ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಕೇಸ್, ಪೊಲೀಸರಿಂದ ಐದು ಗಂಟೆ ವಿಚಾರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಹರಿಹರ

ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರನ್ನು ಹರಿಹರ ಗ್ರಾಮೀಣ ಪೊಲೀಸರು ಗುರುವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಗುರುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2:30 ರವರೆಗೆ ಸುದೀರ್ಘವಾಗಿ ಪೊಲೀಸರು ಸ್ವಾಮೀಜಿಯವರ ವಿಚಾರಣೆ ನಡೆಸಿದರು.

ದಾವಣಗೆರೆ ಗ್ರಾಮೀಣ ಡಿವೈಎಸ್ಪಿ ಜಿ.ಎಸ್ ಬಸವರಾಜ್, ಗ್ರಾಮೀಣ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಮಹಿಳಾ ಪಿಎಸ್ಸೆ ಮಂಜುಳಾ ಅವರು ಕೇಳಿದ ಸುಮಾರು 50ಕ್ಕೂ ಅಧಿಕ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆಂದು ತಿಳಿದುಬಂದಿದೆ.

ಲೈಂಗಿಕ ಕಿರುಕುಳ ಆರೋಪ

2024ರ ಮಾರ್ಚ್ 20ರಂದು ಮಠದ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶ್ಯಾಬಳ ಗ್ರಾಮದ ರೇಖಾ ನಾಗನಗೌಡ ಮರಿಗೌಡ ಎಂಬವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಮೇ 8ರಂದು ನೀಡಿದ್ದರು.

ಪೀಠದ ಬಳಿಯ ಹನಗವಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಾಗಿ ಸೇರ್ಪಡೆಗೊಂಡು, 2021ರಿಂದ 2024ರ ಅವಧಿಯಲ್ಲಿ ಪೀಠದ ವಿದ್ಯಾರ್ಥಿ ನಿಲಯದ ಬಾಲಕರು ನಿತ್ಯ ಜಳಕ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವಾಮೀಜಿ ವಿದ್ಯಾರ್ಥಿಗಳ ಖಾಸಗಿ ಅಂಗಾಂಗ ಮುಟ್ಟುತ್ತಿದ್ದರೆಂದು ದೂರಿನಲ್ಲಿ ದಾಖಲಾಗಿದೆ.

ವೈದ್ಯಕೀಯ ತಪಾಸಣೆ

ಪೊಲೀಸ್‌ ಠಾಣೆಯಲ್ಲಿ 5 ತಾಸುಗಳ ಕಾಲ ವಿಚಾರಣೆ ಮುಗಿದ ನಂತರ, ಪೊಲೀಸರು ನೀಡಿದ ಸೂಚನೆ ಮೇರೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ವಚನಾನಂದ ಸ್ವಾಮೀಜಿಯನ್ನು ಡಾ. ರಾಘವೇಂದ್ರ ದುರುಗೋಜಿ ಅವರು ವೈದ್ಯಕೀಯ ತಪಾಸಣೆ ನಡೆಸಿದರು.

ನಂತರ ವೈದ್ಯರು ಮಾತನಾಡಿ, ಶ್ರೀಗಳು ದೈಹಿಕವಾಗಿ ಸದೃಢರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅವರ ಉಗುರು, ಕೂದಲು ಸೇರಿದಂತೆ ಬೇಕಾದ ಮಾದರಿ ಸಂಗ್ರಹಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗುವುದು ಎಂದು ಡಾ.ರಾಘವೇಂದ್ರ ಮಾಧ್ಯಮಗಳಿಗೆ ಹೇಳಿದರು.

ಕಾನೂನನ್ನು ಗೌರವಿಸಿದ್ದೇನೆ

ಲೈಂಗಿಕ ಕಿರುಕುಳ ನಡೆಸಿದ್ದೇನೆ ಎಂದು ನನ್ನ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಬುಧವಾರ ಸಂಜೆ ಪೊಲೀಸರು ಪೀಠಕ್ಕೆ ಆಗಮಿಸಿ ಮಾಹಿತಿ ನೀಡಿ ಗುರುವಾರ ವಿಚಾರಣೆಗಾಗಿ ಠಾಣೆಗೆ ಹಾಜರಾಗಬೇಕೆಂದು ತಿಳಿಸಿದ್ದರು. ನಾನು ಕಾನೂನನ್ನು ಗೌರವಿಸಿ ಗುರುವಾರ ವಿಚಾರಣೆಗೆ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದೇನೆ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಭಕ್ತರ ಆಕ್ರೋಶ

ಗುತ್ತೂರು ಗ್ರಾಮೀಣ ಠಾಣೆಗೆ ವಿಚಾರಣೆಗಾಗಿ ಸ್ವಾಮೀಜಿಯವರನ್ನು ಕರೆತಂದಿರುವ ಸುದ್ದಿ ಹರಡುತ್ತಿದ್ದಂತೆ ಠಾಣೆಯ ಎದುರು ಭಕ್ತರು ಶ್ರೀಗಳ ಪರವಾಗಿ ಜಯಘೋಷ ಹಾಕಿ, ಟ್ರಸ್ಟ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಟ್ರಸ್ಟಿಗಳು ನಡೆಸಿರುವ ಷಡ್ಯಂತ್ರಕ್ಕೆ ಇದು ಸಾಕ್ಷಿ. ಸ್ವಾಮೀಜಿಯವರು ನಿರ್ದೋಷಿಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಲೆಕ್ಕ ಕೊಡಿ ಚಳವಳಿ ಅಧ್ಯಕ್ಷ ಎಂ.ಜಿ.ಪರಮೇಶ್ವರಗೌಡ್ರು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
2 Comments
  • ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಗಾದೆ ಮಾತು ಸುಳ್ಳಲ್ಲ , ಸ್ವಾಮೀಜಿಗಳು ಕೆಟ್ಟ ಮತ್ತು ಸ್ವಾಥ೯ ಭಕ್ತರಿಂದ ದೂರವಿದ್ದರೆ ಅವರಿಗೂ ಸಮಾಜಕ್ಕೂ ಗೌರವ.

    • ಈತನಿಗೆ ಬಾರಿ ಅಹಂಕಾರ ಇಂತ ಕಾವಿ ಯಾವ ಮಠ ಕ್ಕೂ ಬೇಡ

Leave a Reply

Your email address will not be published. Required fields are marked *