ಕನ್ನೇರಿ ಸ್ವಾಮಿಗೆ ಉತ್ತರ, ಕೆಲವು ಪ್ರತಿ ಪ್ರಶ್ನೆಗಳು
ಕಲಬುರಗಿ
ಕಲಬುರಗಿಯಲ್ಲಿ ನಡೆದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಕೆಲವೊಂದು ಪ್ರಶ್ನೆ ಕೇಳಿದರು. ಅವುಗಳಿಗೆ ನನ್ನ ಉತ್ತರ:
- “ಬೀದರ ಜಿಲ್ಲೆಯಲ್ಲಿ ಹೆಚ್ಚು ಬಸವತತ್ವ ಪ್ರಚಾರಕರು ಇರುವ ಕಾರಣದಿಂದ ಚರ್ಚುಗಳು ಹೆಚ್ಚಾಗಿವೆ” ಎನ್ನುವುದು ಸರಿಯೇ?
ಉತ್ತರ: ಕ್ರೈಸ್ತರು ಹೆಚ್ಚು ಇರುವುದು ಸಂಘದ ಪ್ರಭಾವ ಇರುವ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ. ಬೀದರ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚ್ ಗಳು ಎಂಬುದು ಆಧಾರರಹಿತ ಆರೋಪ. ಯಾವುದೇ ಆರೋಪಕ್ಕೆ ಅಂಕಿ-ಅಂಶ ಮತ್ತು ದಾಖಲೆಗಳಿರಬೇಕು.
- “ಶಾಲೆ–ಕಾಲೇಜು ನಡೆಸುವ ಸ್ವಾಮಿಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾರೆ” ಎನ್ನುವ ಆರೋಪದ ಬಗ್ಗೆ?
ಉತ್ತರ: ಯಾವುದೇ ಶಿಕ್ಷಣ ಸಂಸ್ಥೆಗೆ ಕಟ್ಟಡ, ಶಿಕ್ಷಕರು, ಬೋಧಕೇತರ ಸಿಬ್ಬಂದಿ, ನಿರ್ವಹಣೆ ಸೇರಿದಂತೆ ಹಲವು ವೆಚ್ಚಗಳಿರುತ್ತವೆ. ಆ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ಯಾರಿಗೂ ಕಡ್ಡಾಯವಲ್ಲ. ಶುಲ್ಕದ ಬಗ್ಗೆ ಪ್ರಶ್ನೆಗಳಿದ್ದರೆ ಸಂಬಂಧಿಸಿದ ಸಂಸ್ಥೆಯ ದಾಖಲೆಗಳು ಮತ್ತು ಸರ್ಕಾರದ ನಿಯಮಗಳ ಆಧಾರದಲ್ಲಿ ಚರ್ಚಿಸೋಣ; ಸಾಮಾನ್ಯೀಕರಿಸಿ ಆರೋಪ ಮಾಡುವುದು ಸರಿಯಲ್ಲ.
- “ಬಸವತತ್ವ ಮತ್ತು ಇಸ್ಲಾಂ ತತ್ವ ಒಂದೇ” ಎಂದು ಹೇಳಲಾಗುತ್ತದೆಯೇ?
ಉತ್ತರ: ಬಸವತತ್ವ ಮತ್ತು ಇಸ್ಲಾಂ ಧರ್ಮದ ತಾತ್ವಿಕ ಪರಂಪರೆಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ, ಕಾಯಕ–ದಾಸೋಹ ಮುಂತಾದ ಬಸವ ಪರಂಪರೆಯ ಆಚರಣೆಗಳನ್ನು ಇಸ್ಲಾಂನೊಂದಿಗೆ ಒಂದೇ ಎಂದು ಹೇಳುವುದು ಸರಳೀಕರಣ. ಯಾರಾದರೂ ಅಂತಹ ಹೇಳಿಕೆ ಮಾಡಿದ್ದಾರೆ ಎನ್ನುವುದಾದರೆ, ಅವರ ನಿಖರ ಹೇಳಿಕೆಯನ್ನು ಮುಂದಿಟ್ಟು ಚರ್ಚಿಸೋಣ.
