ನಾನು ಆರ್‌ಸಿಬಿ ಅಥವಾ ಸಿಎಸ್‌ಕೆ ಫ್ಯಾನ್ ಅಲ್ಲ, ನಾನು ಬಸವಣ್ಣನವರ ಫ್ಯಾನ್: ಸಾಗರ್ ದೇವಪ್ಪ
ಬೆಂಗಳೂರು
ನಗರದ ಜೈನ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬರು ಪದವಿ ಸ್ವೀಕರಿಸುವ ಸಮಯದಲ್ಲಿ ವಿಶ್ವಗುರು ಬಸವಣ್ಣನವರ ಬಾವುಟ ಹಾರಿಸುವ ವಿಡಿಯೋ ವೈರಲ್ ಆಗಿದೆ.
ಇವರು ಸಾಗರ್ ದೇವಪ್ಪ. ತಮ್ಮ ಎಂಎಸ್ಸಿ ಪದವಿಯನ್ನು ಸ್ವೀಕರಿಸಲು ವೇದಿಕೆ ಮೇಲೆ ಹೋದಾಗ ಅಲ್ಲಿ ಬಟ್ಟೆಯೊಳಗಿಂದ ಬಾವುಟ ತೆಗೆದು ಎಲ್ಲರ ಮುಂದೆ ಪ್ರದರ್ಶಿಸಿದರು.

“ನಾನು ಆರ್‌ಸಿಬಿ ಅಥವಾ ಸಿಎಸ್‌ಕೆ ಫ್ಯಾನ್ ಅಲ್ಲ, ನಾನು ಬಸವಣ್ಣನವರ ಫ್ಯಾನ್,” ಎಂದು ಬಸವ ಮೀಡಿಯಾ ಜೊತೆ ಮಾತನಾಡುತ್ತಾ ಸಾಗರ್ ಹೇಳಿದರು.
ಇಂದು ಯುವಕರು ಹೆಚ್ಚಾಗಿ ಕ್ರಿಕೆಟ್‌ನತ್ತ ಒಲುವು ಹೊಂದಿದ್ದು, ಆರ್‌ಸಿಬಿ ಅಥವಾ ಸಿಎಸ್‌ಕೆ ಟೀಂ ಗುರುತುಗಳನ್ನು ಪ್ರದರ್ಶಿಸುವುದನ್ನು ನೋಡಿದ್ದೆ. ನಾನೂ ಕೂಡ ನನಗೆ ಇಷ್ಟವಾದ ಮೊದಲ ಸಂಸತ್ತು ಸ್ಥಾಪಿಸಿದ ಬಸವಣ್ಣನವರ ಧ್ವಜವನ್ನು ಹಾರಿಸಿದೆ ಎಂದರು.
ಕಾರ್ಯಕ್ರಮ ಮುಗಿದ ಮೇಲೆ ಬೇರೆ ರಾಜ್ಯಗಳಿಂದ ಬಂದ ವಿಧ್ಯಾರ್ಥಿಗಳು ಬಸವಣ್ಣನವರ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಂಡರು, ಎಂದು ಸಾಗರ್ ಹೇಳಿದರು.

ಬಸವಕಲ್ಯಾಣ ತಾಲೂಕಿನ ಮುಚ್ಚಳಂಬ ಊರಿನವರಾದ ಸಾಗರ್ ಆನಂದ ದೇವಪ್ಪಾ ಹಾಗೂ ಮಹಾನಂದಾ ಅವರ ಪುತ್ರ. ಚಿಕ್ಕಂದಿನಿಂದಲೇ ಅವರು ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕಾ ಮತ್ತು ಬಸವಲಿಂಗ ಪಟ್ಟದ್ದೇವರು ಅವರುಗಳ ಪ್ರಭಾವದಲ್ಲಿ ಬೆಳೆದಿದ್ದಾರೆ.
ನಿತ್ಯ ವಿಭೂತಿ ಧರಿಸಿ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದ ಇವರು ಅನೇಕ ಸಹಪಾಠಿಗಳಿಗೆ ವಿಭೂತಿ, ಇಷ್ಟಲಿಂಗವನ್ನು ಪರಿಚಯಿಸಿ, ಬಸವ ಜ್ಞಾನವನ್ನು ನೀಡಿದ್ದಾರೆ.
ಸಮಯ ಸಿಕ್ಕಾಗ ಸರಳ ಜೀವನಕ್ಕೆ ಮಾರ್ಗಗಳಾಗಿರುವ ಬಸವಾದಿ ಶರಣರ ವಚನಗಳನ್ನು ಪಠಿಸುತ್ತಾರೆ. ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವ ಪಾಲಿಸುತ್ತೇನೆ ಎನ್ನುತ್ತಾರೆ.
