿ, ರಾಜಕೀಯ ಮತ್ತು ಬುದ್ಧಿವಂತಿಕೆ ಮುಖೇನ ಪರಿಣಾಮಕಾರಿ ಪ್ರತಿರೋಧ ರೂಪಿಸುವುದು ಅತಿ ಜರೂರಾಗಿದೆ.

ಯುವ ಚಿಂತಕ ಶರಣು ಶೀಣೂರ್ ತುಂಬಾ ಮೌಲ್ಯಯುತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಬಸವ ಮೀಡಿಯಾ ಉತ್ತಮ ಕಾರ್ಯ ಮಾಡುತ್ತಿದೆ
My dearest lingayats, we are not hindu, in hindu four classes are there that is brahmana, keshtriya, vaishya and sudra, we are different from them, we are wellwisher of all above community formed by Lord Basava, every individual lingayat duty is to fight for lingayat religion. I am always ready to fight for forming our lingayat religion. Once again we are not hindu Or veerashaiva, we are lingayats, one day it will become religion of world. Sharnu sharanarthi.
ನೈಜ ಬಸವ ಶಕ್ತಿ ಬರಲು, ಮೊದಲು ಇತಿಹಾಸ ಮತ್ತು ಧರ್ಮವನ್ನು ಅರಿತರೆ ಮಾತ್ರ ಸ್ವಾಭಿಮಾನ, ಸ್ವ ಶಕ್ತಿ ಸ್ವಯಂ ಸ್ಪೂರ್ತಿ ಶಾಶ್ವತ ವಾಗಿ ನಮ್ದೊಂದಿಗಿರುತ್ತದೆ. ಕೇವಲ ಯಾವುದೊ ಒಂದು ಅಭಿಮಾನದಿಂದ ಬಂದ ಶಕ್ಕಿಗಳು ಅದರೋಂದಿಗೆ ಕಣ್ಮರೆಯಾಗುತ್ತದೆ.
ಲಿಂಗಾಯತ ಧರ್ಮದ ವಿರುದ್ಧ ಮಾತು ಆಡುವ ಲಿಂಗಾಯತ ರಾಜಕಾರಣಿಗಳಿಗೆ ಸೋಲಿಸುವ ಭಯ ಹುಟ್ಟಿಸುವ ಸಂಘಟನೆ ನಮ್ಮದಾಗಬೇಕು