ಮಾನಸಿಕ ಅಸ್ವಸ್ಥ, ಕಾವಿ ಧರಿಸಲು ಅಯೋಗ್ಯ, ಕಾಡು ಪ್ರಾಣಿ – ಶರಣ ಸಮಾಜದ ಪ್ರತಿಕ್ರಿಯೆ
ಬೆಂಗಳೂರು
ಬಸವತತ್ವದ ಸ್ವಾಮೀಜಿಗಳನ್ನು ‘ಬಸವ ತಾಲಿಬಾನಿಗಳು’ ಎಂದು ಕರೆದು ಮತ್ತೆ ವಿವಾದ ಸೃಷ್ಟಿಸಿರುವ ಕನ್ನೇರಿ ಮಠದ ಸ್ವಾಮಿಗೆ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ.
ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಕನ್ನೇರಿ ಸ್ವಾಮಿ ಕಾವಿ ಧರಿಸಲು ಯೋಗ್ಯರಲ್ಲ. ಅವರೊಬ್ಬ ಕಾಡುಪ್ರಾಣಿ. ಅವರ ನಾಲಿಗೆಗೆ ಸಂಸ್ಕಾರವೇ ಇಲ್ಲ. ಇದೇ ರೀತಿ ನಾಲಿಗೆ ಹರಿಬಿಡುತ್ತ ಹೋದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಜೊತೆಗೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಮನುವಾದಿಗಳು ಅವರು ಬಸವತತ್ವದ ವಿರೋಧಿಗಳು. ಈ ಮನುವಾದಿಗಳನ್ನು ಸಂತೈಸಲು ಕನ್ನೇರಿ ಶ್ರೀಗಳು ಪದೇಪದೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬೀದರದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಕನ್ನೇರಿ ಸ್ವಾಮೀಜಿ ರಾಯಬಾಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಬಸವತತ್ವದ ಸ್ವಾಮೀಜಿಗಳನ್ನು ತಾಲಿಬಾನಿಗಳು ಎಂದು ಕರೆದಿದ್ದಾರೆ. ಸ್ವಾಮೀಜಿಗಳು ಟೀ ಶರ್ಟ್, ಬರ್ಮುಡಾ ಧರಿಸಿ ಬಾರ್ ಹೋಟೆಲ್ ಗೆ ಹೋಗುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಇದು ತೀವ್ರ ಖಂಡನಾರ್ಹ.
ಕನ್ನೇರಿ ಸ್ವಾಮೀಜಿಯ ಇಂಥ ಹೇಳಿಕೆ ನೋಡಿದರೆ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಅವರನ್ನು ಒಳ್ಳೆಯ ಆಸ್ಪತ್ರೆಗೆ ಕೂಡಲೇ ಸೇರಿಸಬೇಕು, ಎಂದು ಹೇಳಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸು ಸಹಿಸಿಕೊಳ್ಳದೆ ಅದರ ಸಂಭ್ರಮ ನೋಡಲಾಗದೆ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಸ್ವಾಮೀಜಿ ಮೇಲೆ ಸರ್ಕಾರದ ನಿರ್ಬಂಧ ಅವರು ಪ್ರಶ್ನಿಸಿದಾಗ ಹೈಕೋರ್ಟ್, ಸುಪ್ರೀಂಕೋರ್ಟ್ ಅವರಿಗೆ ಛೀಮಾರಿ ಹಾಕಿ ನೀವು ಒಳ್ಳೆಯ ಪ್ರಜೆಯಲ್ಲ. ಸ್ವಾಮೀಜಿಯಾಗಿ ಯಾವುದಾದರೂ ಮಠದಲ್ಲಿ ಧ್ಯಾನ ಮಾಡಲು ಹೇಳಿದ್ದಾರೆ. ಇಂಥ ಸೂಕ್ಷ್ಮ ಪರಿಸ್ಥಿತಿಯಲ್ಲೂ ಅವರು ಮನಸಿನಲ್ಲಿ ತೀವ್ರ ಆಕ್ರೋಶ, ದ್ವೇಷ ತುಂಬಿಕೊಂಡಿದ್ದಾರೆ.
ಈ ಸ್ವಾಮೀಜಿ ಸಮಾಜದ ಉನ್ನತಿ ಬಯಸುವವರಲ್ಲ ಇವರು ಸಮಾಜವನ್ನು ಇನ್ನಷ್ಟು ಹದಗೆಡಿಸುತ್ತಾರೆ. ಸರ್ಕಾರಕ್ಕೆ ನಾವು ಅಗ್ರಹಿಸುತ್ತೇವೆ, ಇವರ ಮೇಲೆ ಸಂಪೂರ್ಣ ನಿರ್ಬಂಧ, ನಿಷೇಧ ಹೇರಬೇಕು. ಇವರ ಕೊಳಕುಬಾಯಿ ಮುಚ್ಚಿಸಬೇಕು.