ಪರನಿಂದೆಯೇ ಪರಮ ಪಾಪ. ಸನ್ಯಾಸಿಯ ನುಡಿಯಲ್ಲಿ ಅಮೃತವಿರಬೇಕು; ದ್ವೇಷದ ಮಾತುಗಳಲ್ಲ. ಭಿನ್ನಾಭಿಪ್ರಾಯವಿದ್ದರೂ ತತ್ವ ಮತ್ತು ದಾಖಲೆಗಳ ಆಧಾರದಲ್ಲಿ ಚರ್ಚೆ ನಡೆಯಲಿ.
- ಗುಡಿ ನಿರಾಕರಿಸಿದ ಸ್ವಾಮಿಗಳು ಹಿಂದಿನ ಶ್ರೀಗಳ ಗುಡಿ ನಿರ್ಮಿಸಿದ್ದಾರೆ?
ಉತ್ತರ: ಮೊದಲು “ಗುಡಿ” ಮತ್ತು “ಸ್ಮಾರಕ”ದ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು.
ಲಿಂಗೈಕ್ಯರಾದ ಶ್ರೀಗಳ ಸಮಾಧಿ ಸ್ಥಳದಲ್ಲಿ ಅವರ ಸ್ಮರಣೆಗಾಗಿ ಸ್ಮಾರಕ ನಿರ್ಮಿಸುವುದು ಮತ್ತು ಅದನ್ನು ದೇವರ ಆರಾಧನಾ ಗುಡಿಯಾಗಿ ಪರಿಗಣಿಸುವುದು ಒಂದೇ ವಿಷಯವಲ್ಲ.
ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ, ಲಿಂಗೈಕ್ಯ ಗದುಗಿನ ಶ್ರೀಗಳ, ಲಿಂಗೈಕ್ಯ ಭಾಲ್ಕಿ ಶ್ರೀಗಳ ಸಮಾಧಿ ಸ್ಥಳಗಳಲ್ಲಿ ನಿರ್ಮಿಸಿರುವ ಸ್ಮಾರಕಗಳನ್ನು ಸ್ಮಾರಕಗಳೆಂದು ಅರ್ಥಮಾಡಿಕೊಳ್ಳಬೇಕು; ಅವುಗಳನ್ನು ದೇವಾಲಯವೆಂದು ಸಮೀಕರಿಸುವುದು ಸರಿಯಲ್ಲ.
ಹಾಗೆಯೇ, ಇತಿಹಾಸದಲ್ಲಿ ಅನೇಕ ಸಂತ–ಶರಣರ ಸಮಾಧಿ ಸ್ಥಳಗಳು ಇಂದು ಸ್ಮರಣಾ ಕ್ಷೇತ್ರಗಳಾಗಿವೆ. ಉದಾಹರಣೆಗೆ ಎಡೆಯೂರು ಸಿದ್ಧಲಿಂಗೇಶ್ವರ, ಕಲಬುರಗಿ ಶರಣಬಸವೇಶ್ವರ, ಹುಬ್ಬಳ್ಳಿಯ ಸಿದ್ಧಾರೂಢರು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ತಿಂಥಣಿ ಮೌನೇಶ್ವರ, ಶಿರಡಿಯ ಸಾಯಿಬಾಬಾ ಮುಂತಾದವರ ಸಮಾಧಿ ತಾಣಗಳು ಭಕ್ತರು ಸ್ಮರಿಸುವ ಪವಿತ್ರ ಸ್ಥಳಗಳಾಗಿ ರೂಪುಗೊಂಡಿವೆ.
ಆದ್ದರಿಂದ ಪ್ರಶ್ನೆ ಮಾಡುವ ಮೊದಲು ಸಮಾಧಿ, ಸ್ಮಾರಕ, ದೇವಾಲಯ ಮತ್ತು ಆರಾಧನಾ ಪದ್ಧತಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.
ತಾತ್ವಿಕ ವಿಚಾರಗಳನ್ನು ಬಿಟ್ಟು ಕೇವಲ ಕಟ್ಟಡದ ರೂಪವನ್ನು ಹಿಡಿದು ವಿವಾದ ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.
ವ್ಯಕ್ತಿಯನ್ನು ಪ್ರಶ್ನಿಸುವ ಮೊದಲು ವಿಚಾರವನ್ನು ಅರ್ಥಮಾಡಿಕೊಳ್ಳೋಣ. ಆರೋಪ ಮಾಡುವ ಮೊದಲು ವ್ಯತ್ಯಾಸವನ್ನು ತಿಳಿದುಕೊಳ್ಳೋಣ.
ಈಗ ಕೆಲವು ಪ್ರಶ್ನೆಗಳು ನಮ್ಮ ಕಡೆಯಿಂದಲೂ…
- ನೀವು ಅಗಲವಾದ ಕುಂಕುಮ ಧರಿಸುವುದರ ಧಾರ್ಮಿಕ ಅರ್ಥವೇನು?
ಅದು ಮುತ್ತೈದೆತನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸನ್ಯಾಸ ಪರಂಪರೆಯ ನಿಮ್ಮ ವ್ಯಾಖ್ಯಾನದಲ್ಲಿ ಅದರ ಸ್ಥಾನವೇನು?
- ಮಹಾರಾಷ್ಟ್ರದ ಒಂದು ಮಠದಲ್ಲಿ ಜಂಗಮರಿಗೆ ತಾವು ಪಟ್ಟ ಕಟ್ಟಲಿಲ್ಲ ಎನ್ನಲಾಗುತ್ತದೆ. ಅದರೆ ನಿಜವಾದ ಕಾರಣವೇನು? ನಿಮ್ಮ ನಿಲುವನ್ನು ಸ್ಪಷ್ಟಪಡಿಸುವಿರಾ?
- ಇದು ಧಾರ್ಮಿಕ ಸಮಾವೇಶವೆಂದಾದರೆ, ಅದರ ವೇದಿಕೆಯಲ್ಲಿ ರಾಜಕೀಯ ವ್ಯಕ್ತಿಗಳ ಮತ್ತು ರಾಜಕೀಯ ಧನಬಲದ ಪ್ರಭಾವದ ಬಗ್ಗೆ ಪ್ರಶ್ನೆಗಳು ಏಕೆ ಉದ್ಭವಿಸುತ್ತವೆ?
- ಧರ್ಮರಕ್ಷಣೆಯ ಗುತ್ತಿಗೆಯನ್ನು ನಿಮಗೆ ಯಾರು ನೀಡಿದ್ದಾರೆ? ಧರ್ಮರಕ್ಷಣೆ ಎಂದರೆ ಎಲ್ಲರನ್ನೂ ಒಳಗೊಂಡ ಸಂವಾದವಲ್ಲವೇ?
- ನೀವು ಸಿದ್ಧೇಶ್ವರ ಸ್ವಾಮೀಜಿಯವರ ಶಿಷ್ಯರೆಂದು ಹೇಳಿಕೊಳ್ಳುವ ಸಂದರ್ಭದಲ್ಲಿ, ಪಾದಪೂಜೆ ಮಾಡಿಸಿಕೊಳ್ಳುವ ಆಚರಣೆಯನ್ನು ಹೇಗೆ ಸಮರ್ಥಿಸುತ್ತೀರಿ?
- ಗುರು–ಶಿಷ್ಯ ಪರಂಪರೆಯ ನಿಮ್ಮ ವ್ಯಾಖ್ಯಾನವೇನು?
- ಬಸವಾದಿ ಶರಣರ ಹೆಸರಿನಲ್ಲಿ ಸಮಾವೇಶ ನಡೆಸುವ ವೇದಿಕೆಯಲ್ಲಿ, ಬಸವಣ್ಣನವರನ್ನು ತಮ್ಮ ಗುರು ಎಂದು ಒಪ್ಪದ ಅಥವಾ ಬಸವತತ್ವದ ಕುರಿತು ಭಿನ್ನ ನಿಲುವು ಹೊಂದಿರುವ ಸ್ವಾಮಿಗಳೂ ಇದ್ದಾರೆ.
ಅದು ಅವರ ವೈಯಕ್ತಿಕ ನಿಲುವು. ಆದರೆ ಪ್ರಶ್ನೆ ಇಷ್ಟೇ: ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಸಮಾವೇಶಕ್ಕೆ, ಬಸವತತ್ವದ ಬಗ್ಗೆ ವಿರೋಧ ಹಾಗೂ ದ್ವೇಷದ ನಿಲುವು ಹೊಂದಿರುವವರನ್ನು ವೇದಿಕೆಗೆ ಕರೆತರುವ ಉದ್ಧೇಶವೇನು?
ಬಸವಣ್ಣ ಮತ್ತು ಶರಣರ ವಿಚಾರಧಾರೆಗೆ ನಿಜವಾದ ಗೌರವವಿದ್ದರೆ, ಅವರ ವಚನ, ತತ್ವ, ಕಾಯಕ, ದಾಸೋಹ, ಸಮಾನತೆ ಮತ್ತು ಇಷ್ಟಲಿಂಗದ ಸಂದೇಶಗಳ ಕುರಿತು ಮುಕ್ತ ಚರ್ಚೆ ನಡೆಯಲಿ.
ವೈಯಕ್ತಿಕ ನಿಂದನೆ ಬೇಡ. ದ್ವೇಷದ ಭಾಷೆ ಬೇಡ. ವಚನಗಳ ಮೂಲಕ ಮಾತನಾಡೋಣ.
ತತ್ವಗಳ ಮೂಲಕ ಉತ್ತರಿಸೋಣ. ದಾಖಲೆಗಳ ಮೂಲಕ ಚರ್ಚಿಸೋಣ. ಬಸವಣ್ಣ ಯಾರೊಬ್ಬರ ಸ್ವತ್ತಲ್ಲ; ಅವರ ವಿಚಾರಧಾರೆ ಎಲ್ಲರ ಅಧ್ಯಯನಕ್ಕೆ ತೆರೆದಿರುವ ಮಾನವೀಯ ಪರಂಪರೆ.

ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಶಿಷ್ಯ ಕಣ್ಣೀರಿ ಸ್ವಾಮಿ ಅವರು ಹಿಂದೂ ನಾಯಕ. ಅವರು ಲಿಂಗಾಯತ ಜನರನ್ನು ಹಿಂದೂ ಮಾಡಲು ಧರ್ಮದ ಹೆಸ್ರಲ್ಲಿ ಲಿಂಗಾಯತ ಹೇಳಿದ್ದು. ಈಗ ತಲಿಬಾನ್ ಬಿಟ್ಟು ಕಮಿನಸ್ಟ್ ಕಥೆ ಹೇಳುತ್ತಿದ್ದಾರೆ. ಅವರಿಗೆ ಯಾರು ಹೇಳಿದರು ಅಷ್ಟೇ ತಮ್ಮದೇ ಸರಿ ಎನ್ನುವರು. ನೀವು ಲಿಂಗಾಯತ ಧರ್ಮ ಹೋರಾಟ 2017 ರಲ್ಲಿ ಅವರನ್ನು ನಾಯ್ಕರನ್ನಾಗಿ ಮಾಡ್ಲಿಲ್ಲ ಅದರ ಪ್ರತಿ ಈಗ ಆ ವೇದಿಕೆ ಈ ರೂಪ ತಾಳಿ ಅತ್ರಪ್ತ ಸ್ವಾಮಿ ಗುಂಪು ಇದಾಗಿರಬಹುದು? 🙏🏻