ಜಾಗತಿಕ ಶಾಂತಿ, ಸಹಬಾಳ್ವೆಗೆ ಬಸವತತ್ವವೇ ಪೂರಕ :  ಸಾಹಿತಿ ರವಿ ಕಂಗಳ

ಗುಳೇದಗುಡ್ಡ:

ಮನುಷ್ಯ ಜಾತಿ, ಭಾಷೆ, ಪ್ರದೇಶ ಇತ್ಯಾದಿಗಳಿಂದ ಭಿನ್ನವಾಗಿ ಪರಸ್ಪರ ವೈರಿಗಳಾಗಿ ಬದುಕುತ್ತಿರುವ ಇಂದಿನ ಜಗತ್ತಿನಲ್ಲಿ ಶಾಂತಿ ಸಹಬಾಳ್ವೆ ನೆಲೆಸಿ, ಹಿಂಸೆ, ಕ್ರೌರ್ಯದ ಸಂಕೇತವಾಗಿ ಯುದ್ಧದ ಮನೋಭಾವ ತೊಡೆದು ಹಾಕಲು ಬಸವ ತತ್ವವೇ ಪೂರಕವಾಗಿದೆ.

ಸುಮಾರು 900 ವರ್ಷಗಳ ಹಿಂದೆಯೇ ವ್ಯಕ್ತಿವ್ಯಕ್ತಿಗಳ ಮಧ್ಯದಲ್ಲಿ ಅಸಮಾನತೆಯನ್ನು ತೊಡೆದು ಹಾಕಿ ಸಮಸಮಾಜದ ಪರಿಕಲ್ಪನೆಯನ್ನು ತಂದುಕೊಟ್ಟು ಜನರ ಮಧ್ಯದಲ್ಲಿನ ಭಿನ್ನತೆಯನ್ನು ತೊಡೆದುಹಾಕಿ, ಏಕತ್ವದ ಕಡೆಗೆ ಎಲ್ಲರನ್ನೂ ಕರೆದುಕೊಂಡು ಹೋದವರು ಲಿಂಗಾಯತ ಧರ್ಮಸ್ಥಾಪಕ ಗುರು ಬಸವಣ್ಣನವರು ಎಂದು ಚಿಂತಕ, ಸಾಹಿತಿ ರವಿ ಕಂಗಳ ಅವರು ಹೇಳಿದರು.

ಬಸವ ಕೇಂದ್ರದ ವತಿಯಿಂದ ಶರಣೆ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಸವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತಿದ್ದರು.

ನೂರಾರು ವರ್ಷಗಳ ಹಿಂದೆಯೇ  ಕೆಳವರ್ಗದವರಿಗೆ, ಮಹಿಳೆಯರಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಇಂದೂ ನಾವು  ಉಳಿಸಿಕೊಳ್ಳಲಾಗುತ್ತಿಲ್ಲ. ಅಂಧಶ್ರದ್ದೆಯಿಂದ ಮೂಢಾಚರಣೆಗಳಿಂದ ನಮಗೆ ಇನ್ನೂ ಹೊರಬರಲಾಗುತ್ತಿಲ್ಲ. ಇಂದು ನಾವು ಬಸವ ತತ್ವಗಳನ್ನು ಶರಣರ ವಚನಗಳ ಮೂಲಕವೇ ಬಿತ್ತಬೇಕು.

ಅದೇ ಕಾಲಕ್ಕೆ ಇತ್ತೀಚಿಗೆ ವಚನ ಸಾಹಿತ್ಯದ ಮೇಲೆ ಆಗುತ್ತಿರುವ ಸಾಂಸ್ಕೃತಿಕ ಹಾಗೂ ಬೌದ್ಧಿಕ ದಬ್ಬಾಳಿಕೆಯನ್ನು ವಿರೋಧಿಸಬೇಕು. ಮಂಗನಂತಿರುವ ಮನಸ್ಸನ್ನು ಒಂದೆಡೆ ನಿಲ್ಲಿಸಿ ಮಹಾಲಿಂಗವಾಗುವ ಇಷ್ಟಲಿಂಗಧಾರಿಗಳಾಗಿ  ಪಂಚಾಚಾರ, ಅಷ್ಟಾವರಣ ಹಾಗೂ ಷಟಸ್ಥಲ ಮಾರ್ಗದ ಮೂಲಕ ಸಾಗಬೇಕು. ಕಾಯಕ ದಾಸೋಹಗಳು ನಮ್ಮ ಮೂಲ ಮಂತ್ರವಾಗಬೇಕು ಎಂದು ಕಂಗಳ ಅವರು ಆಶಿಸಿದರು.

