ಭಾಲ್ಕಿ ಹಿರೇಮಠದ ಇತಿಹಾಸ ಬಿಂಬಿಸುವ ‘ದಿ ಲ್ಯಾಂಪ್ ಬೇರರ್ಸ್’ ಕೃತಿ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ:

ಡಾ. ಮನೋಜ ಹಾನಗಲ್ ಅವರ ಆಂಗ್ಲ ಕೃತಿ ‘ದಿ ಲ್ಯಾಂಪ್ ಬೆರ‍್ಸ್’ (The  Lamp Bearers) ಎಂಬುದು ಭಾಲ್ಕಿ ಹಿರೇಮಠ ಗಡಿಭಾಗದಲ್ಲಿ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಸುದೀರ್ಘ ಇತಿಹಾಸವನ್ನು ಬಿಂಬಿಸುವ ಒಂದು ಅಮೋಘ ಕೃತಿಯಾಗಿದೆ ಎಂದು ಕ.ವಿ.ವಿ. ಕುಲಪತಿ ಡಾ. ಎಂ. ಎ. ಖಾನ್ ಅಭಿಪ್ರಾಯಪಟ್ಟರು.

ಅವರು ಕ.ವಿ.ವಿ. ಸಂಘ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ಟಸ್ಟ್, ಭಾಲ್ಕಿ-ಬೀದರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ. ಸಂತೋಷ ಎಸ್. ಹಾನಗಲ್ಲ ಅವರು ರಚಿಸಿದ ‘ದಿ ಲ್ಯಾಂಪ್ ಬೆರ‍್ಸ್’ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ  ಮಾತನಾಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಭವ್ಯ ಪರಂಪರೆ ಹಾಗೂ ಇತಿಹಾಸವನ್ನು ಲೇಖಕ ಡಾ. ಸಂತೋಷ ಹಾನಗಲ್ಲ ಆಂಗ್ಲ ಭಾಷೆಯಲ್ಲಿ ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದಿದ್ದಾರೆ. ಈ ಕೃತಿ ಕನ್ನಡಕ್ಕೆ ಅನುವಾದವಾದಲ್ಲಿ ಇನ್ನೂ ಹೆಚ್ಚೆಚ್ಚು ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಪೂಜ್ಯರೀರ್ವರು ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ಮಾಡಿದ ಕಾರ್ಯಗಳನ್ನು ಅರಿಯಲು ಅನುಕೂಲವಾಗುತ್ತದೆ ಎಂದರು.

ಶೇಗುಣಸಿಯ ವಿರಕ್ತಮಠದ ಪೂಜ್ಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಗ್ರಂಥ ಪರಿಚಯಿಸಿ ಮಾತನಾಡಿ, ‘ದಿ ಲ್ಯಾಂಪ್ ಬೆರ‍್ಸ್’ ೧೩ ಅಧ್ಯಾಯ ಹಾಗೂ ೨೦೦ ಪುಟಗಳ ಮೌಲಿಕವಾದ ಕೃತಿಯಾಗಿದೆ. ಅಂದು ಪೂಜ್ಯ ಚನ್ನಬಸವ ಪಟ್ಟದೇವರು ಹಚ್ಚಿದ ದೀಪ ಇಂದಿಗೂ ನಂದಾದೀಪವಾಗಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಈಗಿನ ಪೂಜ್ಯ ಡಾ. ಬಸವಲಿಂಗ ಪಟ್ಟದೇವರಿಗೆ ಸಲ್ಲುತ್ತದೆ. ಪೂಜ್ಯರು ಮಾತೃಹೃದಯಿಗಳು, ಸದಾಚಾರ ಸದ್ಗುಣ ಸಂಪನ್ನರು. ೪೫ ಕ್ಕೂ ಹೆಚ್ಚು ಕೃತಿ ಪೂಜ್ಯ ಬಸವಲಿಂಗ ಶ್ರೀಗಳಿಂದ ಬರೆಯಲ್ಪಟ್ಟಿವೆ.

ಭಾಲ್ಕಿಯ ಅಂದಿನ ಪೂಜ್ಯ ಚನ್ನಬಸವ ಪಟ್ಟದೇವರು ಮಠದ ಮುಂದೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುವ ಕಾರ್ಯವನ್ನು ಮಾಡಿದ್ದಾರೆ. ಇತ್ತ ಬೆಳಗಾವಿಯಲ್ಲಿ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಮರಾಠಿ ನಾಮಫಲಕ ಹಾಕಿ ಕನ್ನಡ ಕಲಿಸಿದ್ದು ಇತಿಹಾಸವಾಗಿದೆ ಎಂದು ಹೇಳಿದರು.

ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಭಾಲ್ಕಿಯ ಪೂಜ್ಯರೀರ್ವರು ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ, ಸಂಸ್ಕೃತಿ, ಕನ್ನಡತನವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಇದೊಂದು ಇಡೀ ದೇಶಕ್ಕೆ ಮಾದರಿ. ಈ ಕೃತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಲ್ಕಿಯ ಹಿರಿಮೆ, ಗರಿಮೆ ಹೆಚ್ಚಿಸುವುದಾಗಿದೆ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಕೇವಲ ೪೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ವಿದ್ಯಾಸಂಸ್ಥೆಗಳಲ್ಲಿ ಇಂದು ೨೦ ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಜೊತೆಗೆ ೧೨೦ ಅನಾಥ ಮಕ್ಕಳಿಗೆ ಶಿಕ್ಷಣದ ಜೊತೆ ಆಶ್ರಯ ನೀಡಿ ಬೆಳೆಸಲಾಗುತ್ತಿದೆ ಎಂದರು.

ಕೃತಿಕಾರರಾದ ಡಾ. ಸಂತೋಷ ಹಾನಗಲ್ಲ ಮಾತನಾಡಿದರು. ಧಾರವಾಡ ಶ್ರೀ ಮುರುಘಾಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕ.ವಿ.ವ.ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಹಾಗೂ ಡಾ. ಮನೋಜ ಬುಟ್ಟೆ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಂಕರ ಕುಂಬಿ, ಡಾ. ಮಹೇಶ ಹೊರಕೇರಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಶಶಿಧರ ತೋಡಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *