ಜಾತಿಯ ವಿಷದ ಹಲ್ಲುಗಳನ್ನು ಮಠಗಳು ತೆಗೆಯಬೇಕಿದೆ: ಶಿವಾಚಾರ್ಯ ಸ್ವಾಮೀಜಿ

ಗಣೇಶ ಅಮೀನಗಡ
ಗಣೇಶ ಅಮೀನಗಡ

‘ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಸಾಣೇಹಳ್ಳಿ ಮಠ ಶ್ರೀಮಂತವಾಗಿದೆ.’

ಸಾಣೇಹಳ್ಳಿ :

ಮಠಗಳು ರಾಜಕೀಯ ಪಕ್ಷಗಳಲ್ಲ. ಹಾಗೆಯೇ ಒಂದು ಜಾತಿಗಾಗಿ ಮೀಸಲಲ್ಲ. ಅದರಲ್ಲೂ ನಮ್ಮ ಮಠಗಳು ಒಂದೇ ಜಾತಿಗೆ ಅಂಟಿಕೊಂಡಿಲ್ಲ.

ಮಠಪೀಠಗಳು ಸರ್ವರ ಹಿತ ಕಾಪಾಡುತ್ತವೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಭರವಸೆ ನೀಡಿದರು.

ಇಲ್ಲಿ ಶುಕ್ರವಾರ ನಾಟಕೋತ್ಸವದ ಸಮಾರೋಪ ಸಮಾರಂಭ ಹಾಗೂ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಅವರು ಆಶೀರ್ವಚನ ನೀಡಿದರು.

ಈ ದೇಶದಲ್ಲಿ ಜಾತಿ ಹೊಡೆದೋಡಿಸಲಾಗದು ನಿಜ. ಆದರೆ ಸರ್ವಜನಾಂಗದ ಶಾಂತಿಯ ತೋಟವಾಗಿ ಮಠಗಳು ಆಗಬೇಕಿದೆ. ಹಾಗೆಯೇ ಜಾತಿಯ ವಿಷದ ಹಲ್ಲುಗಳನ್ನು ಮಠಗಳು ತೆಗೆಯಬೇಕಿದೆ ಎಂದು ಸಲಹೆ ನೀಡಿದರು.

ತಪೋವನದ ಹಾಗೆ ಸಾಣೇಹಳ್ಳಿ ಮಠ ಸುಂದರವಾಗಿದೆ ಮತ್ತು ವಿಶಿಷ್ಟವಾಗಿದೆ. ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಈ ಮಠವು ಶ್ರೀಮಂತವಾಗಿದೆ. ಸಾಣೇಹಳ್ಳಿ ಮಠ ಅಭಿವೃದ್ಧಿಯಾಗಿದೆ.

ಆದರೆ ಚುಚ್ಚುವ ಮಾತಗಳು ಸದಾಕಾಲ ಇರುತ್ತವೆ. ಇಂಥವಕ್ಕೆಲ್ಲ ಪ್ರತಿಕ್ರಿಯೆ ನೀಡಬೇಡಿ ಎಂದು ಸಾಣೇಹಳ್ಳಿ ಶ್ರೀಗಳಿಗೆ ಹೇಳಿದ್ದೇವೆ ಎಂದರು.

ನಾಟಕೋತ್ಸವಕ್ಕೆ ಸಂಬಂಧಿಸಿ ದುಡಿದವರು ಮಠಕ್ಕೆ ನಿಷ್ಠರಾಗಿ, ಭಕ್ತಿಯಿಂದ ನಡೆದವರು ಥೈ ಥೈ ಎಂದು ಕುಣಿಯುತ್ತಾರೆ. ಆದರೆ ಕೆಲವರು ಕೈ ಕೈ ಹಿಚುಕಿಕೊಳ್ಳುತ್ತಾರೆ ಎಂದರು.

ನಮ್ಮ ಮಠದ ಎಲ್ಲ ಕಷ್ಟಗಳನ್ನು ನೀಗಿಸಿ ಪ್ರಗತಿ ಸಾಧಿಸಿದವರು ನಮ್ಮ ಗುರುಗಳಾದ ಶಿವಕುಮಾರ ಸ್ವಾಮಿಗಳು. ಈಗ ಸಾಣೇಹಳ್ಳಿ ಮಠವು ಮೂವತ್ತು ವರ್ಷಗಳಿಂದ ನಾಟಕ ಚಟುವಟಿಕೆ ಮೂಲಕ ಗಮನ ಸೆಳೆಯುತ್ತಿದೆ ಎಂದು ಮೆಚ್ಚುಗೆಯಾಡಿದರು.