ಕನ್ನೇರಿ ಸ್ವಾಮೀಜಿ ವರ್ತನೆ ಇದೇ ರೀತಿ ಮುಂದುವರೆದರೆ ನಾವು ಸುಮ್ಮನೆ ಬಿಡಲ್ಲ, ಬೀದಿಗಿಳಿದು ಹೋರಾಡುತ್ತೇವೆ.
ವಿಜಯಪುರದ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಕೆಲವು ಸ್ವಾಮೀಜಿಗಳು ಬರ್ಮುಡಾ ಟಿ-ಶರ್ಟ್ ಧರಿಸುತ್ತಾರೆ ಎಂದು ಕನ್ನೇರಿ ಶ್ರೀಗಳು ಹೇಳಿದ್ದಾರೆ. ಅವರ ಕಣ್ಣಿಗೆ ಕಂಡ ಯಾವ ಸ್ವಾಮೀಜಿ ಹಾಕಿದ್ದರು ಅವರ ಹೆಸರು ಹೇಳಬೇಕು. ಸ್ವಾಮೀಜಿಯವರನ್ನು ತಾಲಿಬಾನಿಗಳು ಎಂದು ಕರೆದಿದ್ದನ್ನು ಸಹ ನಾನು ಒಪ್ಪಲ್ಲ ತೀವ್ರವಾಗಿ ಖಂಡಿಸುತ್ತೇನೆ, ಎಂದು ಹೇಳಿದ್ದಾರೆ.
ಕನ್ನೇರಿ ಸ್ವಾಮಿ ಹೇಳಿದ್ದೇನು?
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಘಟಕಗಳಿಂದ ರವಿವಾರ ಆಯೋಜಿಸಿದ್ದ ಹನುಮಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನೇರಿ ಸ್ವಾಮಿ ಕಾವಿಧರಿಸಿದ ‘ಬಸವ ತಾಲಿಬಾನಿಗಳು’ ಹನುಮಮಾಲೆ ಸೇರಿದಂತೆ ಹಿಂದೂ ಆಚರಣೆಗಳ ಕುರಿತು ಟೀಕೆ ಮಾಡುತ್ತಾರೆ. ಈ ‘ಕೆಲವು ಮಠಾಧೀಶರು ರಾತ್ರಿ ಬರ್ಮುಡಾ, ಟಿ-ಶರ್ಟ್ ಧರಿಸಿಕೊಂಡು ಬಾರ್ ಹಾಗೂ ಹೋಟೆಲ್ ಗಳಿಗೆ ಹೋಗುತ್ತಾರೆ’ ಎಂದು ತೀವ್ರ ಟೀಕೆ ನಡೆಸಿದರು.
ಲಿಂಗಾಯತ ಪೂಜ್ಯರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಎರಡು ಜಿಲ್ಲೆಗಳಿಂದ ನಿರ್ಬಂಧಕ್ಕೊಳಗಾಗಿರುವ ಕನ್ನೇರಿ ಸ್ವಾಮಿ ಕೋರ್ಟುಗಳ ಖಂಡನೆಗೂ ಗುರಿಯಾಗಿದ್ದಾರೆ.
ರಾಯಬಾಗ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ವಿವಾದದ ಬಗ್ಗೆಯೂ ಮಾತನಾಡಿದರು. “ನಾನು ಹೇಳಿದ್ನಲ್ಲಾ ಮೊನ್ನೆ, ಆ ಭಾಷೆ ಬೇಗ ತಿಳೀತು ಅವರಿಗೆ. ಮೊದಲೆಲ್ಲ ರಗಡು ಸರಿ ಹೇಳಿದ್ದೆ ಏನೂ ತಿಳೀಲಿಲ್ಲ,” ಎಂದು ತಮ್ಮ ಮೊದಲ ವಿವಾದವನ್ನೂ ಸಮರ್ಥಿಸಿಕೊಂಡರು.
ಕನ್ನೇರಿ ಸ್ವಾಮಿಯ ವಿರುದ್ಧ ಈಗಾಗಲೇ ಹಲವಾರು ಕಡೆ ಪ್ರತಿಭಟನೆಗಳು ನಡೆದಿವೆ.