ಸಾನಿಧ್ಯ ವಹಿಸಿದ್ದ ಸ್ಥಳೀಯ ಅಕ್ಕಮಹಾದೇವಿ ಮಂದಿರದ ಮಾತೋಶ್ರೀ ಶರಣಮ್ಮ ಅವರು ಅನುಭಾವ ನೀಡುತ್ತ, ನುಡಿಗಿಂತ ನಡೆ ಶುದ್ಧವಾಗಬೇಕು. ಶಿವನೇ ಬಸವ ಬಸವಾ ಶಿವನೇ ಎಂಬುದು ನಮ್ಮ ದೈನಂದಿನ ಮಂತ್ರವಾಗಬೇಕು. ಮಹಿಳೆಯರ ದಾಸ್ಯತ್ವವನ್ನು ಕಳೆದು ˌಅವರ ಸೂತಕ ಕಳೆದು ಮಹಾದೇವಿಯರನ್ನಾಗಿಸಿದವರು ಅಣ್ಣ ಬಸವಣ್ಣ. ಎಂದಿಗೂ ಅವರು ಸ್ತ್ರೀಕುಲಕ್ಕೆ ಅಣ್ಣನಾಗಿ ರಕ್ಷಕರಾಗಿಯೂ ಇದ್ದಾರೆ ಎಂದು ಅಭಿಪ್ರಾಯಪಟ್ಟರು.              

ಕಾರ್ಯಕ್ರಮ ಬೆಳಗಿನ ಏಳು ಗಂಟೆಗೆ ಮುರುಗೇಶ ಶೇಖಾ ಅವರು ನಡೆಸಿಕೊಟ್ಟ ಸಹಜ ಶಿವಯೋಗದೊಂದಿಗೆ ಪ್ರಾರಂಭವಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ತಾಯಿಯವರು ಪ್ರಾತ್ಯಕ್ಷಿಕೆಗೆ ಸಹಕರಿಸಿದರು. ಬಸವ ಕೇಂದ್ರದವರು ಆಯೋಜಿಸಿದ ಸಹಜ ಶಿವಯೋಗದಲ್ಲಿ ಅನೇಕರು ಪಾಲ್ಗೊಂಡಿದ್ದರು. ನಂತರ ಶ್ರೀ ಬಸವ ಸ್ಮರಣೋತ್ಸವ ಕಾರ್ಯಕ್ರಮವು ಸಭಾ ಕಾರ್ಯಕ್ರಮವಾಗಿ ಮಾರ್ಪಟ್ಟಿತು.

ಕಾರ್ಯಕ್ರಮದ ಪೂರ್ವ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನವಾಗಿ ˌಷಟಸ್ಥಲ ಧ್ವಜಾರೋಹಣವನ್ನು ಗೌರವಾಧ್ಯಕ್ಷ ಹುಚ್ಚಪ್ಪ ಹುಳಿಪಲ್ಲೇದ ಮಾಡಿದರು. ಬನ್ನಿರೆಲ್ಲ ಹಾರಿಸೋಣ ಬಸವ ಧರ್ಮ ಬಾವುಟ ಎಂಬ ಧ್ವಜ ಗೀತೆ ಅನುರಣಿಸಿತು.

ಸಿದ್ದಲಿಂಗಪ್ಪ ಬರಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡುತ್ತ, 1996ರಲ್ಲಿಯೇ ಸ್ಥಾಪಿತವಾದ ಬಸವ ಕೇಂದ್ರ ಅನೂಚಾನವಾಗಿ ಸಾಪ್ತಾಹಿಕ ಮನೆಯಲ್ಲಿ ಮಹಾಮನೆ ಹೆಸರಿನಲ್ಲಿ ನಡೆಸಿಕೊಂಡು ಬಂದದ್ದುˌˌ ಕರೋನ ಸಂದರ್ಭದಲ್ಲಿಯೂ ಆನ್ಲೈನ್ ಮೂಲಕ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದನ್ನು ಹಾಗೂ ಅಂದಿನಿಂದ ಇಂದಿನವರೆಗೆ ಎಚ್.ಎಸ್. ಹುಳಿಪಲ್ಲೇದ, ಮುರುಗೇಶ ಶೇಖಾ ಹಾಗೂ ಪುತ್ರಪ್ಪ ಬೀಳಗಿ ಅವರ ಸೇವೆಯನ್ನು ನೆನಪಿಸಿಕೊಂಡರು.

ಪ್ರೊ ಬಸಲಿಂಗಯ್ಯಾ ಕಂಬಾಳಿಮಠ ಶರಣು ಸಮರ್ಪಣೆ ಮಾಡಿದರು. ವೇದಿಕೆ ಮೇಲೆ ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಗೀತಾ ತಿಪ್ಪಾ ಇದ್ದರು.

ಪ್ರಾರ್ಥನೆ ವಚನ ಗಾಯನವನ್ನು ಜಯಶ್ರೀ ಬರಗುಂಡಿ, ಚೆನ್ನಮ್ಮ ಜವಳಿ, ಸೌಮ್ಯ ಘಟ್ಟದ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿ ಮೊದಲಾದವರು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಸುರೇಶ್ ತಿಪ್ಪಾ ಅವರು ನಿರೂಪಿಸಿದರು. ಅನೇಕ ಅನುಭಾವಿಗಳು, ಶರಣರು, ಸಾಹಿತಿಗಳು, ಪತ್ರಕರ್ತರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *