ಹಡಪದ ಅಪ್ಪಣ್ಣ ಗವಿಯಲ್ಲಿ ಮೂರ್ತಿ ಸ್ಥಾಪಿಸಲು ಸಿಎಂಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದುಅ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಮತ್ತು ಹಡಪದ ಅಪ್ಪಣ್ಣದೇವರ ಮಹಾಸಂಸ್ಥಾನಮಠದ ವತಿಯಿಂದ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಗಿದೆ.

ಈಚೆಗೆ ಬೆಂಗಳೂರಿನಲ್ಲಿ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿಪತ್ರ ಸಲ್ಲಿಸಿತು.

ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ಅದೇ ರೀತಿ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ.

ಆದರೆ, ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಅಲ್ಲಿನ ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

ಇದರಿಂದ ಶಿವಶರಣ ಹಡಪದ ಅಪ್ಪಣ್ಣನವರಿಗೆ ಮತ್ತು ನಮ್ಮ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ಅನ್ಯಾಯವಾಗಿದ್ದು, ನಮ್ಮ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ.

ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಅವರ ಭಕ್ತರಾದ ನಾವು, ನಮ್ಮ ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ.

ಈ ಘಟನೆ ನಮ್ಮ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟುಮಾಡಿದೆ. ಈ ಸಂಬಂಧವಾಗಿ, ಈಗಾಗಲೇ ಸಮಾಜದ ಮುಖಂಡರು, ಭಕ್ತರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಭಟನೆಗಳನ್ನು ಕೂಡ ನಡೆಸಲಾಗಿದೆ. ಅನೇಕ ಮಠಾಧೀಶರು ಹಾಗೂ ನಾಯಕರು ಸಹ ಹಡಪದ ಅಪ್ಪಣ್ಣನವರು, ಮತ್ತು ನಮ್ಮ ಸಮಾಜದ ಪರವಾಗಿ ಹೋರಾಟ ನಡೆಸಿದರೂ, ಇನ್ನೂ ನ್ಯಾಯ ದೊರಕಿಲ್ಲ.

ಆದುದರಿಂದ, ತಾವುಗಳು ದಯವಿಟ್ಟು ಈ ಅಕ್ರಮ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಂಡು, ಯಥಾಸ್ಥಿತಿಗೆ ತರಬೇಕು.

ಹಾಗೆಯೇ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಸ್ತ ಸಮಾಜದ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಬಸರಕೋಡ, ರಾಜ್ಯಾಧ್ಯಕ್ಷ ದೇವಪ್ಪ ಹಡಪದ, ಉಪಾಧ್ಯಕ್ಷ ಸುರೇಶ ಹಡಪದ, ಪದಾಧಿಕಾರಿಗಳಾದ ಶಶಿಕುಮಾರ ನೀಲಕಂಠಪ್ಪ, ಮಲ್ಲಿಕಾರ್ಜುನ ಹಡಪದ, ನಾಗರಾಜ ಕುರಗೋಡ, ಶಿವಾನಂದ ಹಡಪದ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸರ್ಕಾರದಿಂದ ಜುಲೈ 29ರಂದು ನಡೆಯುವ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ರಾಜ್ಯಮಟ್ಟದ ಜಯಂತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಉಪಸ್ಥಿತರಿರಲು ಮನವಿ ಸಲ್ಲಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *