ದಾವಣಗೆರೆ
‘ಬಸವಾದಿ ಶರಣರ ವಚನಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಸಾಮೂಹಿಕ ವಚನ ಗಾಯನ ಕಾರ್ಯಕ್ರಮವನ್ನು ಸೆ.30ರಂದು ಸಂಜೆ 6ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಲಿಂಗರಾಜ್ ತಿಳಿಸಿದರು.
‘ವಚನ ನಾದಲೋಕ ಸಂಚಾಲನಾ ಸಮಿತಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 12 ಶಾಲೆಗಳ 2,500 ವಿದ್ಯಾರ್ಥಿಗಳು ಹಾಗೂ ಗಾಯಕರು ಸೇರಿದಂತೆ 500 ಜನರು ಏಕಕಾಲಕ್ಕೆ ವಚನಗಳನ್ನು ಪ್ರಸ್ತುತಪಡಿಸಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘3,000 ಜನರು ಎರಡು ದಿನ ತಾಲೀಮು ನಡೆಸಲಿದ್ದಾರೆ. ಬಸವ ತತ್ವಗಳೊಂದಿಗೆ ಸಂಗೀತ ಸಮನ್ವಯಗೊಂಡು ಅನನ್ಯ ಅನುಭವ ಉಣಬಡಿಸಲಿದ್ದಾರೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರಿನ ಬಸವ ಮರುಳಸಿದ್ಧ ಸ್ವಾಮೀಜಿ, ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು.
ಸಮಿತಿಯ ಪದಾಧಿಕಾರಿಗಳಾದ ಪ್ರೊ.ಕೆ.ಎಸ್. ಈಶ್ವರಪ್ಪ, ಎಂ. ಶಿವಕುಮಾರ್, ಯಶಾ ದಿನೇಶ್, ನಿರ್ಮಲಾ, ಶಶಿಧರ ಬಸಾಪುರ, ವಿನೋದ ಅಜಗಣ್ಣನವರ್ ಹಾಜರಿದ್ದರು.
ವಚನ ನಾದ ಲೋಕ ಗಾಯನ ಸಾರಥ್ಯ
ಯಶಾ ದಿನೇಶ, ಚೇತನಕುಮಾರ ಜೆ., ನಾಗರಾಜ ಎಚ್. ಎಸ್., ಶ್ರೀಧರ ಹೆಚ್.ಎಂ., ಮಾನಸ ವಿ., ಸಂಗೀತಾ ರಾಘವೇಂದ್ರ, ಸಹನಾ ಮಂಜುನಾಥ, ರೇವಣಸಿದ್ದಪ್ಪ ಎಂ.ಕೆ., ಖಾದರ್ ಪಿಂಜಾರ್ ಸಾಹೇಬ, ಹೆಗ್ಗೆರೆ ರಂಗಪ್ಪ, ಮಲ್ಲಿಕಾರ್ಜುನ ಶಾನಭೋಗ, ಚಿನ್ಮಯಿ ಕುಮಾರಿ.
