‘ಇಷ್ಟಲಿಂಗ ಜಾತಿಯ ಕುರುಹು ಅಲ್ಲ, ಪರಮಾತ್ಮನ ಸೇರುವ ಮಾರ್ಗ’

ದೇವರ ಹುಡುಕಾಟದಲ್ಲಿ ನಮ್ಮೊಳಗಿನ ಮಹಾಘನವರಿಯದೆ ಕೆಟ್ಟು ಹೋಗುತ್ತಿದ್ದೇವೆ

ಸಿಂಧನೂರು :

ದೇವರು ಎಲ್ಲಾ ಧರ್ಮದವರಿಗೂ ಒಬ್ಬನೇ ಆಗಿದ್ದಾನೆ. ಜಾತಿಗೊಂದು, ಧರ್ಮಕ್ಕೊಂದು ದೇವರಿಲ್ಲ. ಇಡೀ ಭೂಮಂಡಲಕ್ಕೆ, ನಭೋ ಮಂಡಲಕ್ಕೆ ಒಬ್ಬನೇ ದೇವರು.

ನಾವು ಅನಾವಶ್ಯಕವಾಗಿ ದೇವರ ಹುಡುಕಾಟದಲ್ಲಿ ಕಾಲ ಕಳೆಯುತ್ತಿದ್ದೇವೆ. ನಮ್ಮೊಳಗಿನ ಮಹಾಘನವರಿಯದೆ ಕೆಟ್ಟು ಹೋಗುತ್ತಿದ್ದೇವೆ. ನಮ್ಮ ಅಂತರಂಗದ ಅರಿವೇ ನಿಜವಾದ ದೇವರು.

ಅರಿವಿನ ಕುರುವೆ ಇಷ್ಟಲಿಂಗ. ಇಷ್ಟಲಿಂಗ ಜಾತಿಯ ಸಂಕೇತವಲ್ಲ. ಪರಮಾತ್ಮನ ಕೂಡುವುದಕ್ಕೆ ಇರುವ ಏಕೈಕ ಮಾರ್ಗವೆಂದು ಅನುಭಾವಿ ಪಿ. ‌ರುದ್ರಪ್ಪ ಕುರುಕುಂದ ಹೇಳಿದರು.

ಮೇದಾರ ಪಾಮಯ್ಯ ಹಾಗೂ ಹುಲುಗಪ್ಪ ಅವರ ಮನೆಯಲ್ಲಿ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮ ಹಾಗೂ ಗಿರೀಶ ಅವರ 28 ನೇ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮರ್ತ್ಯಲೋಕ ಶಿವಲೋಕ ಎರಡಕ್ಕೆ ನಿಚ್ಚಣಿಕೆಯಾದನಯ್ಯ ಬಸವಯ್ಯನು ಎಂದು ವಚನಕಾರರು ಹೇಳುತ್ತಾರೆ.  ಮರ್ತ್ಯಲೋಕದ ಮಾನವರಿಗೂ ಶಿವಲೋಕದ ದೇವನಿಗೂ ಇಷ್ಟಲಿಂಗದ ಮೂಲಕ ಸಂಬಂಧ ಉಂಟು ಮಾಡಿದ ಎಂದು ಇದರ ಅರ್ಥ ಎಂದರು.

ಬ್ರಹ್ಮಾಂಡ, ಪಿಂಡಾಂಡಕ್ಕೂ ನೇರ ಸಂಬಂಧವಿದೆ. ಅವೆರಡನ್ನು ಕೂಡಿಸುವ ಮಾರ್ಗ ಇಷ್ಟಲಿಂಗ ಯೋಗ. ಸೃಷ್ಟಿಕರ್ತನ ಆರಾಧನೆ ಮಂದಿರ, ಮಸೀದಿಗಳಲ್ಲಿ ಆಗಬಾರದು, ಅಂತರಂಗದಲ್ಲಿ ನಡೆಯಬೇಕು. ಅದಕ್ಕೆ ಇರುವ ಏಕೈಕ ಮಾರ್ಗ ಶಿವಯೋಗ. ಇದು ಬ್ರಹ್ಮರಂದ್ರಕ್ಕೂ ಶಿರೋಮಧ್ಯಕ್ಕೂ ಸಂಬಂಧ ಕಲ್ಪಿಸುತ್ತದೆ ಎಂದು ರುದ್ರಪ್ಪ ನುಡಿದರು.

ಶಿಕ್ಷಕರಾದ ಹನುಮಂತಪ್ಪ ಅವರು ಮಾತನಾಡುತ್ತಾ, ನಮ್ಮ ದುಡಿಮೆಯ ಜೊತೆಗೆ ದಾಸೋಹದ ಪ್ರಜ್ಞೆ ಇರಬೇಕು. ಭಿಕ್ಷುಕನೆನ್ನದಿರು ತಂದೆಯನ್ನು, ಬಿಕ್ಷುಕಿ ಎನ್ನದಿರು ತಾಯಿಯನ್ನು ಎಂದು ವಚನಕಾರರು ಹೇಳಿದ್ದಾರೆ. ಅಂದರೆ ಭಿಕ್ಷೆ ಬೇಡಲು ಬಂದಿರುವ ದುರ್ಬಲರನ್ನು ತಂದೆ-ತಾಯಿಯಂತೆ ಕಾಣಬೇಕು ಎಂದು ಅರ್ಥ ಎಂದರು.

ಗಿರೀಶ್ ಅವರ 28ನೆಯ ಹುಟ್ಟು ಹಬ್ಬದ ನೆಪದಲ್ಲಿ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಇದು ಶರಣರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇಂತಹ ಕಾರ್ಯಕ್ರಮಗಳು ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಆಗಾಗ ಜರುಗುತ್ತಿರಬೇಕು.

ಬಸವತತ್ವವೆಂದರೆ ಅದು ಮಹಾಬೆಳಕು. ಕಳೆದ 900 ವರ್ಷಗಳಿಂದ ಬೆಳಗುತ್ತಲೇ ಇದೆ. ಮುಂದೆಯೂ ಬೆಳಗುತ್ತದೆ. ಅದನ್ನು ಯಾವ ದುಷ್ಟಶಕ್ತಿಗಳು ನಂದಿಸಲು ಸಾಧ್ಯವಿಲ್ಲ ಎಂದು ತಮ್ಮ ಅನುಭಾವವನ್ನು ಹಂಚಿಕೊಂಡರು.

ಬಸವ ಕೇಂದ್ರದ ಅಧ್ಯಕ್ಷರಾದ ಕರೇಗೌಡ ಪೊಲೀಸಪಾಟೀಲ ಅವರು ಮಾತನಾಡುತ್ತಾ, ದೇವರು ಕಲ್ಲು, ಮಣ್ಣು, ಕಟ್ಟಿಗೆಗಳಲ್ಲಿ ಇಲ್ಲ. ಆತ ನಮ್ಮ ಅಂತರಂಗದಲ್ಲಿ ಇದ್ದಾನೆ. ದೇವರ ಹೆಸರಿನಲ್ಲಿ ಹಾಗೂ ಆಚರಣೆಯ ಹೆಸರಿನಲ್ಲಿ ವ್ಯವಹಾರ ನಡೆಯುತ್ತಿರುವುದು ದುರ್ದೈವವಾಗಿದೆ. ಪಂಚಭೂತಗಳು ದೇವರಲ್ಲ ಅವು ದೇವರ ಕೊಡುಗೆಗಳು. ದೇವರು ಆಲೋಚನೆಗೆ ನಿಲುಕದ ಮಹಾನ್ ಚೇತನಶಕ್ತಿ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರ್ಲಿ ಅವರು ಮಾತನಾಡಿದರು. ಸಾಮೂಹಿಕ ವಚನ ಪ್ರಾರ್ಥನೆಯನ್ನು ಸಾವಿತ್ರಮ್ಮ ಬಾದರ್ಲಿ ಅವರು ನಡೆಸಿಕೊಟ್ಟರು. ಗಿರೀಶ ಅವರಿಗೆ ಶರಣತತ್ವದ ಪ್ರಕಾರ ಪುಷ್ಪವೃಷ್ಠಿ ಮಾಡುವ ಮೂಲಕ ಅವರ 28 ನೆಯ ಹುಟ್ಟುಹಬ್ಬಕ್ಕೆ ಸೇರಿದವರೆಲ್ಲರೂ ಶುಭಹಾರೈಸಿದರು.

ಚಂದ್ರೇಗೌಡ ಹರಟನೂರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಹೊಗರನಾಳ, ಸಿದ್ದಲಿಂಗಪ್ಪಗೌಡ ಕೋಳಬಾಳ, ಶಂಕರಗೌಡ ವಿರುಪಾಪುರ, ಚಾಂದ್ ಪಾಷಾ ಹಾಗೂ ಅನೇಕ ಶರಣ ಬಂಧುಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *