ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ನಿತ್ಯ ಬದುಕಿನಲ್ಲಿ ನೈತಿಕ ಆಚರಣೆಗಳನ್ನು ಶುದ್ಧವಾಗಿಟ್ಟುಕೊಳ್ಳಲು ಯೋಗ ಸಹಕಾರಿ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಬಹಳ ಸಹಕಾರಿ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೩ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಯೋಗವನ್ನು ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಯೋಗದ ಮಹತ್ವವನ್ನು ಸಾರುವಲ್ಲಿ ನಮ್ಮ ದೇಶದ ಕೊಡುಗೆ ಅಪಾರವಾದುದು.

ಹಣಕ್ಕಿಂತಲೂ ದೊಡ್ಡದು ನಮ್ಮ ಆರೋಗ್ಯ. ಶುಚಿ ಆಹಾರ, ವಿಹಾರ, ನಡಿಗೆ, ವ್ಯಾಯಾಮ, ಯೋಗ ಪ್ರತಿಯೊಬ್ಬರೂ ದಿನನಿತ್ಯ ರೂಢಿಸಿಕೊಳ್ಳಬೇಕು. ಮನುಷ್ಯನ ದೈಹಿಕ ಮತ್ತು ಮಾನಸಿಕ ಅಸಮತೋಲನ ಹೆಚ್ಚಾಗಿದೆ. ಸಮತೋಲನಭರಿತ ಆರೋಗ್ಯ ನಮ್ಮದಾಗಬೇಕಾದರೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ.

ಭಾರತೀಯ ಪರಂಪರೆಯಲ್ಲಿ ಪತಂಜಲಿಯ ಯೋಗ ಮಾದರಿ ವಿಶ್ವಕ್ಕೆ ಮಾದರಿಯಾಗಿದೆ. ಇದು ಭಾರತೀಯತ್ವದ ಹೆಚ್ಚುಗಾರಿಕೆ ಎಂದರು.

ಗದುಗಿನ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥರು ಹಾಗೂ ಯೋಗ ಸಾಧಕ ರುದ್ರಣ್ಣ ಗುಳಗುಳಿ ಉಪನ್ಯಾಸ ನೀಡಿ, ನಮ್ಮ ದಿನಚರಿ ದಿನನಿತ್ಯ ಯೋಗದಿಂದ ಪ್ರಾರಂಭವಾಗಬೇಕು. ಈ ಯೋಗದಿಂದ ಬೆಳಗಿನಿಂದ ರಾತ್ರಿಯವರೆಗೆ ಚೈತನ್ಯದಿಂದ ಬದುಕಲು ಸಾಧ್ಯವಾಗುತ್ತದೆ.

ನಾವು ಜೀವನದಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ಸಮಯವನ್ನು ಮೀಸಲಾಗಿಡುತ್ತೇವೆ. ಆರೋಗ್ಯದ ವಿಷಯಕ್ಕೆ ಬಂದಾಗ ನಿರ್ಲಕ್ಷ್ಯ ಭಾವ ತೋರುತ್ತೇವೆ. ಒತ್ತಡದ ಬದುಕಿನಿಂದ ಬಿಡುಗಡೆ ಹೊಂದಲು ಯೋಗವೊಂದೇ ಮಾರ್ಗವಾಗಿದೆ ಎಂದರು.

ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಪ್ರಕಾಶ ಕರಿಸೋಮನಗೌಡರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ತೋಂಟದಾರ್ಯ ಮಠದಲ್ಲಿ ಪ್ರತಿ ಸೋಮವಾರ ಜರುಗುವ ಈ ಶಿವಾನುಭವ ಬಹಳ ವೈಶಿಷ್ಟ್ಯತೆಯಿಂದ ಕೂಡಿದೆ. ಶಿವಾನುಭವ ವೇದಿಕೆ ಅನೇಕ ಸಾಹಿತಿಗಳು, ಕಲಾವಿದರು ಸೇರಿದಂತೆ ಸಾಕಷ್ಟು ಜನರಿಗೆ ಪ್ರೋತ್ಸಾಹದಾಯಕವಾಗಿದೆ.

ಈ ವೇದಿಕೆಯ ಮೂಲಕ ಬೆಳೆದವರ ಸಾಲಿನಲ್ಲಿ ನಾನು ಒಬ್ಬ ಎಂದು ಬಹಳ ಹೆಮ್ಮೆಯಿಂದ ಮಾತನಾಡಿದರು.

ಅಂತರಾಷ್ಟ್ರೀಯ ಮಟ್ಟದ ಅಟ್ಯಾಪಾಟ್ಯಾ ಕ್ರೀಡೆಯಲ್ಲಿ ಬಂಗಾರ ಪದಕ ಪಡೆದ ಸಿಂಗಟರಾಯನಕೆರೆ ತಾಂಡಾದ ರಾಹುಲ ಶೇಖರ ಕಾರಭಾರಿ ಅವರನ್ನು ಸನ್ಮಾನಿಸಲಾಯಿತು.

ಒಂದು ವಾರಗಳವರೆಗೆ ನಿರಂತರವಾಗಿ ಶ್ರೀಮಠದಲ್ಲಿ ಯೋಗ ತರಬೇತಿ ನೀಡಿದ ಬಸವ ಯೋಗ ಮಹಾವಿದ್ಯಾಲಯದ ಮುಖ್ಯಸ್ಥರಾದ ಕೆ. ಎಸ್. ಪಲ್ಲೇದ ಅವರು ಯೋಗ ಸಾಧಕರಿಗೆ ಮತ್ತು ಕವಿವಿಗೆ ರ‍್ಯಾಂಕ್ ಬಂದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿವಾನುಭವಕ್ಕೆ ಆಗಮಿಸಿದ್ದ ಮೌನಯೋಗಿ ಡಾ. ವಿಶ್ವನಾಥ ಗುರುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದಿಂದ ಗೌರವಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಮತ್ತು ಧರ್ಮಗ್ರಂಥ ಪಠಣ ಅಪೇಕ್ಷ ಪಂಪಣ್ಣವರ, ವಚನ ಚಿಂತನವನ್ನು ಸಾತ್ವಿಕ ಪಂಪಣ್ಣವರ, ದಾಸೋಹ ಸೇವೆಯನ್ನು ಕೊಟ್ರೇಶ ಸಂಗಮೇಶ ಮೇಲ್ಮುರಿ ಹಾಗೂ ಪರಿವಾರದವರು ನಡೆಸಿದರು.

ಶಿವಾನುಭವದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರಾದ ಶೇಖಣ್ಣ ಕಳಸಾಪೂರಶೆಟ್ರ, ದಾನಯ್ಯ ಗಣಾಚಾರಿ, ಅಂದಾನೆಪ್ಪ ವಿಭೂತಿ, ರತ್ನಕ್ಕ ಪಾಟೀಲ, ಶೇಖಣ್ಣ ಕವಳಿಕಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾನುಭವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *