2025ರ ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ ನೀಡಲು ಆರೆಸ್ಸೆಸ್ ನಿರ್ಧಾರ

ಬಸವ ಮೀಡಿಯಾ
ಬಸವ ಮೀಡಿಯಾ

ನವದೆಹಲಿ

ಮುಂದಿನ ವರ್ಷ ಜನವರಿ ತಿಂಗಳಿಂದ ನಡೆಯಲಿರುವ ಪೂರ್ಣ ಕುಂಭಮೇಳಕ್ಕೆ ಕರ್ನಾಟಕದ ಲಿಂಗಾಯತರಿಗೆ ವಿಶೇಷ ಆಹ್ವಾನ ನೀಡಲು ಆರೆಸ್ಸೆಸ್ ನಿರ್ಧರಿಸಿದೆ.

12 ವರ್ಷಗಳಿಗೆ ಒಮ್ಮೆ ನಡೆಯುವ ಈ ಬೃಹತ್ ಮೇಳ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗರಾಜದಲ್ಲಿ ನಡೆಯಲಿದೆ.

ಮಥುರಾದಲ್ಲಿ ಇತ್ತೀಚೆಗೆ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಎರಡು ದಿನಗಳ ಸಭೆಯಲ್ಲಿ ಈ ನಿರ್ಧಾರವನ್ನು ಆರೆಸ್ಸೆಸ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆಗೆದುಕೊಂಡರೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಲಿಂಗಾಯತರಂತಹ ಹಲವು ಸಮುದಾಯಗಳು ಕುಂಭಮೇಳದಿಂದ ದೂರ ಉಳಿದಿವೆ. ಅವುಗಳಿಗೆ ವಿಶೇಷ ಅಹ್ವಾನ ನೀಡಿ ಹತ್ತಿರ ಕರೆದುಕೊಳ್ಳಲು ಶ್ರಮಿಸಬೇಕೆಂದು ಆದಿತ್ಯನಾಥ್ ಪ್ರಸ್ತಾವಿಸಿದರು. ಲಿಂಗಾಯತರು ಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಆರೆಸ್ಸೆಸ್ ಪ್ರಯತ್ನಿಸಿದರೆ ತಾವು ಅದಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ವತಿಯಿಂದ ಆಡಳಿತಾತ್ಮಕ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಈ ದಿಕ್ಕಿನಲ್ಲಿ ಆರೆಸ್ಸೆಸ್ ಕೂಡ ಕಾರ್ಯನಿರತವಾಗಿರುವುದರಿಂದ ಆದಿತ್ಯನಾಥ್ ಅವರ ಪ್ರಸ್ತಾವಕ್ಕೆ ತಕ್ಷಣ ಒಪ್ಪಿಗೆ ಸಿಕ್ಕಿತು ಎಂದು ವರದಿಯಾಗಿದೆ.

ಲಿಂಗಾಯತರ ರೀತಿಯಲ್ಲಿಯೇ, ಮಹಾರಾಷ್ಟ್ರದ ಕಾರ್ವಿಗಳು ಹಾಗೂ ಕೇರಳದ ಕೆಲವು ಜಾತಿಗಳನ್ನು ಕುಂಭಮೇಳಕ್ಕೆ ಕರೆದೊಯ್ಯಲು ಆರೆಸ್ಸೆಸ್ ಪ್ರಯತ್ನಿಸಲಿದೆ.

ಸ್ವಾಮಿನಾರಾಯಣ ಪಂಥ ಕೂಡ ಈ ಹಿಂದೆ ಕುಂಭ ಮೇಳದಿಂದ ದೂರ ಉಳಿದಿತ್ತು. ಆದರೆ ಆರೆಸ್ಸೆಸ್ನ ಶ್ರಮದಿಂದ ಅದು ಈಗ ಕುಂಭಮೇಳದಲ್ಲಿ ದೊಡ್ಡ ಪ್ರಮಾದಲ್ಲಿ ಭಾಗಿಯಾಗುತ್ತಿದೆ. ಅದೇ ರೀತಿ ಕರ್ನಾಟಕದ ಲಿಂಗಾಯತರೂ ಕ್ರಮೇಣ ಪಾಲ್ಗೊಳ್ಳಬಹುದೆಂಬ ಆಶಯ ಆದಿತ್ಯನಾಥ್ ಅವರು ವ್ಯಕ್ತ ಪಡಿಸಿದರು.

