ಧಾರವಾಡ:
ಮನುಷ್ಯ ಜನ್ಮ ಸಾಮಾನ್ಯವಾಗಿ ಕಲುಷಿತಗೊಂಡಿರುವಂಥದ್ದು. ಅದನ್ನು ಪರಿಶುದ್ದಗೊಳಿಸಬೇಕಾದರೆ ಪರಮಾತ್ಮನ ಸಾತ್ವಿಕ ಸಂಬಂಧ ಹೊಂದಬೇಕಾಗುತ್ತದೆ. ಆ ಸಂಬಂಧ ಪಡೆಯುವ ಮಾರ್ಗವೇ ಇಷ್ಟಲಿಂಗ ಪೂಜೆ ಎಂದು ಮುಂಡಗೋಡ ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಹೇಳಿದರು.

ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಧರ್ಮ ಫಂಡ ಸಂಸ್ಥೆ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಏರ್ಪಡಿಸಿದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಗುರವಾರ ಮಾತನಾಡಿದರು.
ಪೂಜೆಯಲ್ಲಿ ೨೫೦ ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ೧೫೦ ಕ್ಕೂ ಹೆಚ್ಚು ಮಕ್ಕಳು ಇಷ್ಟಲಿಂಗ ಧಾರಣೆ ಮಾಡಿಕೊಂಡರು.
ಇಷ್ಟಲಿಂಗ ಪೂಜೆ ಅನುಭಾವದ ಅತ್ಯಂತಿಕ ಸ್ಥಿತಿಯನ್ನು ನಿರೂಪಿಸುವ ಸಾಧನವಾಗಿದೆ. ಇಷ್ಟಲಿಂಗ ಧ್ಯಾನ ಹಾಗೂ ಪೂಜೆಯನ್ನು ಯಾರಾದರೂ ಮಾಡಬಹುದು. ಇದಕ್ಕೆ ಜಾತಿ, ಮತ, ಪಂಥ, ಭೇಧವಿಲ್ಲ. ತನು ನಿಮ್ಮ ರೂಪನಾದ ಬಳಿಕ ಯಾರನ್ನು ಪೂಜಿಸಲು ಸಾಧ್ಯ, ಮನ ನಿಮ್ಮ ರೂಪಾದ ಬಳಿಕ ಯಾರನ್ನು ಆರಾಧಿಸಲು ಸಾಧ್ಯ, ಪ್ರಾಣ ನಿಮ್ಮದಾದ ಬಳಿಕ ಯಾರನ್ನು ಧ್ಯಾನಿಸಲು ಸಾಧ್ಯ, ತನು,ಮನ,ಪ್ರಾಣ ಅರಿವು ಇವೆಲ್ಲದರಲ್ಲಿ ನೀವೆ ತುಂಬಿಕೊಂಡಿರುವಾಗ ನಿಮ್ಮಿಂದ ಭಿನ್ನರಾಗಿ ನಾನು ಕಾಣುವುದಿಲ್ಲ. ತನು, ಮನ ಭಗವಂತನಿಗೆ ಅರ್ಪಿಸಿ ಪರಿಶುದ್ದ ಹಾಗೂ ಪವಿತ್ರವಾಗಿ ದೇವರಿಗೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು ಎಂದರು.

ದೇವರನ್ನು ಹುಡುಕುತ್ತ ಹೊರಟ ಮನಸ್ಸು ತಾನು ಎಂತೆಂಥ ಮಾನಸಿಕ ತುಮುಲಗಳನ್ನು ದಾಟಬೇಕು, ಅನುಭವಿಸಬೇಕು ಎಂದು ಎಲ್ಲವನ್ನು ಎದುರಿಸಿ ಮಾನಸಿಕ ಸಂಘರ್ಷಗಳನ್ನು ದಾಟಿದಾಗಲೇ ಮಾನವ ಮಹಾಮಾನವನಾಗುತ್ತಾನೆ. ಹೀಗೆ ನಿತ್ಯ ನಮ್ಮ ಜೀವನದಲ್ಲಿ ಬದಲಾವಣೆ ಕಾಣುವ ಹಾಗೂ ಸಾತ್ವಿಕತೆ ಹೊಂದುವ ಮಾರ್ಗದತ್ತ ಸಾಗಲು ಸಹಜ ಶಿವಯೋಗ ಅಥವಾ ಇಷ್ಟಲಿಂಗ ಪೂಜೆ ಅವಶ್ಯಕ. ದೇವನಲ್ಲಿ ಒಲಿದ ಮನಸ್ಸು ಹೊಯ್ದಾಡುವುದಿಲ್ಲ ಹಿಂದೆ ಸರಿಯುವುದಿಲ್ಲ, ನಮ್ಮ ನಂಬಿಕೆಯಲ್ಲಿ ಸ್ಥಿರಗೊಂಡು ನಂಬಿ ಕರೆದರೆ ಓ ಎನ್ನನೇ ಶಿವನು. ಹೀಗೆ ಮನಸ್ಸು ತುಂಬಿ, ನಂಬಿ ದೇವರನ್ನು ಒಲಿಸಿಕೊಂಡ ನಮ್ಮ ಜೀವನ ಪರಮಾನಂದವಾಗುತ್ತದೆ ಎಂದರು.
ಶ್ರೀ ಬಸವೇಶ್ವರ ಧರ್ಮ ಫಂಡ ಸಂಸ್ಥೆ ಪದಾಧಿಕಾರಿಗಳಾದ ಡಾ.ಎಸ್.ಆರ್.ರಾಮನಗೌಡರ, ಕೆ.ಎಂ.ಗೌಡರ, ಆರ್.ವೈ.ಸುಳ್ಳದ, ಬಸವರಾಜ ಸೂರಗೊಂಡ, ಟಿ.ಎಲ್.ಪಾಟೀಲ, ವಿಜೇಂದ್ರ ಪಾಟೀಲ, ಎನ್.ಬಿ.ಗೋಲಣ್ಣವರ, ರವಿಕುಮಾರ ಕಗ್ಗಣ್ಣವರ, ಆರ್.ಡಿ.ಹಿರೇಗೌಡರ, ವೀರಣ್ಣ ಗಟಿಗೆಣ್ಣವರ ಇಷ್ಟಲಿಂಗ ಪ್ರಾತ್ಯಕ್ಷತೆಯಲ್ಲಿ ಉಪಸ್ಥಿತರಿದ್ದರು.