ಪೂಜ್ಯ ಶಿವಾನಂದ ಸ್ವಾಮೀಜಿ ಅವರ ಅಮೃತ ಮಹೋತ್ಸವ
ಹುಲಸೂರ
ಸಂಸಾರದ ಬಂಧನ, ಬದುಕಿನ ಜಂಜಾಟ ಹಾಗೂ ಸಮಾಜದಲ್ಲಿನ ರಾಗದ್ವೇಷಗಳ ನಡುವೆ ಮನುಷ್ಯನಿಗೆ ಸನ್ಮಾರ್ಗ ತೋರಿಸುವ ದಾರಿದೀಪಗಳಾಗಿ ಮಠಗಳು ಕಾರ್ಯನಿರ್ವಹಿಸುತ್ತಿವೆ.
ಮಠಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರಗಳಾಗಿರದೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ದಾಸೋಹ ನೀಡುತ್ತಿವೆ. ಉತ್ತಮ ನಾಗರಿಕರನ್ನು ರೂಪಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿವೆ ಎಂದು ಮೈಸೂರು ಸುತ್ತೂರು ವೀರಸಿಂಹಾಸನ ಸಂಸ್ಥಾನಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗುರುಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ನಿಮಿತ್ತ ಭಾನುವಾರ ಅಲ್ಲಮಪ್ರಭು ಶೂನ್ಯಪೀಠ ಅನುಭವ ಮಂಟಪದ ಮಹಾದ್ವಾರಗಳನ್ನು ಉದ್ಘಾಟಿಸಿ, ಡಾ. ಸೋಮನಾಥ ಯಾಳವಾರ ರಚಿಸಿರುವ ‘ಬಸವನ ಬೆಳಕೇ ಎಲ್ಲಾಡಿ ಬಂದೆ’ ತ್ರಿಪದಿ ಕಾವ್ಯ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಕೂಡಲಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಅವಿನಾಭಾವ ಸಂಬಂಧವಿದೆ. ಹುಲಸೂರಿನಲ್ಲಿ ಅಲ್ಲಮಪ್ರಭುದೇವರು ಅನುಷ್ಠಾನ ಮಾಡಿದ ನೆಲೆ ಇರುವುದರಿಂದ ಈ ಭಾಗವು ಶರಣರ ಸಂಚಾರದಿಂದ ಪುನೀತವಾಗಿದೆ. ಶರಣರ ವಿಚಾರಧಾರೆ ಹಾಗೂ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಕ್ಷಿಣ ಭಾರತ ಕಂಡ ಶ್ರೇಷ್ಠ ಮಠಾಧೀಶರಾಗಿದ್ದು, ಅಪಾರ ಭಕ್ತಸಮೂಹ ಹೊಂದಿದ್ದಾರೆ. ಇಂತಹ ಪೂಜ್ಯರು ನಮ್ಮ ಭಾಗಕ್ಕೆ ಆಗಮಿಸಿರುವುದು ಸೌಭಾಗ್ಯ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಅಭಾವದಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಬೀದರ, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ಜನರ ನೆರವಿಗೆ ರಾಜ್ಯ ಸರ್ಕಾರ ಮುಂದಾಗುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಹಕರಿಸಬೇಕು ಎಂದು ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಮನವಿ ಮಾಡಿದರು.
ಗುರುಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಪೂಜ್ಯ ಶಿವಾನಂದ ಸ್ವಾಮೀಜಿ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶಿಕ್ಷಣ ದಾಸೋಹಿಗಳು ಹಾಗೂ ಮಾತೃಹೃದಯದ ಪೂಜ್ಯರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಅವರು ತಮ್ಮ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಠಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಪ್ರೇಮ ಗೌಡಗಾಂವೆ ಸಂಗೀತ ಸೇವೆ ಸಲ್ಲಿಸಿದರು. ನವಲಿಂಗ ಪಾಟೀಲ ತಬಲಾ ವಾದನ ನಡೆಸಿಕೊಟ್ಟರು.

ವಿಭಾಗೀಯ ಅಧಿಕಾರಿ ಸಾವಿತ್ರಿ ಸಲಗರ, ಉದ್ಯಮಿ ಚನ್ನಬಸವ ಬಳತೆ, ಮುದಗಲ್ಲ ಮಠದ ಮಹಾಂತಸ್ವಾಮೀಜಿ, ಸಾಯಗಾಂವ ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಪಾಟೀಲ, ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ರಾಜಕುಮಾರ ತೊಂಡಾರೆ, ಜಾನಪದ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಿವರಾಜ ಖಫಲೆ, ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಬಸವಕೇಂದ್ರದ ತಾಲ್ಲೂಕು ಅಧ್ಯಕ್ಷ ಆಕಾಶ ಖಂಡಾಳೆ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಶ್ರೀದೇವಿ ನಿಡೋದೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಧರ್ಮೇಂದ್ರ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ರಣಜಿತ್ ಗಾಯಕ್ವಾಡ, ರಾಜಕುಮಾರ ನಿಡೋದೆ, ಶಶಿಕಲಾ ಪಟ್ನೆ, ಓಂಕಾರ ಪಟ್ನೆ, ಅರವಿಂದ ಹರಿಪಲೆ, ನಾಗೇಶ ಮೇತ್ರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.
ಕೃಪೆ: ವಾರ್ತಾ ಭಾರತಿ
