ಮರಿಯಾಲ ಮಠದಲ್ಲಿ 21ನೇ ಶರಣತತ್ವ ಕಮ್ಮಟದ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವತತ್ವ ಬೋಧನೆಯಾಗಬಾರದು ಸಾಧನೆಯಾಗುಬೇಕು’

ಚಾಮರಾಜನಗರ

ತಾಲ್ಲೂಕಿನ ಮರಿಯಾಲ ಮಠದಲ್ಲಿ ನಡೆಯುತ್ತಿರುವ 21ನೇ ಶರಣತತ್ವ ಕಮ್ಮಟ ಸಮಾರಂಭವನ್ನು ಪೂಜ್ಯರು, ಗಣ್ಯರು ಶುಕ್ರವಾರ ಉದ್ಘಾಟಿಸಿದರು.

ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್, ದಾವಣಗೆರೆ ಬಸವಬಳಗ, ಮರಿಯಾಲ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಮೇ 15ರಿಂದ ಮೇ 17ರವರಗೆ ಕಮ್ಮಟ ನಡೆಯಲಿದೆ.

ಮಠದ ಆವರಣದಲ್ಲಿರುವ ಮಹಾಂತ ಮ೦ಟಪ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಡಾ. ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ ಜೀವನದಲ್ಲಿ ಭಕ್ತಿ, ನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಶರಣತತ್ವದ ಮುಖ್ಯ ಉದ್ದೇಶವಾಗಿದೆ. 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದರು.

ಬಸವಾದಿ ಶರಣರು ಸಮಾನತೆ, ಕಾಯಕ ನಿಷ್ಠೆ, ಮತ್ತು ದಯೆಯನ್ನು ಆಧರಿಸಿದ ಮಾನವತಾವಾದಿ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಸಕಲ ಜೀವಾತ್ಮಗಳಿಗೆ ದಯೆ ತೋರುವುದು ಶರಣರ ಧರ್ಮ. ಸತ್ಯ, ಶುದ್ದಾಚಾರ, ನುಡಿದಂತೆ ನಡೆಯುವುದು ಮತ್ತು ಕಾಯಕದಲ್ಲಿ ಕಳ್ಳತನವಿಲ್ಲದ ಬದುಕು ನಡೆಸುವುದು – ಈ ತತ್ವಗಳು ಆಧುನಿಕ ಸಮಾಜದ ಸಂಘರ್ಷಗಳನ್ನು ನಿವಾರಿಸಲು ಮತ್ತು ಶಾಂತಿಯುತ ಸಹಬಾಳ್ವೆಗೆ ಅತ್ಯಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಸವ ನಿಜಯೋಗ ವಿಷಯದ ಬಗ್ಗೆ ಮಾತನಾಡಿದ ಮಾತನಾಡಿದ ಬೆಂಗಳೂರಿನ ಬೇಲಿ ಮಠದ ಶಿವರುದ್ರ ಸ್ವಾಮೀಜಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್, ದಾವಣಗೆರೆ ಬಸವಬಳಗ ವಚನಗಳ ತತ್ವಗಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸುವ ಮಹತ್ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಯಾವುದೇ ಜಾತಿಬೇಧವಿಲ್ಲದೆ ಸಾಮಾನ್ಯನನ್ನು ಅಸಾಮಾನ್ಯ ಮಹಾಶರಣರನ್ನಾಗಿಸಿದ ಬಸವ ನಿಜಯೋಗ ಬೋಧನೆಯಾಗುತ್ತಿದೆ ಹೊರತು ಸಾಧನೆಯಾಗುತ್ತಿಲ್ಲ.

ಬಸವಣ್ಣನವರು ಕಟ್ಟಬಯಸಿದ ಸಮಾನತೆಯ ಸಮಾಜದ ನಿರ್ಮಾಣವಾಗಬೇಕಾದರೆ ಶರಣರ ತತ್ವಗಳ ಆಚರಣೆ ಬಹಳ ಮುಖ್ಯವಾಗಿದೆ ಎಂದರು.

ಶರಣರು 12ನೇ ಶತಮಾನದಲ್ಲಿ ಜಾತ್ಯಾತೀತ ಸಮಾಜ ನಿರ್ಮಿಸಿದ್ದರು. ಕಾಯಕ, ದಾಸೋಹ ಮಹಾ ಮಂತ್ರವಾಗಿತ್ತು.

ಮುಂದೆ ಅದನ್ನು ಮಠಗಳು ಸಂರಕ್ಷಿಸಿಕೊಂಡು ಬಂದವು. ವಚನಗಳು ಮನೆ ಮನಕ್ಕೆ ತಲುಪಿದವು, ಶರಣರ ಆಶಯ ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಅರಿವು, ಆಚಾರ ಅಂತಕರಣ ಶ್ರದ್ಧೆ ಶರಣರದ್ದಾಗಿತ್ತು, ಜೀವನದಲ್ಲಿ ಶಿವಭಕ್ತಿ, ನಿಷ್ಠೆ, ವೈರಾಗ್ಯ ಹೊ೦ದುವವರು ಶರಣರು, ಕಾಯಕ, ದಾಸೋಹ ತತ್ವದಲ್ಲಿ ನಂಬುಗೆ ಹೊಂದಿದ್ದರು. ಇಂತಹ ನಡವಳಿಕೆ ಇಂದಿನ ಅಗತ್ಯವಾಗಿದೆ ಎಂದರು.

ಅಣ್ಣ ಬಸವಣ್ಣರ ಅನುಭವ ಮಂಟಪದಲ್ಲಿ ಪಾಲ್ಗೊಂಡಿದ್ದ ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕೆ ಸಿದ್ದರಾಮಯ್ಯ, ಚನ್ನಬಸವಣ್ಣು ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ ಮುಂತಾದ ಶರಣರು ವಚನ ಸಾಹಿತ್ಯದ ಮೂಲಕ ಜೀವನ ಅನುಭಾವ ನೀಡಿದರು. ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿದರು ಎಂದರು.

ಮರಿಯಾಲ ಮುರುಘ ರಾಜೇಂದ್ರ ಮಹಾ ಸಂಸ್ಥಾನ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ದಾವಣಗೆರೆ ಬಸವ ಬಳಗದ ಅಧ್ಯಕ್ಷರಾದ ಭುವನೇಶ್ವರಿ ತಾಯಿ ಅಧ್ಯಕ್ಷತೆ ವಹಿಸಿದ್ದರು.

ಪಡುಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ, ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ
ಪ್ರೊ. ಅಶೋಕ್ ಸಂಗಪ್ಪ ಆಲೂ‌ರ್, ನಿಡಸೋಶಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಎಸ್.ಸಿ. ಕಮತೆ, ಪಿ ರುದ್ದಪ್ಪ ಇತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *