ಬಸವಕಲ್ಯಾಣ:
12ನೇ ಶತಮಾನದ ಬಸವಾದಿ ಶರಣರು ಅನುಭವಮಂಟಪ ಕಟ್ಟಿ, ವಚನ ಸಾಹಿತ್ಯದ ಮೂಲಕ ಸಮಾನತೆಯ ಹೊಸ ಆಲೋಚನೆಗಳನ್ನು ಕಟ್ಟಿಕೊಟ್ಟ ಸ್ಥಳ ಬಸವಕಲ್ಯಾಣ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾಫ್ಟ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಿರ್ದೇಶಕಿ ಡಾ. ಸುಷ್ಮಾ ಎಚ್. ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಷ್ಟೆಲ್ಲ ಹೊಸ ಚಿಂತನೆಗಳು ವಚನಕಾರರು ಅಂದಿನ ಕಾಲದಲ್ಲಿಯೇ ಕಟ್ಟಿಕೊಟ್ಟಿದ್ದಾರೆ ಎಂಬುದೇ ನಮಗೆ ಬೆರಗಿನ ಸಂಗತಿ. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿರುವ ನೆಲವಾಗಿದೆ.
ಕಲ್ಯಾಣ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿದ ನೆಲ. ಸಮಾನತೆ, ಸ್ವಾತಂತ್ರ್ಯ, ಮಹಿಳಾ ಅಸ್ತಿತ್ವಕ್ಕೆ ಆದ್ಯತೆ ನೀಡಿದ ಇಲ್ಲಿ, ಬಸವಣ್ಣನವರಂತೆ ಕೌಶಲ್ಯ ಹೊಂದಿದವರು ಅನುಭವ ಮಂಟಪದಲ್ಲಿ ಸೇರಿದ್ದರು. ವಚನಕಾರರದು ಬೌದ್ಧಿಕ, ಆಧ್ಯಾತ್ಮಿಕ ಮತ್ತು ವೈಚಾರಿಕ ಕೌಶಲ್ಯವಾಗಿತ್ತು ಎಂದರು.
ಕೌಶಲ್ಯಾಧಾರಿತ ಶಿಕ್ಷಣ ಈ ಕಾಲಕ್ಕೆ ತುಂಬಾ ಮಹತ್ವ ಪಡೆದಿದೆ. ಇಂದು ವಿಕಸಿತ ಭಾರತದ ಕಲ್ಪನೆಯನ್ನು ಸಾಧಿಸಲು ದಾರಿಯಾಗಿದೆ. ತಂತ್ರಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ಧಿಯಿಂದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.
ವಾಣಿಜ್ಯ ವಿಷಯದ ವ್ಯಾಪ್ತಿ ದೊಡ್ಡದು. ಬ್ಯಾಂಕಿಂಗ್, ಆರ್ ಬಿಐ, ಐಟಿ, ಅಂತರರಾಷ್ಟ್ರೀಯ ಆರ್ಥಿಕತೆ ಸೇರಿ ಹಲವು ರಂಗಗಳಲ್ಲಿ ವಿದ್ಯಾರ್ಥಿಗಳು ಹೊಸ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಈ ಎಲ್ಲ ಸಂಗತಿಗಳು ಇಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಓದು-ಅಧ್ಯಯನದ ಜೊತೆಗೆ ತಂತ್ರಜ್ಞಾನದ ಅರಿವು ಮತ್ತು ಹೊಸ ಕೌಶಲಗಳನ್ನು ಕಲಿಯುವುದು ಈ ಕಾಲದ ಅನಿವಾರ್ಯವಾಗಿದೆ. ಮಾನವಿಕ ಅಧ್ಯಯನಗಳು ಮನುಷ್ಯ ಜಗತ್ತಿನ ವ್ಯವಹಾರ ಹಾಗೂ ಸಮಾಜದ ಗ್ರಹಿಕೆಗೆ ದಾರಿಯಾಗಿದೆ. ಲೋಕ ವ್ಯವಹಾರದ ಅರಿವಿಗಾಗಿ ತಂತ್ರಜ್ಞಾನ ಮತ್ತು ಕೌಶಲಗಳನ್ನು ಕಲಿಯಬೇಕು ಎಂದರು.
ಬಸವೇಶ್ವರ ಪಿಜಿ ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಪ್ರಿಯಾ ಚೌಹಾಣ, ಗುರುದೇವಿ ಕಿಚಡೆ, ನಾಗರಾಜ ನಾಸೆ, ಕೃಷ್ಣ ಗೌಳಿ, ಅಶೋಕ ರೆಡ್ಡಿ ಗದಲೇಗಾಂವ, ಪ್ರಭಾಕರ ನೌಗಿರೆ, ಶೃತಿ ನೀಲಮಠ, ನಾಗವೇಣಿ ವಟಗೆ ಮೊದಲಾದವರು ಇದ್ದರು.
ಐಕ್ಯುಎಸಿ ಸಂಯೋಜಕ ಪವನ್ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಸಾಲಿಮಠ ನಿರೂಪಿಸಿದರು. ರೋಷನ್ ಬಿ. ವಂದಿಸಿದರು.
