ಬಸವ, ದಲಿತ, ಕನ್ನಡ, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
ಗದಗ
ಬಸವದ್ರೋಹಿ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ಟ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಸರ್ಕಾರ ಜರುಗಿಸಬೇಕೆಂದು ಬಸವ, ದಲಿತ, ಕನ್ನಡ, ಪ್ರಗತಿಪರ ಸಂಘಟನೆಗಳು ಮಹಾತ್ಮ ಗಾಂಧಿ ವೃತ್ತದಲ್ಲಿ
ಬೃಹತ್ ಪ್ರತಿಭಟನಾ ಧರಣಿ ನಡೆಸಿದವು.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಬಸವ ಮಂಟಪ ಕೃತಿಯ ಮೂಲಕ ಅವಹೇಳನ, ಅಪಮಾನ ಮಾಡಿದ ಸ್ವಯಂಘೋಷಿತ ಲೇಖಕ ರವಿ ಹಂಜ್ ಹಾಗೂ ಅವನಿಗೆ ಪ್ರೇರಕರಾದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ವೃತ್ತ ಬಂದ್ ಮಾಡಿ, ಬಸವಣ್ಣನವರ ವಿರುದ್ಧ ಬರೆದ ರವಿ ಹಂಜ್ ಮತ್ತು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಆಕ್ರೋಶದ ಘೋಷಣೆ ಕೂಗಿದರು.
ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಪ್ರತಿಭಟನೆಯಲ್ಲಿ ಮಾತನಾಡಿ, “ಬಸವಣ್ಣನವರ ಬಗ್ಗೆ ಅವಹೇಳನ ಮಾಡಿ ಬರೆದ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು. ಈ ಶಿಕ್ಷೆಯಿಂದ ಭವಿಷ್ಯದಲ್ಲಿ ಯಾರು ಈ ರೀತಿ ಮಾಡಲು ಮುಂದೆ ಬರಬಾರದು” ಎಂದು ಆಗ್ರಹಿಸಿದರು.

ಹೋರಾಟಗಾರ, ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, “ಹಂಜ್ ಅಲ್ಲ ಹಂಜಗಿಮಠನೊಳಗೆ ವಿಷ, ಧ್ವೇಷ, ಅಹಂ ತುಂಬಿಕೊಂಡಾಗ ಬಸವಣ್ಣನವರ ವಚನಗಳಲ್ಲಿ ಸಮಾನತೆಯನ್ನು ಹೇಗೆ ಒಪ್ಪಕೊಳ್ಳಲು ಸಾಧ್ಯ. ನಾಲ್ಕೈದು ವರ್ಷಗಳಿಂದ ದ್ವೇಷದಲ್ಲಿ ಬರೆಯುತ್ತಿದ್ದಾನೆ. ಅಂತವನಿಗೆ ಸನ್ಮಾನ ಮಾಡುವ ಪೀಠಗಳ ಜಾಡನ್ನು ಅರಿಯಬೇಕಿದೆ. ರವಿ ಹಂಜ್ ಹಾಗೂ ಪ್ರಕಟಿಸಿದ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟ ಅವರನ್ನು ಶಿಕ್ಷಿಸಿದರೇ ಸಾಲದು, ಇವರ ಹಿಂದಿರುವ ಎಲ್ಲ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಅದಕ್ಕಾಗಿ ಎಸ್ಐಟಿ ರಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಹಲವಾರು ಮುಖಂಡರು, “ರವಿ ಹಂಜ್ ಮಹಾಶಯ ಬಸವಣ್ಣನವರು ಬಂಡಾರವನ್ನು ಕದ್ದರು ಎಂಬ ಆರೋಪವನ್ನು ಹೊರಿಸುತ್ತಾನೆ. ಇದಕ್ಕಿಂತ ಹೇಯ ದೃಷ್ಟಿಕೋನ ಯಾವುದು ಇಲ್ಲ.
ರಾಜ ಭಂಡಾರಕ್ಕೂ, ರಾಜ್ಯ ಭಂಡಾರಕ್ಕೂ ವ್ಯತ್ಯಾಸ ಗೊತ್ತಿರದ ಮಹಾಶಯ ಅವನು. ರಾಜ್ಯ ಭಂಡಾರ ಇರುವುದೇ ಪ್ರಜೆಗಳ ಹಿತಕ್ಕಾಗಿ. ಬಸವಣ್ಣ ಉಪಯೋಗಿಸಿದ್ದು, ಕಲ್ಯಾಣದ ರಾಜ್ಯ ಭಂಡಾರ ಇರಬಹುದು, ಬಿಜ್ಜಳನಿಗೆ ಸಂಬಂಧಿಸಿದ್ದು ಅಲ್ಲ. ಕಲ್ಯಾಣ ರಾಜ್ಯದ ಪ್ರಜೆಗಳು ಶ್ರಮಿಸಿದ ಹಣ ಅದು. ಅದನ್ನ ಜನರಿಗಾಗಿ ಉಪಯೊಗಿಸುವುದು ಬಸವಣ್ಣನವರ ಕಾಯಕವಾಗಿತ್ತು.

ಇದನ್ನು ಅಪಪ್ರಚಾರಗೊಳಿಸುವ ದುಷ್ಟರು ಇವರು. ರಾಜಕೀಯ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ಒಳ-ಹೊರ ವೈರಿಗಳು ಪ್ರಜಾ ಧರ್ಮವನ್ನು, ಬಸವಣ್ಣ, ಬುದ್ಧ ಮಾಡಿದ ಕಾರ್ಯವನ್ನು ಹತ್ತಿಕ್ಕುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬೇಲೂರು ಮಠದ ಬಸವಪ್ರಭು ಮಹಾಂತ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಸ್.ಎನ್. ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಕೆ.ಎಸ್. ಚಟ್ಟಿ, ಎಸ್.ಎಸ್. ಪಟ್ಟಣಶೆಟ್ಟರ, ವಿವೇಕಾನಂದಗೌಡ ಪಾಟೀಲ, ಗಿರಿಜಕ್ಕ ಧರ್ಮರಡ್ಡಿ, ಎ. ವೈ. ನವಲಗುಂದ, ಎಸ್.ಎಸ್. ಹರ್ಲಾಪುರ, ಪ್ರಕಾಶ ಅಸುಂಡಿ, ಮುತ್ತು ಬಿಳೆಯಲಿ, ಶರೀಫ ಬಿಳೆಯಲಿ, ಚಂದ್ರಶೇಖರ ವಸ್ತ್ರದ, ಗೌರಕ್ಕ ಬಡಿಗಣ್ಣವರ, ಶಿವನಗೌಡ ಗೌಡರ, ಉಮೇಶ ಪುರದ, ಕೆ.ಎ. ಬಳಿಗೇರ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ, ಲಿಂಗಾಯತ ಪ್ರಗತಿಶೀಲ ಸಂಘ, ದಲಿತ, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