ಮಥುರಾ ಸಭೆಯ ಬಗ್ಗೆ ಮಾತನಾಡುತ್ತ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ “ಲಿಂಗಾಯತರು, ಆದಿವಾಸಿಗಳು ಮುಂತಾದವರನ್ನು ಹಲವು ನೂರು ವರ್ಷಗಳಿಂದಲೂ ಕುಂಭಮೇಳಕ್ಕೆ ಕರೆದಿಲ್ಲ. ಹೀಗಾಗಿ ಅವರು ಭಾಗವಹಿಸಿಲ್ಲ ಎಂದು ಆದಿತ್ಯನಾಥ್ ಹೇಳಿದರು. ಕುಂಭಮೇಳವು ಕೇವಲ ಧಾರ್ಮಿಕ ಉತ್ಸವ ಅಲ್ಲ, ಅದು ರಾಷ್ಟ್ರೀಯ ಏಕತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಸಂಗಮವೂ ಹೌದು ಎಂಬುದು ಆದಿತ್ಯನಾಥರ ಅಭಿಮತವಾಗಿತ್ತು. ನಾವು ನೆರವಾಗುತ್ತೇವೆ ಎಂದು ಭರವಸೆ ನೀಡಿದೆವು” ಎಂದು ಹೇಳಿದರು.

ಕರ್ನಾಟಕದಲ್ಲಿ ಲಿಂಗಾಯತ ಸಮಾಜದ ಪ್ರತ್ಯೇಕ ಧರ್ಮದ ಹೋರಾಟವನ್ನು ಹತ್ತಿಕ್ಕಲು ವಚನ ದರ್ಶನದಂತಹ ಪ್ರಯತ್ನಗಳನ್ನು ಆರೆಸ್ಸೆಸ್ ಮಾಡುತ್ತಿರುವ ಹಿನ್ನಲೆಯಲ್ಲಿ ಕುಂಭಮೇಳ ಹೊಸದಾಗಿ ಸೇರಿಕೊಂಡಿದೆ.

ಉತ್ತರಪ್ರದೇಶದ ಆಚೆಗೂ ತಮ್ಮ ನಾಯಕತ್ವದ ವರ್ಚಸ್ಸನ್ನು ಬೆಳೆಸಿಕೊಂಡು ರಾಷ್ಟ್ರಮಟ್ಟಕ್ಕೆ ವ್ಯಾಪಿಸುವುದು ಯೋಗಿಯವರ ಪ್ರಯತ್ನವಿದು ಎನ್ನಲಾಗಿದೆ.

ಉತ್ತರ ಪ್ರದೇಶದ ನಾಥ ಪಂಥದ ಗೋರಖನಾಥ ಮಠದ ಧಾರ್ಮಿಕ ಗುರುವಾಗಿರುವ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ ಭೈರವನ ಸಂಪ್ರದಾಯದ ಆದಿ ಚುಂಚನಗಿರಿ ಮಠದ ಜೊತೆ ಮತ್ತು ಒಕ್ಕಲಿಗ ಸಮುದಾಯದ ಜೊತೆ ಒಡನಾಟ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ.

ಆದರೆ ಒಕ್ಕಲಿಗರನ್ನು ಬಿಟ್ಟು ಲಿಂಗಾಯತರನ್ನು ಮಾತ್ರ ಕುಂಭಮೇಳಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಚರ್ಚೆ ಹುಟ್ಟು ಹಾಕಿದೆ.

Share This Article
7 Comments
  • ಸಂಘ ಪರಿವಾರ ಮತ್ತು ಯೋಗಿ ಆದಿತ್ಯನಾಥರ “ಹಿಂದೂ ನಾವೆಲ್ಲಾ ಒಂದು” ಎನ್ನುವ ಕೇವಲ ಪದಪ್ರಯೋಗಕ್ಕೆ ಸೀಮಿತವಾಗಿರುವ ಹಿಂದುತ್ವ ಅಜೆಂಡಾದ ಭಾಗ. ಮೊದಲು ಜಾತಿ ತಾರತಮ್ಯವನ್ನು ಎಲ್ಲಾ ದೇವಸ್ಥಾನ ಮತ್ತು ಮಠಗಳಲ್ಲಿ ಇರುವ ಆಚರಣೆಗಳನ್ನು ನಿಲ್ಲಿಸಲು ಇವರುಗಳು ಕೆಲಸ ಮಾಡಲಿ. ಒಟ್ಟಿಗೆ ಕುಳಿತು ಊಟ ಮಾಡುವ ವ್ಯವಸ್ಥೆಗಳನ್ನು ಜಾರಿಗೆ ತರಲಿ, ದೇವರು ಮತ್ತು ಸಂಪ್ರದಾಯದ ಹೆಸರುಗಳಲ್ಲಿ ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ನಿಲ್ಲಿಸಲಿ ಆನಂತರ ಎಲ್ಲರನ್ನೂ ಒಟ್ಟು ಮಾಡುವ ಕೆಲಸ ಮಾಡಲಿ. ಜನಸಾಮಾನ್ಯರು ಈಗಲೂ ಒಟ್ಟಿಗೆ ಇದ್ದಾರೆ.

