ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ: ಖಂಡ್ರೆ
ಬೀದರ್
ಅರಣ್ಯ ಸಚಿವ, ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಉಪ ಮುಖ್ಯಮಂತ್ರಿ ಮಾಡಲು ವಿವಿಧ ಮಠಾಧೀಶರು, ಕಾಂಗ್ರೆಸ್ ಕಾರ್ಯಕರ್ತರು ಬೇಡಿಕೆಯಿಟ್ಟಿದ್ದಾರೆ.

ಹೊಸ ಮುಖ್ಯಮಂತ್ರಿಯ ಆಯ್ಕೆಯ ಸಂದರ್ಭದಲ್ಲಿ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮೂರ್ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಹೊಸದಾಗಿ ರಚನೆ ಆಗಲಿರುವ ಕಾಂಗ್ರೆಸ್ ಸರಕಾರದಲ್ಲಿ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದ್ದಾರೆ.
ಮಾಧ್ಯಮಗಳಿಗೆ ನೀಡಿರುವ ಪ್ರಕಟಣೆಯಲ್ಲಿ ಖಂಡ್ರೆ ಅರಣ್ಯ ಇಲಾಖೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ವರೆಗೂ ಸರಕಾರ ಮತ್ತು ಪಕ್ಷ ನೀಡಿರುವ ಎಲ್ಲ ಹುದ್ದೆಗಳಿಗೆ ಗೌರವ ತಂದು ಕೊಡುವ ಕೆಲಸ ಮಾಡಿದ್ದಾರೆʼ ಎಂದು ತಿಳಿಸಿದ್ದಾರೆ.
“ಈಗಾಗಲೇ ಸತತ ಎರಡು ದಶಕಗಳಿಂದ ಶಾಸಕರಾಗಿ ಮತ್ತು ಎರಡು ಬಾರಿ ಸಚಿವರಾಗಿ, ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಲಿಂಗಾಯತ ಅತಿದೊಡ್ಡ ಸಮುದಾಯವಾಗಿದೆ. ಹಾಗಾಗಿ ಹಿರಿತನ, ಅನುಭವ, ಲಿಂಗಾಯತ ಸಮುದಾಯವನ್ನು ಪರಿಗಣಿಸಿ ಈಶ್ವರ ಖಂಡ್ರೆ ಅವರನ್ನು ಹೊಸ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರ ಜತೆಗೆ ಅತ್ಯುತ್ತಮ ಖಾತೆಯನ್ನು ನೀಡಬೇಕು” ಎಂದು ತಿಳಿಸಿದ್ದಾರೆ.
ಹುಲಸೂರ ಶ್ರೀ ಆಗ್ರಹ
ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಈಶ್ವರ ಖಂಡ್ರೆ ಅವರಂತಹ ಅನುಭವಿ ನಾಯಕತ್ವದ ಅಗತ್ಯವಿದೆ. ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಖಂಡ್ರೆ ಪರ ಘೋಷಣೆ
ಬೀದರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ್ ಅಪ್ಪೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಈಶ್ವರ ಖಂಡ್ರೆ ಅವರ ಫೋಟೊ ಕೈಯಲ್ಲಿ ಹಿಡಿದು ಡಿಸಿಎಂ ಮಾಡಬೇಕೆಂದು ಒತ್ತಾಯಿಸಿ ಈಶ್ವರ ಖಂಡ್ರೆ ಪರ ಘೋಷಣೆ ಕೂಗಿದರು.
ʼಖಂಡ್ರೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗದೇ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದ್ದಾರೆʼ ಎಂದು ಅಪ್ಪೆ ಹೇಳಿದರು.
ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆʼ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಮ್ಮ ಕರ್ನಾಟಕ ಸೇನೆ ಬೆಂಬಲ
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಖಂಡ್ರೆಗೆ ಬೆಂಬಲ ನೀಡಿದ್ದಾರೆ.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಲ್ಲೊಬ್ಬರಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಉಪ ಮುಖ್ಯಮಂತ್ರಿ ಹುದ್ದೆಗೆ ಅವರನ್ನು ಪರಿಗಣಿಸಬೇಕು” ಎಂದು ಒತ್ತಾಯಿಸಿದ್ದಾರೆ.
