ಪೋಕ್ಸೋ ಪ್ರಕರಣ: ಜೂನ್ 30ಕ್ಕೆ ಆದೇಶ ಮುಂದೂಡಿಕೆ, ಹೈ ಕೋರ್ಟ್ ಕಳವಳ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ಪೋಕ್ಸೊ ಪ್ರಕರಣದಲ್ಲಿ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯ ಕಾಯ್ದಿರಿಸಿದ ಆದೇಶವನ್ನು 30ಕ್ಕೆ ಮೂಂದೂಡಿದೆ.

ಜೂನ್‌ 11ರಂದು ವಾದ–ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಆದೇಶವನ್ನು ಜೂನ್‌ 18ಕ್ಕೆ ಕಾಯ್ದಿರಿಸಿತ್ತು. ಈ ನಡುವೆ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಎಫ್‌ಐಆರ್‌ ದಾಖಲಾಗುವುದಕ್ಕೂ ಮುನ್ನವೇ ಸ್ವಾಮೀಜಿ ಪಡೆದಿರುವ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸ್ವಾಮೀಜಿ ಪರ ವಕೀಲ ಎಸ್‌.ವಿ. ಪಾಟೀಲ ತಕರಾರು ಸಲ್ಲಿಸಿದ್ದರು.

‘ನಿರೀಕ್ಷಣಾ ಜಾಮೀನು ರದ್ದು ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ನಡೆಸುತ್ತಿರುವಾಗಲೇ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇದು ಇತ್ತೀಚೆಗೆ ವಿಚಾರಣಾ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ, ಅಂತಿಮ ಆದೇಶದ ದಿನಾಂಕವನ್ನು ನ್ಯಾಯಾಧೀಶರು ಮುಂದೂಡಿದರು’ ಎಂದು ಸ್ವಾಮೀಜಿ ಪರ ವಕೀಲ ಎಸ್‌.ವಿ. ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಹೈಕೋರ್ಟ್‌ ಆಘಾತ ವ್ಯಕ್ತಪಡಿಸಿದೆ.

ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು.

ಕೆಲ ಕಾಲ ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಪೋಕ್ಸೊ ಪ್ರಕರಣದಲ್ಲಿಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿತು.

ಆದರೆ, ಜಾಮೀನು ಪಡೆದಿರುವ ಆರೋಪಿಯ ವಾದ ಆಲಿಸದೆ ಯಾವುದೇ ಆದೇಶ ಹೊರಡಿಸಲಾಗದು ಎಂದು ಅಭಿಪ್ರಾಯಪಟ್ಟು, ಆರೋಪಿ ವಚನಾನಂದ ಸ್ವಾಮೀಜಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಡಿ.ಆರ್‌. ರವಿಶಂಕರ್‌, “ವಿಚಾರಣಾ ನ್ಯಾಯಾಲಯದ ಆಕ್ಷೇಪಾರ್ಹ ಜಾಮೀನು ಆದೇಶದ 14ನೇ ಪ್ಯಾರಾ ಗಮನಿಸಬೇಕು. ಜಾಮೀನು ಮಂಜೂರು ಮಾಡಿರುವ ವಿಧಾನ ನಿಜಕ್ಕೂ ಆಘಾತಕಾರಿಯಾಗಿದೆ,” ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ”ಖಂಡಿತವಾಗಿಯೂ ಇದು ಆಘಾತಕಾರಿ. ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿಈ ರೀತಿಯಾಗಬಾರದು, ನಿರೀಕ್ಷಣಾ ಜಾಮೀನು ನೀಡುವ ಪ್ರಶ್ನೆಯೇ ಇರುವುದಿಲ್ಲ,” ಎಂದು ಹೇಳಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *