(ಕರ್ನಾಟಕದಲ್ಲಿ ಇಲ್ಲಿಯವರೆಗೆ ಸಬಲವಾದ ಪ್ರಾದೇಶಿಕ ಪಕ್ಷಗಳು ಬೆಳೆದಿಲ್ಲ. ಈಗ ಬಸವ ಸಂಘಟನೆಗಳನ್ನು ರಾಜಕೀಯವಾಗಿ ಸಕ್ರಿಯಗೊಳಿಸುವ ಚಿಂತನೆ ನಡೆದಿರುವಾಗ ಎಲ್ಲರನ್ನು ಒಳಗೊಳ್ಳುವ ನೆಲಮೂಲದ ಬಸವತತ್ವ ಆಧಾರಿತ ಪ್ರಾದೇಶಿಕ ಪಕ್ಷದ ಒಂದು ಆಲೋಚನೆ ಇಲ್ಲಿದೆ.)
ಬೆಳಗಾವಿ
ಜಾತಿ ಧರ್ಮದ ಆಧಾರದಲ್ಲಿ ಯಾರಿಗೂ ಯಾವುದೇ ಬೇಧಭಾವ ಮಾಡದೇ, ಎಲ್ಲರನ್ನೂ ಸಮಾನವಾಗಿ ಕಾಣುವುದೇ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಮೂಲ ಉದ್ದೇಶವಾಗಿದೆ. ಸಮಸಮಾಜವೇ ಲಿಂಗಾಯತದ ಮುಖ್ಯ ಪರಿಕಲ್ಪನೆ. ಇದು ಸಂವಿಧಾನದ ಆಶಯಗಳಿಗೆ ಸಂಪೂರ್ಣ ಪೂರಕವಾಗಿದೆ.
ಆದ್ದರಿಂದ ಲಿಂಗಾಯತ ಜನತಾ ಪಕ್ಷ ಯಾವುದೇ ಒಂದು ಧರ್ಮದ ಪಕ್ಷವಲ್ಲ, ಬದಲಿಗೆ ಜಾತಿ ಧರ್ಮದ ಆಧಾರದಲ್ಲಿ ಉಂಟಾಗುವ ತಾರತಮ್ಯಗಳನ್ನು ನಿವಾರಣೆ ಮಾಡಲು ಇಂತಹ ಪಕ್ಷದ ಪರಿಕಲ್ಪನೆ ಮೂಡಿದೆ. ಇದು ಜಾತಿ-ಧರ್ಮದ ಪಕ್ಷವಲ್ಲ, ಜಾತ್ಯತೀತ-ಧರ್ಮಾತೀತ ಪಕ್ಷವಾಗಿದೆ.
ಲಿಂಗಾಯತ ಜನತಾ ಪಕ್ಷದ ಪ್ರಮುಖ ಧ್ಯೇಯೋದ್ದೇಶಗಳು-
1) ಲಿಂಗ-ವರ್ಗ-ವರ್ಣಗಳ ಬೇಧರಹಿತ ಸಮಸಮಾಜವನ್ನು ನಿರ್ಮಿಸುವುದು.
2) ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದು.
3) ಮಕ್ಕಳಲ್ಲಿ ಬಾಲ್ಯದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಅರಿವು ಮೂಡಿಸುವುದು.
4) ರಾಷ್ಟ್ರಪ್ರೇಮ ಬೆಳೆಸುವುದು ಮತ್ತು ದೇಶ ಮೊದಲು ಎಂಬ ಜಾಗೃತಿ ಮೂಡಿಸುವುದು.
5) ನಾಡು ನುಡಿ ಸಂಸ್ಕೃತಿಯ ಅರಿವು ಮೂಡಿಸುವುದು, ಮನುಕುಲದ ಉದ್ಧಾರ ಮತ್ತು ವಿಶ್ವಕಲ್ಯಾಣಕ್ಕಾಗಿ ಶ್ರಮಿಸುವುದು.
6) ಬಸವತತ್ವವು ನೀಡಿದ ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು.
7) ಜಾತಿ ಧರ್ಮದ ಆಧಾರದಲ್ಲಿ ಯಾರಿಗೂ ಯಾವುದೇ ಬೇಧಭಾವ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವುದು.