ವಿವಿಧ ಸಮಾಜಗಳ ಮುಖಂಡರ ಬೆಂಬಲ
ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಎರಡು ಬಾರಿ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ, ಎಂದು ಡಾ. ಸಿ.ಆನಂದರಾವ್, ಡಾ.ಹಣಮಶೆಟ್ಟಿ, ಡಾ.ಮಕ್ಸೂದ್ ಚಂದಾ, ಸಂಗಪ್ಪ ಪಾಟೀಲ ಮಾಮುಡ್ಗಿ ಹಾಗೂ ವೈಜಿನಾಥ ನಿಡೋದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಸರ್ಕಾರದಲ್ಲಿ ಖಂಡ್ರೆಗೆ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮುಸ್ಲಿಮ್ ಸಮುದಾಯದ ಮುಖಂಡ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಂ ಕೋರಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷ ಸ್ಥಾನವನ್ನು ಖಂಡ್ರೆ ಅವರಿಗೆ ನೀಡಿ ಎಂದು ಭಾಲ್ಕಿಯ ಕಾಂಗ್ರೆಸ್ ಮುಖಂಡರಾದ ಅಂಬರೀಶ ಮಲ್ಲೇಶಿ, ಅನಿಲ ಹಾಲ್ಲೆಪುರ್ಗೆ, ರಾಜಕುಮಾರ ಡಾವರಗಾಂವ್, ಸತೀಶ ಬೋಸ್ಲೆ, ನರೇಶ ಶಿಂಧೆ, ಪ್ರಶಾಂತ ಸೂರ್ಯವಂಶಿ, ಸೀಮನ್ ಸರಪಂಚ ಒತ್ತಾಯಿಸಿದ್ದಾರೆ.
ಜವಾಬ್ದಾರಿಗೆ ಸಿದ್ಧ
‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧನಿದ್ದೇನೆ’ ಎಂದು ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಈ ಹಿಂದೆ ಪೌರಾಡಳಿತ ಸಚಿವನಾಗಿ ಹಲವು ಸುಧಾರಣೆ ತಂದಿದ್ದೇನೆ. ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಮತ್ತು ಬಿಜೆಪಿ ಆಡಳಿತ ಇದ್ದಾಗ 5 ವರ್ಷಗಳ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ (ಮೇ 30) ಸಂಜೆ ಶಾಸಕಾಂಗ ಪಕ್ಷದ ಸಭೆ ಇದ್ದು, ಬೆಂಗಳೂರಿನಲ್ಲಿರುವಂತೆ ವರಿಷ್ಠರು ತಿಳಿಸಿದ್ದಾರೆ. ಆದಕಾರಣ ಇಲ್ಲೇ ಇದ್ದು, ನಾಳೆ ಸಭೆಯ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಪಕ್ಷ ನಿಷ್ಠರು ಮತ್ತು ದಕ್ಷತೆಯಿಂದ ಕೆಲಸ ಮಾಡಿದವರನ್ನು ಕಾಂಗ್ರೆಸ್ ಪಕ್ಷ ಸದಾ ಗುರುತಿಸಿ, ಸ್ಥಾನಮಾನ ನೀಡಿದೆ. ನಾನು ಪ್ರಸ್ತುತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನೂ ಆಗಿದ್ದು, ತಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರಕಬೇಕು. ಹೆಚ್ಚಿನ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದ್ದಾರೆ.
ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಕಾಯ, ವಾಚ, ಮನಸಾ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ವರಿಷ್ಠರು ಡಿಸಿಎಂ ಹುದ್ದೆ ಬಗ್ಗೆ ನಿರ್ಧರಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ, ನಾನು ಕಳೆದ 3 ವರ್ಷಗಳ ಕಾಲ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ಉತ್ತಮ ಕಾರ್ಯ ಮಾಡಿದ್ದೇನೆ. ಇಲಾಖೆಗೆ ಕಾಯಕಲ್ಪ ನೀಡಿದ್ದೇನೆ. ಈ ಹಿಂದೆ ಆಗದ ಹಲವು ಸುಧಾರಣೆ ತಂದ ತೃಪ್ತಿ ನನಗಿದೆ ಎಂದಿದ್ದಾರೆ.

ಆತ್ಮೀಯರೇ ಶರಣು ಶರಣಾರ್ಥಿಗಳು,
ನೋಡಿ ಈಗ ನಮ್ಮ ಬಸವಾದಿ ಶರಣರ ವಚನ ತತ್ವ ಸಿದ್ಧಾಂತದ ಲಿಂಗಾಯತ ಧರ್ಮಕೆ ಬದ್ದ ರಾಗಿ ಇರುವ ಏಕೈಕೆ ನಾಯಕರಾಗಿದ್ದು ಶರಣ ಶ್ರೀ ಮಾನ್ಯ M B ಪಾಟೀಲರು ಅವರಿಗೆ ಮುಖ್ಯ ಮಂತ್ರಿ ಯಾಗುವಾ ಯೋಗ್ಯತೆ ಇದೆ, ಮತ್ತು ಅಖಂಡ ಲಿಂಗಾಯತ ಧರ್ಮ ಸಮಾಜದ ಒಕ್ಕಟಿಗಾಗಿ ಕೆಲಸ ಮಾಡುತ್ತಾರೆ ,
ಆದರೆ ನಮ್ಮವರೇ ಆದ ಶರಣ ಶ್ರೀ ಮಾನ್ಯ ಈಶ್ವರ ಖಂಡ್ರೆ, ಅವರು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ, ಬಸವಾದಿ ಶರಣರ ಸಂಕಲ್ಪಕ್ಕೆ ವಿರೋಧ ವಾಗಿ ವೀರಶೈವ ಲಿಂಗಾಯತ ಎಂದು ಬೆಳಸಿ, ಅಖಂಡ ಲಿಂಗಾಯತ ಧರ್ಮದ ಜನ ಸಮುದಾಯದಲ್ಲಿ ಒಡಕು ಮಾಡಿ , ಅದರ ಲಾಭ ದಿಂದಾ, ರಾಜಕೀಯ ಅದಿಕಾರ ಪಡೆಯಲು ಒಡಕು ಮಾಡುತ್ತಿದ್ದಾರೆ , ಕಾರಣ ಅಖಂಡ ಲಿಂಗಾಯತ ಧರ್ಮ ಜನ ಸಮುದಾಯಕ್ಕೆ ಒಗ್ಗಟು ಮಾಡುವರಿಗೆ ಮಾತ್ರ ಲಿಂಗಾಯತ ಧರ್ಮದ ಜನರು, ಮತ್ತು ಮಠಾಧೀಶರು ಬೆಂಬಲಿಸಬೇಕು , adu ಮಾನ್ಯ ಶ್ರೀ M B ಪಾಟೀಲರಿಗೆ ಮಾತ್ರ ಬೆಂಬಲಿಸಿ ಉಪ ಮುಖ್ಯ ಮಂತ್ರಿ,, ಅಥವಾ ಮುಖ್ಯ ಮಂತ್ರಿ ಮಾಡಬೇಕೆಂದು ಲಿಂಗಾಯತ ಧರ್ಮ ಸಂಘ ಸಂಸ್ಥೆಗಳು ಆಗ್ರಹ ಮಾಡಬೇಕು,
ಮಠಾಧೀಶರ ಒಕ್ಕೂಟ ಯಾವುದೋ ಸ್ವಾರ್ಥಕೆ ಬೆಂಬಲಿಸಿದೆ , ಇದು ಸರಿ ಇಲ್ಲಾ , ಈಗ ಹೇಳಿಕೆ ಹಿಂಪಡೆದು , ಸರಿಯಾದ ಹೇಳಿಕೆ ಕೊಡಬೇಕು , ಇಲ್ಲ ದಿದ್ದರೆ , ನಮ್ಮ ಲಿಂಗಾಯತ ಮಠಾಧೀಶರ ಒಕ್ಕೂಟವೂ, ಲಿಂಗಾಯತ ಧರ್ಮದ ಜನರ ನಂಬಿಕೆ ಕಳೆದು ಕೇಳುತ್ತಾರೆ , ತಮ್ಮ ತಮ್ಮ ಸ್ವಾರ್ಥಕ್ಕೆ ಲಿಂಗಾಯತ ಧರ್ಮ ಒಡಕ್ಕು ಮಾಡಬೇಡಿ ಎಂದು ನನ್ನ ವಿನಂತಿ
ಶರಣು ಶರಣಾರ್ಥಿಗಳು