ನರಗುಂದ:
ಬುದ್ಧ-ಬಸವ-ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಿದ ಪ್ರಾಚಾರ್ಯ, ದಲಿತ ಸಾಹಿತಿ ಅರ್ಜುನ ಗೊಳಸಂಗಿ ಅವರು ವಿದ್ಯಾರ್ಥಿಸ್ನೇಹಿ ಪ್ರಾಧ್ಯಾಪಕರಾಗಿದ್ದರು ಎಂದು ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ. ವಾಯ್. ಎಮ್. ಭಜಂತ್ರಿ ಅವರು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೊದ್ಧೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೮೬ ನೇ ಮಾಸಿಕ ಶಿವಾನುಭವ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಬಡತನವನ್ನು ಹಾಸುಹೊಕ್ಕಾಗಿಸಿಕೊಂಡು ಅರಳಿದ ಪ್ರತಿಭೆಯಾದ ಡಾ. ಅರ್ಜುನ ಗೊಳಸಂಗಿ ಅವರು ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸಾಧನೆ ಯುವಜನಾಂಗಕ್ಕೆ ಸ್ಪೂರ್ತಿಯಾಗಿದೆ. ಜಾನಪದ ಸಂಸ್ಕೃತಿಯ ಆರಾಧಕರಾಗಿ ಜಾನಪದ ತಂಡವನ್ನು ಕಟ್ಟಿ ಬೆಳೆಸಿ ನಾಡಿನ ಉದ್ದಗಲಕ್ಕೂ ಕನ್ನಡ ಸಾಹಿತ್ಯ ಪರಂಪರೆಯನ್ನು ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ನಾಡಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಶ್ರೀಮಠದಲ್ಲಿ ಗಜಲ್ ಸಾಹಿತ್ಯ ಸಮ್ಮೇಳವನ್ನು ಏರ್ಪಡಿಸಿ, ರಾಜ್ಯದ ಎಲ್ಲ ಗಜಲ್ ಕವಿಗಳನ್ನು ಒಂದೆಡೆ ಸೇರಿಸಿ ಸಮಾರಂಭದ ಯಶಸ್ವಿಗೆ ಪಾತ್ರ ವಹಿಸಿದ್ದು ಮಹತ್ತರವಾಗಿದೆ. ದಲಿತ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಆ ಮೂಲಕ ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಗೊಳಸಂಗಿಯವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಗದುಗಿನ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಯಾಯಿಗಳಾದ ಇವರು ಅವರ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಸರಳ ಸಾತ್ವಿಕ ಸ್ವಭಾವದವಾರದ ಡಾ. ಗೊಳಸಂಗಿ ಅವರು ಈ ನಾಡು ಕಂಡ ಶ್ರೇಷ್ಠ ಜಾನಪದ ಚಿಂತಕರು. ಶ್ರೀಮಠದಲ್ಲಿ ನಡೆಯವ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಕನ್ನಡಪರ ಕಾರ್ಯಕ್ರಮಗಳಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಮೂವತ್ತೈದು ವರ್ಷಗಳ ಕಾಲ ಪ್ರಾಧ್ಯಾಪಕ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಬಟ್ಟೆ, ಪುಸ್ತಕ ಹಾಗೂ ಪ್ರಸಾದವನ್ನು ನೀಡಿ ಅವರ ಬದುಕನ್ನು ಹಸನಾಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಸಿಟಿಎಂ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ಡಾ. ಅರ್ಜುನ ಗೊಳಸಂಗಿ ಅವರನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.
ವೇದಿಕೆ ಮೇಲೆ ವಿಶ್ರಾಂತ ಕುಲಸಚಿವ ಡಾ. ಚಂದ್ರಮೌಳಿ ನಾಯ್ಕರ, ನರಗುಂದ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಸ್ ಜಿ ಮಣ್ಣೂರಮಠ, ಎಸ್. ಎಸ್. ಪೂಜಾರ, ಪ್ರಹ್ಲಾದಗೌಡ ಪಾಟೀಲ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಮಂಗಳಾ ಪಾಟೀಲ, ಡಾ.ಸಿ.ಕೆ. ರಾಚನಗೌಡ್ರ, ಪ್ರಾಧ್ಯಾಪಕರಾದ ಡಾ. ಜಗದೀಶ ತಳವಾರ, ಡಾ. ರಾಮು ಎಂ. ಎಸ್. ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