8) ಜಾತಿ ಧರ್ಮದ ಹಿನ್ನೆಲೆಯಲ್ಲಿ ಮನುಷ್ಯರಲ್ಲಿ ಇರುವ ಮೇಲರಿಮೆ ಕೀಳರಿಮೆಗಳನ್ನು ಹೋಗಲಾಡಿಸುವುದು.
9) ಸಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಬೇಧಭಾವ ಮಾಡುವ ಯಾವುದೇ ರೀತಿಯ ಕಟ್ಟುಪಾಡು, ಸಂಪ್ರದಾಯ, ಮೌಢ್ಯ ಆಚರಣೆಗಳನ್ನು ನಿಷೇಧಿಸುವುದು.
10) ಸತ್ಯ ಅಹಿಂಸೆಗಳ ಮೌಲ್ಯಯುತ ತತ್ವಗಳನ್ನು ಬಾಲ್ಯದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದು.
11) ಜನರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದು.
12) ಅವೈಚಾರಿಕ ಮತ್ತು ಅವೈಜ್ಞಾನಿಕ ಚಿಂತನೆಗಳನ್ನು ಹರಡುವ, ಮೌಢ್ಯ ವಿಷಯ ಮತ್ತು ಕಾರ್ಯಕ್ರಮಗಳನ್ನು ಬಿತ್ತರಿಸುವ ಯಾವುದೇ ವ್ಯಕ್ತಿ ಅಥವಾ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವುದು.
13) ಕಾನೂನು ವ್ಯವಸ್ಥೆಯ ಆಮೂಲಾಗ್ರ ಸುಧಾರಣೆಗೆ ಒತ್ತು ಕೊಡುವುದು ಮತ್ತು ನ್ಯಾಯಾಂಗವನ್ನು ಸದೃಢಗೊಳಿಸುವುದು.
14) ಜನರಿಗೆ ತ್ವರಿತ ನ್ಯಾಯದಾನ ಮಾಡಲು ನ್ಯಾಯಾಂಗಕ್ಕೆ ಬೇಕಾಗಿರುವ ಎಲ್ಲ ರೀತಿಯ ತಾಂತ್ರಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
15) ಭ್ರಷ್ಟಾಚಾರ ತಡೆಗೆ ಪ್ರತಿಯೊಬ್ಬ ಅಧಿಕಾರಿ, ರಾಜಕೀಯ ನಾಯಕರ ಕುಟುಂಬದ ಹಣಕಾಸು ಮತ್ತು ಆಸ್ತಿ ವಿವರಗಳನ್ನು ತಂತ್ರಜ್ಞಾನದ ಮೂಲಕ ನಿರಂತರವಾಗಿ ನಿಗಾವಹಿಸುವುದು ಮತ್ತು ಸಾರ್ವಜನಿಕವಾಗಿ ತೆರೆದಿಡುವುದು.
16) ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನ ಮಾಡುವಲ್ಲಿ ತಂತ್ರಜ್ಞಾನದ ಮೂಲಕ ನಿರಂತರವಾಗಿ ನಿಗಾ ವಹಿಸುವುದು ಮತ್ತು ಸಾರ್ವಜನಿಕವಾಗಿ ತೆರೆದಿಡುವುದು..
17) ಕಾಯಕವೇ ಕೈಲಾಸ ಎಂದು ದುಡಿದು ತಿನ್ನುವ ಮನೋಭಾವ ಬೆಳೆಸುವುದು.
18) ಸಮಾಜದಲ್ಲಿ ಪ್ರತಿಯೊಂದು ಕಾಯಕವೂ ಸಮಾನವಾಗಿದೆ ಮತ್ತು ಅದು ಅಷ್ಟೇ ಘನತೆ, ಗೌರವ ಹೊಂದಿದೆ ಎಂಬ ಅರಿವು ಮೂಡಿಸುವುದು.
19) ಎಲ್ಲ ರೀತಿಯ ವೃತ್ತಿ, ಉದ್ಯೋಗ, ನೌಕರಿ ಸೇವೆಗಳಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಗೌರವಗಳಿಂದ ಬಾಳುವಂತಹ ಸಮಾನ ಅವಕಾಶವನ್ನು ಮಾಡಿಕೊಡುವುದು. ಮತ್ತು
20) ಅದಕ್ಕಾಗಿ ಶ್ರೇಣೀಕೃತ ಸಂಬಳದ, ಆದಾಯದ ತಾರತಮ್ಯವನ್ನು, ಅಂತರವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು.