    ಕುಂಭ ಮೇಳ ಆಚರಣೆಯ ಉದ್ದೇಶಗಳು ಹಾಗೂ ಇಲ್ಲಿಯತನಕ ಕೆಲವು ಜಾತಿಯ ಜನರನ್ನು ಹೊರಗೆ ಇಟ್ಟಿದ್ದ ಹಿಂದಿನ ಸಾಂಸ್ಕೃತಿಕ ರಾಜಕೀಯವನ್ನು ಮೊದಲು ಹೇಳಲಿ. ಇದು ಹಿಂದೂ ನಾವೆಲ್ಲಾ ಒಂದು ಎಂದು ಹೇಳಿಕೊಳ್ಳುತ್ತಾ ಮೇಲ್ವರ್ಗದ ಕೆಲವೇ ಸಮುದಾಯಗಳ ಕೈಯಲ್ಲಿ ರಾಜಕೀಯ ಅಧಿಕಾರವನ್ನು ಕೇಂದ್ರೀಕರಣಗೊಳಿಸಲು ನಡೆಸುತ್ತಿರುವ ಸಾಂಸ್ಕೃತಿಕ ರಾಜಕಾರಣ ಅಷ್ಟೆ. ಲಿಂಗಾಯತ/ಶರಣ ಸಮುದಾಯಕ್ಕೆ ಇಂತಹ ಆಚರಣೆಗಳಲ್ಲಿ ನಂಬಿಕೆ ಇಲ್ಲದಿರುವುದರಿಂದ ಭಾಗವಹಿಸದಿರುವುದು ಒಳ್ಳೆಯದು. ಕೆಲವು ಆಯ್ದ ಮಠಾಧೀಶರನ್ನು ಖಂಡಿತಾ ಅವರು ಕರೆದುಕೊಂಡು ಹೋಗುತ್ತಾರೆ. ಇಂತಹ ಬಸವತತ್ವ/ಶರಣತತ್ವಕ್ಕೆ ವಿರುದ್ಧವಾದ ಆಚರಣೆಗಳಲ್ಲಿ ಭಾಗಿಯಾಗುವ ಮಠಾಧೀಶರುಗಳನ್ನೂ ಸಮಾಜವು ಸಂಪೂರ್ಣವಾಗಿ ಬಹಿಷ್ಕರಿಸಬೇಕು. ಈ ನಿಟ್ಟಿನಲ್ಲಿ ಲಿಂಗಾಯತ ಸಂಘ ಸಂಸ್ಥೆಗಳು ಅದರಲ್ಲಿಯೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಡುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾವು ಎಲ್ಲಾ ಮಠಾಧೀಶರುಗಳಿಗೂ ಪತ್ರ
    ಬರೆಯುವುದು ಮತ್ತು ನಿಯೋಗದಲ್ಲಿ ಹೋಗಿ ಭೇಟಿಮಾಡಿ ಅವರುಗಳಿಗೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು.

  • ಕುಂಭ ಮೇಳ ಅಂತ ಕಾರ್ಯಕ್ರಮದಲ್ಲಿ ಲಿಂಗಾಯತರು
    ಭಾಗವಹಿಸಕೊಡದು ಕಾರಣ ಇದು ಬಸವ ತತ್ವಕ್ಕೆ ವಿರುದ್ದ
    ವಾದ ನಡೆ ಆರ್ ಎಸ್ ಎಸ್ ದಿಂದ ಆಹ್ವಾನ ಬಂದರೂ
    ಅದನ್ನು ನಾಡಿನ ಬಸವ ಪ್ರಣಿತ ಲಿಂಗಾಯತ ಧರ್ಮದ
    ಮಠಾಧೀಶರು, ರಾಜಕಾರಣಿಗಳು, ಮುಖಂಡರು, ಸಂಘಟನೆಯ ಮುಖ್ಯಸ್ಥರು ತಿರಸ್ಕರಿಸಬೇಕು.
    ಈ ಆಹ್ವಾನದ ಹಿಂದಿರುವ ಕುತಂತ್ರ ಅರಿಯಬೇಕು.
    ಶರಣ ಶ್ರೀಶೈಲ ಜಿ ಮಸೂತೆ ಲಿಂಗಾಯತ 🙏🙏

  • As a lingayatha I do attend, lingayathare bere Dharma antha mathaduvaru Islam hagu christian avra inda naditha iruva dharma badalavane madisuvadannu yake yetthi iditha illa, if you see hindu dharma only give respect or let survive nature to other dharmas , no other communities dharmas never give respect to lingayatha.

  • ಇದೇನಪ್ಪಾ ಹೊಸ ವಿಷಯ. ಲಿಂಗಾಯತರ ಮೇಲೆ ವಿಶೇಷ ಪ್ರೀತಿ. ಲಿಂಗಾಯತ ಧರ್ಮವನ್ನು ಕುಲಗೆಡಿಸುವ ಸಂಚು.ಶರಣರನ್ನು ಕಗ್ಗೊಲೆ ಮಾಡಿದ ವೈಧಿಕಶಾಯಿ ಸಂತಾನಿಗಳು ಶರಣರ ವಿಚಾರಧಾರೆಗಳನ್ನು ಹತ್ತಿಕ್ಕುವ ಸಂಚು.ಇವರು ಯಾವತ್ತಿದ್ದರೂ ಲಿಂಗಾಯತ ಧರ್ಮದ ವಿರೋಧಿಗಳು ಇವರ ಸಹವಾಸದಿಂದ ಲಿಂಗಾಯತ ಧರ್ಮಿಯರು ದೂರ ಇರುವುದೇ ಕ್ಷೇಮ.
    “ಶರಣು ಶರಣಾರ್ಥಿಗಳು’.

  • ತೊರೆಯುವ ಮೀವ ಅಣ್ಣಗಳಿರಾ
    ತೊರೆಯಮೀವ ಸ್ವಾಮಿಗಳಿರ ತೊರೆಯಿಂಬೋ……..ಪರಾರಿಯಾದ ಸಂಗವ
    ತೊರೆಯಿಂಬೋ ಪರಧನದಾಮಿಷವ……..
    ಎಂಬ ಗುರು ಬಸವಣ್ಣನವರ ಪಥದಲ್ಲಿ ನಡೆಯುವವರು ಅರ್ತವಿಲ್ಲದ ‘ಕುಂಭ ಮೇಳ’ ಗಳಂತಹ ಕಟ್ಟು ಪಾಡಿನ ಸಂಪ್ರದಾಯಗಳಲ್ಲ್ಲಿ ಭಾಗವಹಿಸುವುದಿಲ್ಲ….
    ವೈದಿಕರ ಗಾಳಕ್ಕೆ ಸಿಕ್ಕಿ ಹಾಕಿಕೊಳ್ಳುವವರಲ್ಲ ‘ಬಸವ ಧರ್ಮಿಯರು’

  • ಅಯೋಧ್ಯೆಯಲ್ಲಿ ರಾಮದೇವರ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ಲಿಂಗಾಯಿತ ಮಠಾಧಿಪತಿಗಳು ಭಾಗವಹಿಸಿದ ಕಾರಣಕ್ಕಾಗಿ ಇಂದು ಕುಂಭಮೇಳಕ್ಕೆ ಲಿಂಗಾಯಿತ ಧರ್ಮೀಯರನ್ನು ಆಹ್ವಾನಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಸಿಖ್ ಧರ್ಮೀಯರನ್ನು ನೋಡಿ ಕಲಿಯಬೇಕಾದ ಬಹಳಷ್ಟು ಇದೆ. ಅವರಿಗಿಲ್ಲದ ಭಯ ನಮಗೇಕೆ. ಸುತ್ತೂರು ಸ್ವಾಮಿಗಳು ರಾಮ ಮಂದಿರದ ಉದ್ಘಾಟನೆಗೆ ಹೋಗಿ ಬಂದಿದ್ದರು. ಈಗ ಮತ್ತೊಮ್ಮೆ ಕುಂಭಮೇಳಕು ಹೋಗಬಹುದೇನೋ. ಎಚ್ಚರಿಕೆಯ ನಡೆಯಿಂದ ನಡೆಯದಿದ್ದರೆ ಬಸವಣ್ಣನವರನ್ನು ವಚನ ಸಾಹಿತ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವರ ಚಿಂತೆ ನಮಗೇಕೆ?

Leave a Reply

Your email address will not be published. Required fields are marked *