ಬಸವಕಲ್ಯಾಣ ಚಲೋ: ಕನ್ನೇರಿ ಸ್ವಾಮಿ ಪ್ರವೇಶ ತಡೆಯಲು ಮಠಾಧಿಪತಿಗಳ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಜೂನ್ 28 ಲಕ್ಷಾಂತರ ಬಸವ ಭಕ್ತರು ಬರಲು ಕರೆ

ಬಸವಕಲ್ಯಾಣ

ಜೂನ್ 28 ಬಸವಕಲ್ಯಾಣದಲ್ಲಿ ಆಯೋಜಿಸ ಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಆಗಮಿಸುತ್ತಿರುವ ಕನ್ನೇರಿ ಸ್ವಾಮಿಯ ಪ್ರವೇಶ ತಡೆಯಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಜಂಟಿಯಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಸವಕಲ್ಯಾಣದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕನ್ನೇರಿ ಸ್ವಾಮಿಯ ಪ್ರವೇಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.

ಇದು ಬಸವ ತತ್ವ, ಸಾರ್ವಜನಿಕ ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸಲ್ಲಿಸಲಾಗುತ್ತಿರುವ ಪ್ರಜಾಸತ್ತಾತ್ಮಕ ಮನವಿಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಅಥವಾ ಕನ್ನೇರಿ ಸ್ವಾಮಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದಲ್ಲಿ ನಾಡಿನ ಸಮಸ್ತ ಬಸವ ಭಕ್ತರಲ್ಲಿ ತೀವ್ರ ಅಸಮಾಧಾನ ಮೂಡಲಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲುಗಳು ಉಂಟಾಗುವ ಸಾಧ್ಯತೆ ಇದೆ.

ಅಂತಹ ಪರಿಸ್ಥಿತಿ ಎದುರಾದರೆ ಸಂವಿಧಾನಬದ್ಧ, ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ರೀತಿಯಲ್ಲಿ ತೀವ್ರ ಹೋರಾಟ ನಡೆಸಲು ಬದ್ಧರಾಗಿರುವುದಾಗಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದೇವರು ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಬಸವರಾಜ ಧನ್ನೂರ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರನ್ನೂ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಪೂಜ್ಯ ಬಸವಲಿಂಗ ಪಟ್ಟದೇವರ ಕರೆ

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದೇವರು, “ಬಸವಕಲ್ಯಾಣ ಇಡೀ ಕರ್ನಾಟಕಕ್ಕೆ ಪವಿತ್ರ ಸ್ಥಳ. ಬಸವತತ್ವವನ್ನ ಮುಗಿಸಬೇಕು ಎಂದು ಅದನ್ನು ಪ್ರಚಾರ ಮಾಡುತ್ತಿರುವ ಸ್ವಾಮೀಜಿಗಳನ್ನು, ಬಸವ ಅನುಯಾಯಿಗಳನ್ನುಗಳನ್ನು ಬಾಯಿಗೆ ಹೇಳಲು ಬರದಿರುವ ಶಬ್ದಗಳಿಂದ ನಿಂದಿಸಿ ಕನ್ನೇರಿ ಸ್ವಾಮಿ ಸುಪ್ರೀಂ ಕೋರ್ಟಿನಿಂದಲೂ ಚೀಮಾರಿ ಹಾಕಿಸಿಕೊಂಡಿದ್ದಾರೆ.

ಅವರನ್ನು ಬಸವ ಕಲ್ಯಾಣ ಪ್ರವೇಶ ಮಾಡಲು ಬಿಡುವುದಿಲ್ಲ ಪ್ರವೇಶ ಮಾಡಲು ಬಿಡುವುದಿಲ್ಲ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಸವ ಭಕ್ತರು ಜೂನ್ 28 ಬಸವಕಲ್ಯಾಣಕ್ಕೆ ಬಂದು ಹೋರಾಟ ಮಾಡಬೇಕೆಂದು ಕರೆ ನೀಡುತ್ತಿದ್ದೇವೆ,” ಎಂದು ಹೇಳಿದರು.

ಮಹತ್ವದ ಸಭೆ

ಈ ಮುಂಚೆ ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಮುಖಂಡರು ಹಾಗೂ ಬಸವ ಭಕ್ತರು ಬೀದರ್ ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ಪ್ರಮುಖರು ಮಾತನಾಡಿ, “ಬಸವ ಭಕ್ತರನ್ನು ʼಬಸವ ತಾಲಿಬಾನಿʼ ಎಂದು ಉಲ್ಲೇಖಿಸಿರುವುದು ಹಾಗೂ ಬಸವ ತತ್ವ ಮತ್ತು ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿರುವ ಪೂಜ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಇಂತಹ ಹೇಳಿಕೆಗಳು ಬಸವಾನುಯಾಯಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ” ಎಂದರು.

ಬಸವಾದಿ ಶರಣರ ಪವಿತ್ರ ನೆಲವಾದ ಬಸವಕಲ್ಯಾಣದ ಗೌರವ, ಸಮಸ್ತ ಬಸವ ಭಕ್ತರ ಭಾವನೆಗಳು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕನ್ನೇರಿ ಸ್ವಾಮಿಯ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸುವುದಾಗಿ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಲಾಯಿತು.

ಇದೇ ಸಂದರ್ಭದಲ್ಲಿ ‘ಬಸವಕಲ್ಯಾಣ ಚಲೋ’ ಬೃಹತ್ ಪ್ರತಿಭಟನಾ ಹೋರಾಟದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.

ಡಾ. ಗಂಗಾಂಬಿಕಾ ಅಕ್ಕ ಪ್ರಕಟಣೆ

ನಾಡಿನ ಸಮಸ್ತ ಬಸವ ಭಕ್ತರು ಈ ಸಮಾವೇಶವನ್ನು ಬಹಿಸ್ಕರಿಸಬೇಕೆಂದು ಬೀದರ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.

ಸಕಲರ ಒಳಿತು ಬಯಸುವ ಬಸವ ಭಕ್ತರನ್ನು ಬಸವ ತಾಲಿಬಾನಿಗಳು ಎಂದು ಹೀಯಾಳಿಸಿ ಮಾತನಾಡಿದ ಕನ್ನೇರಿ ಸ್ವಾಮಿಗಳ ನಿಲುವನ್ನು ನಾವು ಖಂಡಿಸುತ್ತೇವೆ.

ಜೂನ್ 28ರಂದು ಬಸವಕಲ್ಯಾಣದಲ್ಲಿ ಹಿಂದುತ್ವವಾದಿ ಸಂಘಟನೆಗಳು ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ನಾವು ವಿರೋಧಿಸುತ್ತೇವೆ, ಎಂದು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
2 Comments
  • ನಮ್ಮ ಭಾವನೆ ನಿಮ್ಮ ಭಾವನೆ ಒಂದೇ ಬಸವ ಭಾವಿಗಳಿಗೆ ಜವಾಗಲಿ 🙏🏻ಶರಣು 👏🏻👏🏻

Leave a Reply

Your email address will not be published. Required fields are marked *