21) ಉಳ್ಳವರ ಮತ್ತು ಉಳ್ಳದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಉಳ್ಳವರಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲು ಹೆಚ್ಚಿನ ಆರ್ಥಿಕ ಹೊಣೆಗಾರಿಕೆ ವಹಿಸುವುದು.
22) ಸರ್ಕಾರದ ಯೋಜನೆಗಳನ್ನು ಬಡವರಿಗೆ ಉಚಿತವಾಗಿ, ಮಧ್ಯಮ ವರ್ಗದವರಿಗೆ ಕಡಿಮೆ ಮತ್ತು ಉಳ್ಳವರಿಗೆ ಗರಿಷ್ಠ ಪ್ರಮಾಣದಲ್ಲಿ ಹೊಣೆಗಾರಿಕೆಯೊಂದಿಗೆ ನೀಡುವುದು.
23) ಮೂಲಭೂತ ಅವಶ್ಯಕತೆಗಳಾದ ಸರ್ಕಾರದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಒದಗಿಸುವುದು.
24) ಖಾಸಗಿ ಸಂಸ್ಥೆಗಳಲ್ಲಿ ಸಹ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಡವರಿಗೆ ಉಚಿತವಾಗಿ, ಮಧ್ಯಮ ವರ್ಗದವರಿಗೆ ಕಡಿಮೆ ಮತ್ತು ಉಳ್ಳವರಿಗೆ ಗರಿಷ್ಠ ಪ್ರಮಾಣದಲ್ಲಿ ಹೊಣೆಗಾರಿಕೆಯೊಂದಿಗೆ ನೀಡುವಂತೆ ನೋಡಿಕೊಳ್ಳುವುದು.
25) ಹಂತಹಂತವಾಗಿ ಸರ್ಕಾರಿ ದಾಖಲೆಗಳಲ್ಲಿ ಪ್ರಜೆಗಳ ಜಾತಿ ಧರ್ಮಗಳನ್ನು ನಮೂದಿಸುವುದನ್ನು ಬಿಟ್ಟುಬಿಡುವುದು, ತನ್ಮೂಲಕ ಜಾತಿ ಧರ್ಮಗಳ ಮಹತ್ವ ಕಡಿಮೆ ಮಾಡಿ ಮನುಷ್ಯರೊಂದೇ ಜಾತಿ, ಮನುಷ್ಯತ್ವವೇ ಎಲ್ಲರ ನಿಜವಾದ ಧರ್ಮ ಎಂದು ಜಗತ್ತಿಗೆ ಸಂದೇಶ ಸಾರುವುದು.

ರಾಜಕೀಯ ಪಕ್ಷ ವಾಗದೆ, ಸಮಾಜ ಸೇವೆಗಾಗಿ ಲಿಂಗಾಯತ ಜನತಾ ಪಕ್ಷ ಸ್ಥಾಪನೆ ಮಾಡೋದು ಒಳ್ಳೆದು ,
ಹಾಗೆ ಈ ಸಂಘಟನೆಯ ಧ್ಯೇಯ ಉದ್ದೇಶ ಗಳಲ್ಲಿ , ಜಗತ್ತಿನ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕು ಎಂದು ಬಸವಾದಿ ಶರಣರು, ವಚನ ತತ್ವ ಸಿದ್ಧಾಂತದ ವೈಜ್ಞಾನಿಕ ವೈಚಾರಿಕ ವಾಸ್ತವ ಸತ್ಯಗಳೊಂದಿಗೆ ಸ್ವತಂತ್ರ ಧರ್ಮವಆಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ ಶರಣರು, ಇಂಥ ಲಿಂಗಾಯತ ಧರ್ಮಕೆ , ಕೇಂದ್ರ ಸರ್ಕಾರ ದಿಂದಾ ,ಸ್ವಾತಂತ್ರ್ಯ ಧರ್ಮದ ಮಾನ್ಯತೆ ಪಡೆಯಲು ಹೋರಾಟ ಮಾಡುತ್ತೇನೆ ಎಂಬ ವಿಷಯ ಸೇರಿಸಿಲ್ಲ, ಈಗ ತಕ್ಷಣ ಈ ವಿಷಯವು ಸೇರಿಸಿ ಹೇಳಿಕೆ ಕೊಡಬೇಕು ಎಂದು ನನ್ನ ವಿನಂತಿ
ಮೀಸಲಾತಿಗೆ ಸಂಬಂಧಿಸಿದ ಯಾವುದೇ ವಿಚಾರ ಇರಬಾರದು. ಇದ್ದರೆ ಮೀಸಲಾತಿ ಪಡೆಯುವ ಜನರು ಈ ಪಕ್ಷಕ್ಕೆ ಬೆಂಬಲಿಸುವುದಿಲ್ಲ.
ಧರ್ಮ, ಜಾತಿ ಯ ಹೆಸರಿನ ಪಕ್ಷಗಳಿಗೆ ಬೆಳವಣಿಗೆ ಇರುವುದಿಲ್ಲ
ಲಿಂಗಾಯತ ಅನ್ನುವುದು ಒಂದು ಜಾತಿ ಅಲ್ಲ ಮಾರ್ಗ ಎಲ್ಲಾ ವರ್ಗದ ಜನರು ಒಳಗೊಳ್ಳಬಹುದು ಎಂಬ ಭರವಸೆ, ವಿಶ್ವಾಸ ಮೂಡಿದಾಗ ಮಾತ್ರ ಪಕ್ಷ ಯಶಸ್ಸು ಗಳಿಸುತ್ತದೆ
ಒಳ್ಳೆಯ ವಿಚಾರ ಕಾರ್ಯಗತಗೊಳಿಸಿ
ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಉದ್ದೇಶ ಇದ್ದರೆ , ಬಸವಣ್ಣನವರ ವಚನವೇ ಪಕ್ಷದ ತತ್ವ ಸಿದ್ದಾಂತಗಳು, ಹಾಗೂ ಪಕ್ಷದ ಹೆಸರು ಅನುಭವ ಮಂಟಪ ಏಕೆಂದರೆ ವಿಶ್ವದ ಪ್ರಥಮ ಸಂಸತ್ತು ಆಗಿತ್ತು
ಲಿಂಗಾಯತ ಧರ್ಮ ಬೆಳೆವಣಿಗೆಯಾಗ ಬೇಕೆಂದರೆ ಹತ್ತು ವರುಷ ಯಾವ ಲಿಂಗಾಯತ ಅಭ್ಯರ್ಥಿಗಳಿಗೆ ಮತ ಹಾಕಬೇಡಿ🌺🌺
ಲಿಂಗಾಯತ ಜನತಾ ಪಕ್ಷ ಎಂಬುದು ಅಷ್ಟೊಂದು ಸೂಕ್ತವಾದ ಹೆಸರು ಅಲ್ಲ ಅನಿಸುತ್ತದೆ ಕಾರಣ ಹಿಂದಿನಿಂದಲೂ ಇಲ್ಲಿಯವರೆಗೆ ಲಿಂಗಾಯಿತವನ್ನು ಒಂದು ಜಾತಿಯ ರೀತಿಯಲ್ಲಿ ವರ್ಣಿಸಲಾಗಿದೆ ಆದ್ದರಿಂದ ಕೆಲವು ಪ್ರಜ್ಞಾವಂತ ಲಿಂಗಾಯತರು ಮಾತ್ರ ಬೆಂಬಲಿಸಬಹುದು ಇನ್ನಷ್ಟು ಲಿಂಗಾಯತ ಸಮಾಜದ ಮೌಡ್ಯ ಮನಸ್ಸುಗಳು ವೀರಶೈವಕ್ಕೆ ಜ್ಯೋತಿ ಬಿದ್ದಿವೆ ಹೀಗಿರುವಾಗ ಲಿಂಗಾಯಿತ ಸಮಾಜದಲ್ಲಿಯೇ ಒಮ್ಮತವಿಲ್ಲದಿರುವಾಗ ಈ ಪಕ್ಷ ಬೆಳೆಯಲು ಹೇಗೆ ಸಾಧ್ಯವಾಗುತ್ತದೆ ಅದರಲ್ಲೂ ಕೇವಲ ಒಂದು ವರ್ಗದ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲದ ಮಾತು ಆದ್ದರಿಂದ ನಾವು ಬಸವಣ್ಣನವರ ಹೆಸರನ್ನು ಮುಂದಿಟ್ಟುಕೊಂಡು ಬಂದರೆ ಅನ್ಯ ಸಮಾಜದ ವೈಚಾರಿಕ ಮನಸ್ಸುಗಳು ಸಮ ಸಮಾಜದ ಮನಸ್ಸುಗಳು ಈ ಪಕ್ಷವನ್ನು ಒಪ್ಪಿಕೊಂಡು ಬೆಂಬಲಿಸಬಹುದು ಎಂಬುದು ನಮ್ಮ ಅನಿಸಿಕೆ
ಒಂದು ರೀತಿಯಲ್ಲಿ ಯೋಚನೆ,ಯೋಜನೆ ಸರಿಯಿದೆ.
ಆದರೂ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ,ಚರ್ಚೆಯಾಗಬೇಕು
ಶರಣ ಬಂಧುಗಳೇ ನಿಮ್ಮ ಎಲ್ಲಾ ಚಿಂತನ ಲಹರಿಗಳಿಗೆ ನನ್ನ ಶರಣು ಶರಣಾರ್ಥಿಗಳು 🙏.
ಲಿಂಗಾಯತ ಜನತಾ ಪಕ್ಷ ಎನ್ನುವ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುವ ಮೂಲಕ ಅನೇಕ ಸಾಮಾಜಿಕ, ರಾಜಕೀಯ, ಇನ್ನಿತರೆ ವಿಷಯಗಳ ಕುರಿತು ಸುಮಾರು 25 ಅಂಶಗಳ ಸಲಹೆಗಳನ್ನ ನೀಡಿದ್ದೇನೊ ಸರಿ. ಇದರಲ್ಲಿ ಲಿಂಗಾಯತ ಧರ್ಮದ ಸ್ಥಾಪನೆಗಾಗಲಿ, ಅದರ ಮಾನ್ಯತೆಗಾಗಲಿ, ಅದರ ವಿಸ್ತಾರಕ್ಕಾಗಲಿ, ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಲಿಂಗಾಯತ ಜನತಾ ಪಾರ್ಟಿಯ ಅಭಿಪ್ರಾಯವೇನು ಎಂಬುದನ್ನು ತಿಳಿಸಿಲ್ಲ.
12ನೇ ಶತಮಾನದ ಬಸವಾದಿ ಪ್ರಮಥರು, ತಾವು 25 ಅಂಶಗಳಲ್ಲಿ ಹೇಳಿರುವ ಅಷ್ಟು ವಿಚಾರಗಳ ಬಗ್ಗೆ ಬರೀ ಹೇಳುವುದು ಮಾತ್ರವಲ್ಲ, ಆಚರಣೆಗೂ ತಂದಿದ್ದಾರೆ. ವಚನ ರಚನೆಗಳ ಮೂಲಕ ತಮ್ಮ ಅನುಭವವನ್ನು ಸಮಾಜಕ್ಕೆ ಅನುಭಾವ ಮಾಡಿದ್ದಾರೆ. ಇನ್ನೇನಿದ್ದರೂ ನಾವುಗಳು ಅದನ್ನ ಅರ್ಥ ಮಾಡಿಕೊಂಡು ಆಚರಣೆಗೆ ತರಬೇಕಿದೆ. ಜನಸಾಮಾನ್ಯರಿಗೆ ಶರಣರ ಈ ತತ್ವಗಳನ್ನು ಪರಿಚಯ ಮಾಡಬೇಕಿದೆ. ಈ ಸಮಾಜದೊಳಗೆ ಬಿತ್ತಬೇಕಿದೆ.
ಈ ಕೆಲಸ ಮಾಡಲೆಂದೇ ಹುಟ್ಟಿಕೊಂಡ ಅಂದಿನ ಜಂಗಮರೆನಿಸಿಕೊಂಡ, ಇಂದಿನ ವಿರಕ್ತ ಮಠಾಧೀಶರುಗಳು( ಕೆಲವರನ್ನು ಹೊರತುಪಡಿಸಿ ) ಬಸವಣ್ಣನವರನ್ನು, ಬಸವ ತತ್ವವನ್ನು, ಲಿಂಗಾಯಿತ ಸಮಾಜವನ್ನು ಮರೆಮಾಚಿ ಆನೆ ನಡೆದದ್ದೇ ದಾರಿ ಎಂಬಂತೆ ತಮ್ಮದೇ ಆದ ವರ್ಚಸ್ಸನ್ನ ತೋರುತ್ತಾ ಇಡೀ ಲಿಂಗಾಯಿತ ಸಮಾಜವನ್ನು ದಾರಿ ತಪ್ಪಿಸಿದ್ದಾರೆ.
900 ವರ್ಷಗಳ ಇತಿಹಾಸ ಹೊಂದಿರುವ ಈ ಧರ್ಮದಲ್ಲಿ, ವಿಶ್ವದಲ್ಲಿ ಎಲ್ಲೂ ಎಂದೂ ನಡೆಯದ ಸಾಮಾಜಿಕ,ಸಾಹಿತ್ತ್ಯಿಕ, ಧಾರ್ಮಿಕ ಕ್ರಾಂತಿ ಕನ್ನಡ ಭಾಷೆಯಲ್ಲಿ ಕರ್ನಾಟಕದ ಮಣ್ಣಿನಲ್ಲಿ ಘಟಿಸಿ ಹೋಗಿದೆ. ವಿಶ್ವದ ಮನುಕುಲದ ಸಮಾಜವಾದ, ಸಮತಾವಾದಕ್ಕೆ ಹೆಬ್ಬಾಗಿಲನ್ನು ತೆಗೆದದ್ದೇ ನಮ್ಮ ಶಿವ ಶರಣರು, ಶರಣೆಯರು. ಇಂತಹ ಅನೇಕ ಚಾತ್ರಿಕ ಘಟನೆಗಳು ನಮ್ಮ ಕಣ್ಣೆದುರಿಗೆ ಇದ್ದರೂ ಅದನ್ನು ಉಳಿಸಿ ಬೆಳೆಸಿ ಕಟ್ಟುವಲ್ಲಿ ನಾವು ಸೋತಿದ್ದೇವೆ.
ಆದುದರಿಂದ ರಾಜಕೀಯ ಪಕ್ಷವನ್ನ ಲಿಂಗಾಯಿತ ಧರ್ಮದ ಹೆಸರಿನಲ್ಲಿ ಕಟ್ಟಿ ಇಡೀ ಲಿಂಗಾಯತ ಧರ್ಮವನ್ನು ತೇಜೋವಧೆ ಮಾಡುವ ಮತ್ತೊಂದು ಪ್ರಯತ್ನವಾದಿತಷ್ಟೇ.
ಧರ್ಮದ ಮಾನ್ಯತೆಗೆ ರಾಜಕೀಯ ಬೆಂಬಲ ಬೇಕು ನಿಜ. ಆದರೆ ಧರ್ಮದ ಏಳಿಗೆಗೆ ರಾಜಕೀಯವನ್ನೇ ಊರುಗೋಲಾಗಿ ಆದರಿಸಿದಾಗ ಎಲ್ಲ ರಾಜಕೀಯ ಪಕ್ಷಗಳಂತೆ ಈ ಪಕ್ಷವು ಮೂಲೆಗುಂಪಾಗುವುದಿಲ್ಲ ಎಂದು ಹೇಗೆ ಹೇಳುವುದು.
ಧರ್ಮದ ಉಳಿವು, ಮಾನವತ್ವದ ಏಳಿಗೆ,ಜೀವದಯೆ, ದೇಶಭಕ್ತಿ ಇವುಗಳಿಗೆ ಬೇಕಾಗಿರುವುದು ಮನುಷ್ಯನ ತ್ಯಾಗದ ಮನೋಭಾವ. ಸಮರ್ಪಣಾ ಮನೋಭಾವ.
ರಾಜಕೀಯ ಪಕ್ಷವೊಂದನ್ನು ನಿರ್ಮಿಸಿದಾಗ ಅಲ್ಲಿ ಕೇವಲ ಅಧಿಕಾರ, ಗದ್ದುಗೆ, ಹಣ, ಪ್ರತಿಷ್ಠೆ, ದ್ವೇಷ, ಪರಸ್ಪರ ಆರೋಪ ಪ್ರತ್ಯಾರೋಪ, ಇವುಗಳೇ ಪ್ರಧಾನವಾಗಿ ಧಾರ್ಮಿಕ ತತ್ವಗಳು, ಮಾನವೀಯ ಮೌಲ್ಯಗಳು, ಬಸವಾದಿ ಪರಮತರ ಆದರ್ಶಗಳು ಅಲ್ಲಿ ಗೌಣವಾಗುತ್ತವೆ. ಇದು ನನ್ನ ಅಭಿಪ್ರಾಯವಷ್ಟೇ ಅಂತಿಮ ತೀರ್ಮಾನವಲ್ಲ ಶರಣು ಶರಣಾರ್ಥಿ 🙏