ಸಾಹಿತಿಗಳಿಗೆ ಪ್ರಶಸ್ತಿಗಳು ಗೌಣ. ಆದರೆ ತಮ್ಮ ಕೃತಿಗಳನ್ನು ಮೆಚ್ಚಿ ಯಾರಾದರೂ ನುಡಿದರೆ ಪ್ರಶಸ್ತಿಗಿಂತ ದೊಡ್ಡದು ಎಂದು ತಿಳಿಯುತ್ತಾರೆ. ಎಲ್ಲ ಲೇಖಕರಿಗೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕೆಂಬ ತುಡಿತ ಇರುತ್ತದೆ ಎಂದರು.

ಅವಗುಣ ಅಳಿಯಲಿ ; ಸದ್ಗುಣ ‌ಸಲ್ಲಲಿ : ಸಾಣೇಹಳ್ಳಿ ಶ್ರೀಗಳು

ದುಗ್ಗಾಣಿ ಮಠವನ್ನು ಶ್ರೀಮಂತ ಮಠವಾಗಿಸಿದವರು, ದುಗ್ಗಾಣಿ ಶಿಷ್ಯರನ್ನು ಸರಿದಾರಿಗೆ ತಂದವರು ನಮ್ಮ ಗುರುಗಳಾದವರು ಶ್ರೀ ಶಿವಕುಮಾರ ಸ್ವಾಮಿಗಳು ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸ್ಮರಿಸಿದರು.

ನಾಟಕೋತ್ಸವ ಅಂಗವಾಗಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.

ಸಮಾಜ ತಿದ್ದಲು ರಂಗಭೂಮಿ ಸುವರ್ಣ ಮಾಧ್ಯಮ ಎಂದು ಅರಿತ ಶಿವಕುಮಾರ ಸ್ವಾಮಿಗಳು ತಾವೇ ನಾಟಕಗಳನ್ನು ರಚಿಸಿ, ಶರಣ ಸಂಸ್ಕೃತಿ ಬೆಳೆಸಿದರು‌ ಎಂದರು.

30 ವರ್ಷಗಳಿಂದ ಸಾಣೇಹಳ್ಳಿಯಲ್ಲಿ ರಂಗ ಚಟುವಟಿಕೆಗಳು ನಡೆದಿವೆ. ನಮ್ಮ ಹಿರಿಯ ಗುರುಗಳಲ್ಲದೆ ಡಾಕ್ಟರ್ ಜಗದ್ಗುರುಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ‌ಬಂದರು ಎಂದು ಶ್ಲಾಘಿಸಿದರು.

ಮೋಳಿಗೆ ಮಾರಯ್ಯ ಉತ್ತರ ಭಾರತದಲ್ಲಿ ರಾಜನಾಗಿದ್ದ. ಆತ ಕನ್ನಡ ನಾಡಿಗೆ ಬಂದು ಶರಣನಾದ. ಆ ಶರಣ ಹುರುಳಿಲ್ಲದ ಸಿರಿ ಮೆಚ್ಚಿಕೊಳ್ಳಲಿಲ್ಲ. ಅವರ ಸಂದೇಶದಂತೆ  ಸಂಪತ್ತನ್ನು ಕೂಡಿಡದೆ ಸಮಾಜಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಸತ್ಯ, ಪ್ರಾಮಾಣಿಕತೆ ಬೋಧನೆಗೆ ಸೀಮಿತವಾಗದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ನಮ್ಮನ್ನು ನಾವು ಮರೆತು ಉಳಿದವರ ಕಡೆ ಬೆರಳು ತೋರಿಸುತ್ತೇವೆ. ನಮ್ಮ ಅವಗುಣಗಳನ್ನು ಕಳೆದು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಡಾ. ಶಿವಮೂರ್ತಿ ಶ್ರೀಗಳ ಸ್ವಾಗತಕ್ಕೆ ಮುನ್ನುಡಿ ಬರೆದ ಮಳೆ

ಸಮಾರೋಪ ಸಮಾರಂಭಕ್ಕೆ ಮೊದಲು ಅದು ಸಂಜೆ ಐದರ ಮಳೆ. 15 ನಿಮಿಷಗಳವರೆಗೆ ಸುರಿದು ನಿಂತಿತು. ಗಣ್ಯರ ಸ್ವಾಗತಕ್ಕೆ ನೀರು ಹಾಕಿ ಸ್ವಾಗತಿಸುವುದು ಸಾಮಾನ್ಯ. ಶುಕ್ರವಾರ ಸಂಜೆ ಹೊತ್ತಿಗೆ ಸುರಿದ ಮಳೆಯು ಸಿರಿಗೆರೆ ತರಳಬಾಳು ಮಠದ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸ್ವಾಗತಕ್ಕೆ ಮಳೆ ಸುರಿದು ಮುನ್ನುಡಿ ಬರೆಯಿತು.

ಅವರನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೇಹಳ್ಳಿಯ ಮುಖ್ಯದ್ವಾರದ ಬಳಿ ಸ್ವಾಗತಿಸಿದರು. ಹಾಗೆಯೇ ಸಾಣೇಹಳ್ಳಿಯ ಮಹಿಳೆಯರು ಪೂರ್ಣಕುಂಭ ಮೂಲಕ ಸ್ವಾಗತಿಸಿದರು. ಅಲ್ಲದೆ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ಮೂಲಕ ಸ್ವಾಗತ ಕೋರಿದರು. ಹಿರೇನಲ್ಲೂರಿನ ವೀರಗಾಸೆ ಮಹಿಳೆಯರೂ ಮೆರವಣಿಗೆಯಲ್ಲಿ ಕರೆದೊಯ್ದರು. ನಂತರ ಸಾಗಿದ ಸ್ವಾಮಿಗಳಿಗೆ ಓಕಳಿ ನೀರು ಹಾಕಿ, ಆರತಿ ಬೆಳಗಿ ಮಹಿಳೆಯರು ಸ್ವಾಗತಿಸಿದಾಗ ಶ್ರೀಗಳಿಗೆ ಎಂದು ನೆರೆದ ಭಕ್ತರು ಜೈಕಾರ ಹಾಕಿದರು.

ಹೀಗೆ ಐದು ವರ್ಷಗಳ ನಂತರ ಸಾಣೇಹಳ್ಳಿಗೆ ಬಂದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಮೆರವಣಿಗೆಯಲ್ಲಿ ಅವರನ್ನು ಸಿದ್ಧರಾಮೇಶ್ವರ ಪುಷ್ಕರಣಿಯವರೆಗೆ ಕರೆದೊಯ್ದಾಗ ಅಲ್ಲಿ ಅವರು ಬಾಗಿನ ಅರ್ಪಿಸಿದರು. ನಂತರ ಗುರುಭವನವನ್ನು ಜ್ಯೋತಿ ಬೆಳಗಿಸಿ ಡಾ.ಶಿವಮೂರ್ತಿ ಶ್ರೀಗಳು ಉದ್ಘಾಟಿಸಿದರು. ಆಗ ಶಿವಕುಮಾರ ರಂಗ ಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಸಮನ್ವಯ ಎನ್ನುವ ಉದ್ದೇಶದೊಂದಿಗೆ ಎಲ್ಲ ಜಾತಿ, ಧರ್ಮ ಒಂದೇ. ಎಲ್ಲ ಧರ್ಮಗುರುಗಳು ಒಂದೇ. ಗುರುವೆಂದರೆ ಜ್ಞಾನದ ಬೆಳಕು. ನಮ್ಮೊಳಗಿನ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ತೋರುವವರೇ ನಿಜವಾದ ಗುರು. ಅಂಥ ಗುರುವಿಗೆ ಗುರುಭವನ ಸಮರ್ಪಣೆ ಎಂದು ಹಾಡು ಹಾಡಿದರು.

ಹಾಡುವಾಗ ಮೀರಾಬಾಯಿ ಪಾತ್ರಧಾರಿ ರಂಗಶಾಲೆಯ ಶಿಕ್ಷಕಿ ಸಂಗೀತಾ ಭಿಡೆ ಅವರು ಬುದ್ಧ, ಬಸವ, ಅಂಬೇಡ್ಕರ್ ಅಲ್ಲದೆ ಸ್ವಾಮಿ ವಿವೇಕಾನಂದ, ಪುರಂದರದಾಸರು, ನೆಲ್ಸನ್ ಮಂಡೇಲಾ… ಹೀಗೆಯೇ ಶಿವಶರಣರ ಪಾತ್ರಧಾರಿಗಳಲ್ಲದೆ ಹಿಂದೂ, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳ ಪಾತ್ರಧಾರಿಗಳನ್ನು ಪರಿಚಯಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *